ಲೋಕ ಕದನಕ್ಕೆ ಗೆಲುವಿನ ಲೆಕ್ಕಾಚಾರ ಜೋರು!

| Published : May 09 2024, 01:06 AM IST

ಸಾರಾಂಶ

ಲೋಕಸಭಾ ಚುನಾವಣಾ ಮತದಾನ ಮುಗಿದ ಹಿನ್ನೆಲೆ ಎಲ್ಲ ಪಕ್ಷದ ನಾಯಕರು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದು, ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿಗಳು ತಮ್ಮ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಕಸಭಾ ಚುನಾವಣಾ ಮತದಾನ ಮುಗಿದ ಹಿನ್ನೆಲೆ ಎಲ್ಲ ಪಕ್ಷದ ನಾಯಕರು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದು, ಅಬ್ಬರದ ಪ್ರಚಾರ ನಡೆಸಿದ ಅಭ್ಯರ್ಥಿಗಳು ತಮ್ಮ ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

ಬಿಸಿಲ ತಾಪಕ್ಕೆ ಹೈರಾಣಗಿದ್ದ ಕಾರ್ಯಕರ್ತರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅಲ್ಲಿಂದಲೇ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇತ್ತ ರಾಜಕೀಯ ಮುಖಂಡರು ಬೂತ್‌ ಮಟ್ಟದ ಮಾಹಿತಿ ಕಲೆ ಹಾಕುತ್ತಿರುವುದು ಮುಂದುವರಿದಿದೆ.ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಯಕ್ಸಂಬಾ ಹಾಗೂ ಭೀವಶಿ ಫಾರ್ಮ್‌ಹೌಸ್‌ನಲ್ಲಿ ಕೆಲಸ ಕಾಲ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದರೇ, ನಿಪ್ಪಾಣಿ ಕ್ಷೇತ್ರದ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಚುನಾವಣೆ ಮುಗಿಸಿ ಬುಧವಾರ ಬೆಳಗಿನ ಜಾವ ಯಕ್ಸಂಬಾದ ತಮ್ಮ ಫಾರ್ಮ್‌ಹೌಸ್‌ನಲ್ಲಿ ಬಸವಪ್ರಸಾದ ಜೊಲ್ಲೆ, ಯಶಸ್ವಿನಿ ಜೊಲ್ಲೆ, ಪ್ರಿಯಾ ಜೊಲ್ಲೆಯವರೊಂದಿಗೆ ಕೆಲಕಾಲ ರಿಲ್ಯಾಕ್ಸ್ ಮೂಡ್‌ನಲ್ಲಿ ಕಾಲ ಕಳೆದರು. ಸಚಿವ ಸತೀಶ ಜಾರಕಿಹೊಳಿ ಗೋಕಾಕ ನಗರದಲ್ಲಿರುವ ಶೆಟ್ಟಿ ಸ್ವೀಟ್ ಮಾರ್ಟ್ ಅಂಗಡಿಗೆ ತೆರಳಿ ಅಲ್ಲಿ ಕೆಲಹೊತ್ತು ಕುಳಿತು ತಮ್ಮ ಸ್ನೇಹಿತರೊಂದಿಗೆ ಚರ್ಚೆ ನಡೆಸಿದರು.

ಕೈ-ಕಮಲದ ನಡುವೆ ನೇರ ಹಣಾಹಣಿ:

ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭಾ ಚುನಾವಣಾ ಅಖಾಡ ಸಾಕಷ್ಟು ರಂಗೇರುವಂತೆ ಮಾಡಿತ್ತು. ಘಟಾನುಘಟಿ ನಾಯಕರು ಆಗಮಿಸಿದ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ಪ್ರಚಾರ ಮಾಡಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಪ್ರಚಾರ ಮಾಡಿದರು. ಈಗ ಅಂತಿಮವಾಗಿ ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆದಿದ್ದು, ಜೂ.4ಕ್ಕೆ ಫಲಿತಾಂಶ ಹೊರಬೀಳಲಿದೆ.

ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ ನಡುವೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮತ್ತು ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳಕರ ನಡುವೆ ನೇರಾನೇರ ಹಣಾಹಣಿ ಇದೆ. ಮತದಾರ ಪ್ರಭುಗಳು ಯಾರ ಕೊರಳಿಗೆ ವಿಜಯದ ಮಾಲೆ ಹಾಕುತ್ತಾರೆನ್ನುವುದನ್ನು ಕಾಯ್ದು ನೋಡಬೇಕಾಗಿದೆ.ಎಂಇಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ:

ಬೆಳಗಾವಿ ಲೋಕಸಭಾ ಚುನಾವಣೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪಾಲಿಗೆ ಅತ್ಯಂತ ನಿರ್ಣಾಯಕ ಚುನಾವಣೆಯಾಗಿದೆ. ತಮ್ಮ ರಾಜಕೀಯ ಪುನರ್‌ ನೆಲೆಗಾಗಿ ಬಂದಿದ್ದು, ಬೆಳಗಾವಿ ರಾಜಕೀಯ ಒಲಿಯುತ್ತದೆಯೋ? ಇಲ್ಲವೋ ಎಂಬುವುದು ಕುತೂಹಲ ಕೆರಳಿಸುವಂತೆ ಮಾಡಿದೆ. ಹಾಗೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಪುತ್ರ, ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಗೆಲುವಿಗೆ ಇನ್ನಿಲ್ಲದ ಕಸರತ್ತು ಮಾಡಿರುವುದು ಈ ಚುನಾವಣೆಯನ್ನು ಭಾರಿ ಪ್ರತಿಷ್ಠೆಯಾಗಿ ತೆಗೆದುಕೊಂಡಂತಾಗಿದೆ. ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಕೂಡ ಅಳಿಯ ಮೃಣಾಲ್‌ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದರು. ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಳಗಾವಿ ಅಖಾಡಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಅಭ್ಯರ್ಥಿ ಕಣಕ್ಕಿಳಿಸಿದರೂ ಈ ಬಾರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಆದರೆ, ಮರಾಠ ಮತಗಳು ಯಾರಿಗೆ ಬಿದ್ದಿವೆ ಎನ್ನುವುದು ಮಾತ್ರ ಕುತೂಹಲ ಕೆರಳಿಸುವಂತೆ ಮಾಡಿದೆ.ಪಂಚ್‌ ಗ್ಯಾರಂಟಿಗೋ? ಮೋದಿ ನಾಯಕತ್ವಕ್ಕೋ ಜೈ?:

