ಶಾ ರ್‍ಯಾಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ: ತೇಜಸ್ವಿ

| Published : Apr 25 2024, 02:00 AM IST / Updated: Apr 25 2024, 06:51 AM IST

ಸಾರಾಂಶ

ದೇಶದ ಭದ್ರತೆ, ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸಿ ಮೋದಿ ಅವರಿಗೆ ಜನರ ಆಶಯ ಈಡೇರಿಕೆ ಮಾಡಲಾಗಿದೆ ಎಂದು ಎನ್‌ಡಿಎ ಅಭ್ಯರ್ಥಿ ತಿಳಿಸಿದ್ದಾರೆ.

 ಬೆಂಗಳೂರು :  ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಗೋವಿಂದರಾಜ ನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಿಂಚಿನ ಪ್ರಚಾರ ನಡೆಸಿದರು.

ಪಕ್ಷದ ಕಾರ್ಯಕರ್ತರೊಂದಿಗೆ ಬೈಕ್ ರ್‍ಯಾಲಿ ನಡೆಸಿದ ಅವರು ದೇಶದ ಭವಿಷ್ಯಕ್ಕಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿಯನ್ನು ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಮಂಗಳವಾರ ಬೊಮ್ಮನಹಳ್ಳಿಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ, ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಜನರ ಉತ್ಸಾಹ, ಮುಗಿಲು ಮುಟ್ಟಿದ ಸಂಭ್ರಮೋಲ್ಲಾಸ ಕಂಡು ಅಮಿತ್ ಶಾ ಖುಷಿ ಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದರು.

ಭಾರತ ಮತ್ತೆ ವಿಶ್ವಗುರುವಿನ ಪ್ರಧಾನ ಪಾತ್ರ ವಹಿಸುವತ್ತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡ ನೀತಿಗಳು ಮತ್ತು ಕ್ರಮಗಳು ಕೇಂದ್ರೀಕೃತವಾಗಿವೆ. ಮೋದಿ ನಾಯಕತ್ವದಲ್ಲಿ ಜನರ ಆಕಾಂಕ್ಷೆಗಳು ಮತ್ತು ಆಶೋತ್ತರಗಳು ಸಾಕಾರಗೊಳ್ಳುತ್ತಿವೆ ಎಂದು ಹೇಳಿದರು.

500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಪುನರ್ ನಿರ್ಮಾಣಗೊಂಡು ವಿಶ್ವದ ಗಮನ ಸೆಳೆದಿದೆ. ಅಯೋಧ್ಯೆ ಈಗ ಹಿಂದೂಗಳ ಪ್ರಮುಖ ತೀರ್ಥ ಕ್ಷೇತ್ರವಾಗಿ ಬದಲಾಗಿದೆ. ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370 ವಿಧಿ ರದ್ದುಗೊಂಡಿದೆ. ತ್ರಿವಳಿ ತಲಾಖ್ ಇಲ್ಲವಾಗಿದೆ. ಕಪ್ಪುಹಣ ಹಾವಳಿ ನಿಯಂತ್ರಣವಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಸಾಧ್ಯವಾಗಿದೆ ಎಂದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ನೀಡಿರುವ ಕೊಡುಗೆಗಳ ಕುರಿತು ಪ್ರಸ್ತಾಪಿಸಿದ ಅವರು, ‘ಬೆಂಗಳೂರಿನಲ್ಲಿ ಮೂಲಸೌಕರ್ಯಕ್ಕೆ ಪ್ರಧಾನಿಯವರು 1.30 ಲಕ್ಷ ಕೋಟಿ ರೂ. ಒದಗಿಸಿದ್ದಾರೆ. ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆಯ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ದಕ್ಷಿಣ ಭಾಗಕ್ಕೆ ಪ್ರಮುಖವೆನಿಸಿರುವ ಆರ್.ವಿ.ರಸ್ತೆ-ಎಲೆಕ್ಟ್ರಾನಿಕ್ ರಸ್ತೆ ನಡುವಿನ ಹಳದಿ ಮಾರ್ಗ ಬರುವ ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಯಾಗಲಿದೆ. ಸಿಲ್ಕ್ ಬೋರ್ಡ್ ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ 58 ಕಿ.ಮೀ ಉದ್ದ ಮಾರ್ಗದ ಶೇ.50ಕ್ಕೂ ಹೆಚ್ಚು ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. 148 ಕಿ.ಮೀ ಉದ್ದದ ಸಬ್ಅರ್ಬನ್ ರೈಲ್ವೆ ಯೋಜನೆಗೂ ಈಗಾಗಲೇ ಮಂಜೂರಾತಿ ದೊರೆತಿದೆ. ಈ ಯೋಜನೆಗಳು ಪೂರ್ಣಗೊಂಡರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಹೇಳಿದರು

ಮತದಾನದ ದಿನವನ್ನು ರಜೆಯೆಂದು ಭಾವಿಸದೆ, ಎಲ್ಲರೂ ಮತಕೇಂದ್ರಗಳಿಗೆ ತೆರಳಿ ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ಇದೇ ವೇಳೆ ತೇಜಸ್ವಿ ಸೂರ್ಯ ಮನವಿ ಮಾಡಿದರು.

ರ್‍ಯಾಲಿಯಲ್ಲಿ ಬಿಜೆಪಿ ಮುಖಂಡರಾದ ಎಚ್‌.ರವೀಂದ್ರ, ಉಮೇಶ್ ಶೆಟ್ಟಿ, ಜೆಡಿಎಸ್ ಮುಖಂಡ ಆರ್.ಪ್ರಕಾಶ್‌ ಮತ್ತಿತರರು ಪಾಲ್ಗೊಂಡಿದ್ದರು