ಭಟ್ಕಳ ಕ್ಷೇತ್ರದಲ್ಲಿ ಶೇ. 76 ಮತದಾನ

| Published : May 09 2024, 01:03 AM IST

ಸಾರಾಂಶ

78ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ. 80ಕ್ಕಿಂತಲೂ ಹೆಚ್ಚು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಮತದಾನವಾಗಿರುವುದು ವಿಶೇಷ.

ಭಟ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟೂ 2,27,706 ಮತದಾರರಲ್ಲಿ 1,73,071 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 76.01 ಮತದಾನ ಆಗಿದೆ.

ಎಲ್ಲೂ ಗೊಂದಲ ಉಂಟಾಗದೇ ಶಾಂತಿಯುತವಾಗಿ ಮತದಾನ ಆಗಿದೆ. ಒಟ್ಟೂ 1,15,172 ಪುರುಷರಲ್ಲಿ 85,124 ಹಾಗೂ 1,12,534 ಮಹಿಳೆಯರಲ್ಲಿ 87,947 ಮತದಾರರು ಮತದಾನ ಮಾಡುವ ಮೂಲಕ ಮಹಿಳೆಯರೇ ಹೆಚ್ಚು ಮತದಾನ ಮಾಡಿದಂತಾಗಿದೆ.

ಮತದಾನದಲ್ಲಿ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಮಹಿಳೆಯರೇ ಹೆಚ್ಚು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದರು. ಒಟ್ಟೂ 248 ಮತಗಟ್ಟೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ಹದ್ಲೂರು ಇಲ್ಲಿ ಶೇ. 89.73 ಅತಿ ಹೆಚ್ಚು ಮತದಾನವಾದರೆ, ಅಂಜುಮನ್ ತಕಿಯಾ ಉರ್ದು ಪ್ರಾಥಮಿಕ ಶಾಲೆ, ತಕಿಯಾ ಸ್ಟ್ರೀಟ್ (ಪಶ್ಷಿಮ ಭಾಗ) ಕೇವಲ ಶೇ. 60.29 ಮತದಾನವಾಗುವ ಮೂಲಕ ಅತಿ ಕಡಿಮೆ ಮತದಾನವಾದ ಕೇಂದ್ರವಾಗಿದೆ.

78ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ. 80ಕ್ಕಿಂತಲೂ ಹೆಚ್ಚು ಮತದಾನವಾಗಿದೆ. ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಮತದಾನವಾಗಿರುವುದು ವಿಶೇಷ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ವಿವಿಧ ಕಾರಣಕ್ಕೆ 54,635 ಮತದಾರರು ತಮ್ಮ ಹಕ್ಕು ಚಲಾಯಿಸಿಲ್ಲ. ಚುನಾವಣೆ ಆಯೋಗ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದಲ್ಲದೇ ಸ್ಥಳೀಯವಾಗಿ ಹಲವು ಕಾರ್ಯಕ್ರಮ ಏರ್ಪಡಿಸಿ ಗಮನ ಸೆಳೆದಿದ್ದನ್ನು ಸ್ಮರಿಸಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ 129 ಮತಗಟ್ಟೆಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಮತದಾನವಾಗಿದ್ದರೆ, 14 ಮತಗಟ್ಟೆಗಳಲ್ಲಿ ಶೇ. 90ಕ್ಕೂ ಹೆಚ್ಚು ಮತದಾನವಾಗಿತ್ತು. ವಿಧಾನಸಭಾ ಚುನಾವಣೆಗೆ ಹೋಲಿಸಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಆದರೂ ಕಳೆದ ಲೋಕಸಭಾ ಚುನಾವಣೆಗಿಂತ ಮತದಾನ ಪ್ರಮಾಣ ಏರಿಕೆ ಆಗಿದೆ.