ಚಿಕ್ಕೋಡಿ ಲೋಕಸಭಾ ಚುನಾವಣಾ ಆಖಾಡದಲ್ಲಿಯೂ ಕಾಂಗ್ರೆಸ್‌- ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಮರು ಆಯ್ಕೆ ಬಯಸಿದರೆ, ಸಚಿವ ಸತೀಶ ಜಾರಕಿಹೊಳಿ ಪುತ್ರಿ, ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಶಂಭು ಕಲ್ಲೋಳಿಕರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ತಮ್ಮ ಪುತ್ರಿಯ ಗೆಲುವಿಗೆ ಕ್ಷೇತ್ರದಲ್ಲೇ ಇದ್ದು ಹಗಲು-ರಾತ್ರಿ ಕಸರತ್ತು ನಡೆಸಿದ್ದಾರೆ. ಚಿಕ್ಕೋಡಿ ಕ್ಷೇತ್ರದ ಮತದಾನ ಶೇ.78.66 ರಷ್ಟು ಆಗುವ ಮೂಲಕ ದಾಖಲೆ ಸೃಷ್ಟಿಸಿದೆ. ಮತದಾನ ಪ್ರಮಾಣ ಹೆಚ್ಚಳವಾಗಿರುವುದು ಪಕ್ಷಕ್ಕೆ ಅನುಕೂಲವಾಗುತ್ತದೆಂಬ ರಾಜಕೀಯ ಲೆಕ್ಕಾಚಾರವು ಕುತೂಹಲವನ್ನುಂಟು ಮಾಡಿದೆ. ಚಿಕ್ಕೋಡಿಯಲ್ಲಿ ತೀವ್ರ ತುರುಸಿನ ಚುನಾವಣೆ ನಡೆದಿತ್ತು. ಮತದಾರ ಪ್ರಭುಗಳು ಮಾತ್ರ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ರಾಜ್ಯ ಸರ್ಕಾರದ ಪಂಚ್‌ ಗ್ಯಾರಂಟಿಗಳಿಗೆ ಜೈ ಎನ್ನುತ್ತಾರೋ? ಇಲ್ಲವೇ ಮೋದಿ ನಾಯಕತ್ವಕ್ಕೆ ಜೈ ಎನ್ನುತ್ತಾರೋ ಎಂಬುವುದನ್ನು ಕಾಯ್ದು ನೋಡಬೇಕಾಗಿದೆ. ಬೆಳಗಾವಿ ಮತ್ತು ಚಿಕ್ಕೋಡಿಯಿಂದ ಯಾರು ಗೆಲ್ಲುತ್ತಾರೆ ಎನ್ನುವ ಕೂತುಹಲ ಜೂ.4 ರವರೆಗೆ ಮುಂದುವರೆಯಲಿದೆ.ಮಂಗಳವಾರ ಬೆಳಗ್ಗೆ ಎಲ್ಲ ಕಡೆ ನಾನು ಸುತ್ತು ಹಾಕಿದಾಗ ನಮ್ಮ ಕಾರ್ಯಕರ್ತರಲ್ಲಿ ಒಂದು ಆತ್ಮವಿಶ್ವಾಸ ಮೂಡಿತ್ತು. ಜನ ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಕಾರಣದಿಂದ ಹಣ ಎಲ್ಲಿ ಹಂಚಿದ್ದಾರೋ ಅಲ್ಲಿ ಹಣದ ಪ್ರಭಾವ ಆಗಿಲ್ಲ. ನೂರಕ್ಕೆ ನೂರು ಬಿಜೆಪಿ ಗೆಲ್ಲುವ ವಾತಾವರಣ ಇಡೀ ಕ್ಷೇತ್ರದಲ್ಲಿ ನಿರ್ಮಾಣ ಆಗಿತ್ತು. ಗೋಕಾಕ, ಅರಬಾವಿ ಮುಗಿಸಿ ಮತದಾನ ಮುಗಿದ ಬಳಿಕ ಬೆಳಗಾವಿಗೆ ಬಂದಾಗ ಹಲವು ನಾಯಕರು ಭೇಟಿಯಾಗಿ, ಮತ್ತೆ ಕೆಲವರು ನನಗೆ ಕರೆ ಮಾಡಿ ಬಿಜೆಪಿ ಬಗ್ಗೆ ಮಾತನಾಡಿರುವುದು ನಮಗೆ ಆಶ್ಚರ್ಯ ಆಗಿದೆ.

- ಜಗದೀಶ ಶೆಟ್ಟರ್‌,

ಬೆಳಗಾವಿ ಬಿಜೆಪಿ ಅಭ್ಯರ್ಥಿ.