ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿ ಜಿಲ್ಲೆಗೆ ಕಾರ್ಕಳ ತಾಲೂಕು ಪ್ರಥಮ

| Published : May 10 2024, 01:32 AM IST

ಸಾರಾಂಶ

ಈ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.96.3 ಫಲಿತಾಂಶ ಕಾರ್ಕಳ ಇತಿಹಾಸದಲ್ಲೇ ಉತ್ತಮ ದಾಖಲೆಯಾಗಿದೆ. ಈ ಸಾಧನೆಯೊಂದಿಗೆ ತಾಲೂಕು ಶ್ರೇಷ್ಠ ಸಾಧನೆ ಮಾಡಿದಂತಾಗಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಅದರಲ್ಲಿ ಕಾರ್ಕಳ ಶಿಕ್ಷಣಾಧಿಕಾರಿ ವ್ಯಾಪ್ತಿಯ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಜಿಲ್ಲೆಗೆ ಅಗ್ರಸ್ಥಾನ ಪಡೆದಿದೆ.ಈ ಬಾರಿ ಕಾರ್ಕಳ ತಾಲೂಕಿನಲ್ಲಿ 1398 ಬಾಲಕರು, 1327 ಬಾಲಕಿಯರು ಸೇರಿ ಒಟ್ಟು 2725 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 1322 ಬಾಲಕರು, 1301 ಬಾಲಕಿಯರು ಸೇರದಂತೆ ಒಟ್ಟು 2623 ಮಂದಿ ಉತ್ತೀರ್ಣರಾಗಿ ಶೇ.96.3 ಫಲಿತಾಂಶ ಪಡೆದಿದೆ. ಈ ಮೂಲಕ ಜಿಲ್ಲೆಯ ಹಾಗೂ ರಾಜ್ಯದಲ್ಲೂ ತಾಲೂಕುವಾರು ಮೊದಲ ಸ್ಥಾನ ಪಡೆದಿದೆ.ಕುಂದಾಪುರ ತಾಲೂಕಿನಲ್ಲಿ 1389 ಬಾಲಕರು, 1330 ಬಾಲಕಿಯರು ಸೇರಿದಂತೆ ಒಟ್ಟು 2719 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 2607 ಮಂದಿ ಪಾಸಾಗಿ, ಶೇ.95.9 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಿಯಾಗಿದೆ.

ಬೈಂದೂರು ತಾಲೂಕಿನಲ್ಲಿ 1079 ಬಾಲಕರು, 1025 ಬಾಲಕಿಯರು ಸೇರಿದಂತೆ ಒಟ್ಟು 2104 ಮಂದಿ ಪರೀಕ್ಷೆ ಬರೆದಿದ್ದು, 2011 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.95.6 ಫಲಿತಾಂಶ ಪಡೆದು ಮೂರನೇ ಸ್ಥಾನ ಪಡೆದಿದೆ.

ಬ್ರಹ್ಮಾವರ ತಾಲೂಕಿನಲ್ಲಿ 1480 ಬಾಲಕರು, 1326 ಮಂದಿ ಬಾಲಕಿಯರು ಸೇರಿದಂತೆ ಒಟ್ಟು 2806 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟು 2643 ವಿದ್ಯಾರ್ಥಿಗಳು ಪಾಸಾಗಿ ಶೇ.94.2 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.

ಉಡುಪಿ ತಾಲೂಕಿನಲ್ಲಿ 1908 ಬಾಲಕರು, 1756 ಬಾಲಕಿಯರು ಸೇರಿದಂತೆ ಒಟ್ಟು 3664 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3362 ಮಂದಿ ತೇರ್ಗಡೆಹೊಂದಿ ಶೇ.91.8 ಫಲಿತಾಂಶದೊಂದಿಗೆ ಐದನೇ ಸ್ಥಾನ ಪಡೆದಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 7254 ಬಾಲಕರು, 6764 ಬಾಲಕಿಯ ಸೇರಿ 14018 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 6659 ಬಾಲಕರು, 6587 ಬಾಲಕಿಯರು ಸೇರಿದಂತೆ ಒಟ್ಟು 13246 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.94 ಫಲಿತಾಂಶ ದಾಖಲಾಗಿದೆ.

