ಜನ್ಮದಾಖಲೆ ನೀಡುವಂತೆ ಜಿಲ್ಲಾಧಿಕಾರಿಗೆ ಮೊರೆ

| Published : May 09 2024, 01:06 AM IST

ಜನ್ಮದಾಖಲೆ ನೀಡುವಂತೆ ಜಿಲ್ಲಾಧಿಕಾರಿಗೆ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ನಿರ್ಮಲಾ ಉಪ್ಪಾರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ನೇಲ್‌ ರೊಡ್ರಿಗ್ಸ್‌ ಕೋರಿದ್ದಾರೆ.

ಕುಮಟಾ: ಕುಟುಂಬವೊಂದಕ್ಕೆ ಪುರಸಭೆಯಿಂದ ನೀಡಬೇಕಿದ್ದ ಜನ್ಮದಾಖಲೆಯನ್ನು ನೀಡದೇ ಅಲಭ್ಯ ಪ್ರಮಾಣಪತ್ರ ನೀಡಿ ಅನ್ಯಾಯವೆಸಗಿದ್ದು, ಈ ಬಗ್ಗೆ ಹೋರಾಟ ನಡೆಸಿರುವ ಸಂತ್ರಸ್ತ ಕುಟುಂಬವು ಜಿಲ್ಲಾಧಿಕಾರಿಗಳಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದಿದ್ದಾರೆ ಎಂದು ಜನಸಾಮಾನ್ಯರ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್‌ ರೊಡ್ರಿಗ್ಸ್‌ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ವಿವರಿಸಿದ ಅವರು, ಪಟ್ಟಣದ ಡಾ. ಮಣಕಿಕರ ಆಸ್ಪತ್ರೆಯಲ್ಲಿ 2022ರ ಮಾ. ೯ರಂದು ಸ್ಥಳೀಯ ನಿರ್ಮಲಾ ಸಂತೋಷ ಉಪ್ಪಾರ ಎಂಬ ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದರು. ಬಳಿಕ ಅವರ ಅನಾರೋಗ್ಯ ಹಾಗೂ ಕೌಟುಂಬಿಕ ಪರಿಸ್ಥಿತಿ ಸರಿ ಇಲ್ಲದ್ದರಿಂದ ಮನೆ ಸೇರಿದ್ದ ನಿರ್ಮಲಾ ಉಪ್ಪಾರ ಕುಟುಂಬ ಕೆಲ ತಿಂಗಳ ಹಿಂದೆ ಮಗುವಿನ ಜನನ ಮಾಹಿತಿಯನ್ನು ಪುರಸಭೆಗೆ ಸಲ್ಲಿಸುವಂತೆ ಡಾ. ಮಣಕಿಕರ ಆಸ್ಪತ್ರೆಗೆ ವಿನಂತಿಸಿದ್ದರು. 2024ರ ಫೆ. ೩ರಂದು ಡಾ. ಮಣಕಿಕರ ಆಸ್ಪತೆಯ ವೈದ್ಯರಾದ ಡಾ. ಪ್ರಶಾಂತ ಕೆ. ಮಣಕಿಕರ ಅವರು ಪುರಸಭೆಯ ಜನನ- ಮರಣ ನೋಂದಣಾಧಿಕಾರಿ ಅವರಿಗೆ ಲಿಖಿತ ಪತ್ರ ಬರೆದು ಜನ್ಮ ಮಾಹಿತಿ ನೀಡಿದ್ದರು.

ಆದರೆ ಪುರಸಭೆಯಲ್ಲಿ ಮಗುವಿನ ಜನ್ಮ ದಾಖಲೆ ಕೇಳಿದರೆ ಅಲಭ್ಯ ಪ್ರಮಾಣಪತ್ರ ನೀಡಿದ್ದಾರೆ. ಇದರಿಂದ ಮಗುವಿನ ಭವಿಷ್ಯಕ್ಕೆ ತೊಂದರೆ ನೀಡಿ ಅನ್ಯಾಯ ಮಾಡಿದ್ದಾರೆ ಎಂದು ನಿರ್ಮಲಾ ಸಂತೋಷ ಉಪ್ಪಾರ ಕುಟುಂಬವು ನಮ್ಮ ಜನಸಾಮಾನ್ಯರ ಕಲ್ಯಾಣ ಕೇಂದ್ರದಲ್ಲಿ ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. ಅದರಂತೆ ವಿಚಾರಿಸಲಾಗಿ, ನಿರ್ಮಲಾ ಉಪ್ಪಾರ ಕುಟುಂಬಕ್ಕೆ ಪುರಸಭೆಯವರು ಜನನ ಅಲಭ್ಯ ಪ್ರಮಾಣಪತ್ರ ನೀಡಿ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಜನಸಾಮಾನ್ಯರ ಕಲ್ಯಾಣ ಕೇಂದ್ರದ ಮೂಲಕ ಜಿಲ್ಲಾಧಿಕಾರಿ ಅವರಿಗೆ ನ್ಯಾಯಕ್ಕಾಗಿ ನಿರ್ಮಲಾ ಈಶ್ವರ ಉಪ್ಪಾರ ಕುಟುಂಬದಿಂದ ಮನವಿ ಪತ್ರ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ ನಿರ್ಮಲಾ ಉಪ್ಪಾರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ನೇಲ್‌ ರೊಡ್ರಿಗ್ಸ್‌ ಕೋರಿದ್ದಾರೆ. ಈ ವೇಳೆ ನಿರ್ಮಲಾ ಉಪ್ಪಾರ, ಈಶ್ವರ ಉಪ್ಪಾರ, ನೀಲಾ ಉಪ್ಪಾರ, ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಇದ್ದರು.ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಕುಟುಂಬದ ಸದಸ್ಯರು ಹಾಗೂ ಆಗ್ನೇಲ್‌ ರೊಡ್ರಿಗ್ಸ್‌ ಇದ್ದರು.