* ಕಾರ್ಕಳ ಇತಿಹಾಸದಲ್ಲೇ ಮೊದಲು

ಈ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.96.3 ಫಲಿತಾಂಶ ಕಾರ್ಕಳ ಇತಿಹಾಸದಲ್ಲೇ ಉತ್ತಮ ದಾಖಲೆಯಾಗಿದೆ. ಈ ಸಾಧನೆಯೊಂದಿಗೆ ತಾಲೂಕು ಶ್ರೇಷ್ಠ ಸಾಧನೆ ಮಾಡಿದಂತಾಗಿದೆ. ಈ ಹಿಂದೆ 2022-23ರ ಸಾಲಿನಲ್ಲಿ ಶೇ. 90.14 ಫಲಿತಾಂಶ ದಾಖಲಿಸಿದ್ದು, ಸಾಧನೆಯಾಗಿತ್ತು.

* ಹೊರಜಿಲ್ಲೆಯವರೇ ಹೆಚ್ಚು:

ಕಾರ್ಕಳ ಹಾಗೂ ಹೆಬ್ರಿ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳು ಹೊರ ಜಿಲ್ಲೆಯವರೇ ಪ್ರವೇಶ ಪಡೆಯುತ್ತಾರೆ. ಅದರಲ್ಲೂ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಇರುವ ಪಬ್ಲಿಕ್ ಸ್ಕೂಲ್‌ಗಳಲ್ಲಿ ಹಾಗೂ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಹೊರಜಿಲ್ಲೆಯವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.* ಅನುದಾನರಹಿತ, ಸರ್ಕಾರಿ ಶಾಲೆಗಳ ಪೈಪೋಟಿ

ಕಾರ್ಕಳ ತಾಲೂಕಿನ ವ್ಯಾಪ್ತಿಯಲ್ಲಿ 27 ಸರ್ಕಾರಿ ಪ್ರೌಢಶಾಲೆಗಳು, 12 ಅನುದಾನಿತ ಪ್ರೌಢಶಾಲೆಗಳು, 15 ಅನುದಾನ ರಹಿತ ಪ್ರೌಢಶಾಲೆಗಳು, 1 ಮೊರಾರ್ಜಿ ದೇಸಾಯಿ ಪ್ರೌಢಶಾಲೆ ಹಾಗೂ 1 ಮೌಲಾನ ಅಜಾದ್ ಪ್ರೌಢಶಾಲೆ ಸೇರಿದಂತೆ ಒಟ್ಟು 56 ಪ್ರೌಢಶಾಲೆಗಳಿವೆ. ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಿದ್ದು, ಸುಮಾರು 16000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 14000 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಬಾರಿ ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಗಳ ನಡುವೆ ಫಲಿತಾಂಶದಲ್ಲಿ ತುಂಬಾ ಪೈಪೋಟಿ ಏರ್ಪಟ್ಟಿದೆ.

* ಕಾರ್ಕಳ ತಾಲೂಕು ಫಲಿತಾಂಶ

ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ 56 ಪ್ರೌಢಶಾಲೆಗಳ ಪೈಕಿ 14 ಸರ್ಕಾರಿ ಪ್ರೌಢಶಾಲೆಗಳು, 6 ಅನುದಾನಿತ ಪ್ರೌಢಶಾಲೆಗಳು, 11 ಅನುದಾನ ರಹಿತ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 31 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.

----ಈ ಬಾರಿಯ ಫಲಿತಾಂಶ ತುಂಬಾ ಖುಷಿ ತಂದಿದೆ‌. ಕಾರ್ಕಳ ತಾಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನಿಯಾಗಿರುವುದು ವಿಶೇಷ. ಶಿಕ್ಷಕರ ಪರಿಶ್ರಮ, ಮಕ್ಕಳ ಅಸಕ್ತಿ, ತಂದೆ ತಾಯಿಯರ, ಇಲಾಖಾಧಿಕಾರಿಗಳ ಸಹಕಾರ, ಸಾರ್ವಜನಿಕರ ಪ್ರೋತ್ಸಾಹಗಳು ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ.

। ಲೋಕೇಶ್ ಬಿ.ವಿ., ಕಾರ್ಕಳ ತಾಲೂಕು ಶಿಕ್ಷಣಾಧಿಕಾರಿ