ಶ್ರೀ ಸ್ವರ್ಣಾಂಬಾ ದೇವಿಯವರ ತೆಪ್ಪೋತ್ಸವ

| Published : May 08 2024, 01:09 AM IST

ಸಾರಾಂಶ

ಕಡೂರು ತಾಲೂಕಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬಾ ದೇವಿಯವರ ತೆಪ್ಪೋತ್ಸವದೊಂದಿಗೆ ಏಳು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಕಂಡಿತು. ಮೂಲಸ್ಥಾನದಲ್ಲಿ ಶ್ರೀ ಅಮ್ಮನವರಿಗೆ ವಿಶೇಷ ಪೂಜೆಗಳು ನಡೆದ ನಂತರ ಸ್ವರ್ಣಾಂಬ ದೇವಿ ಉತ್ಸವ ವಿಗ್ರಹಕ್ಕೆ ಸೇವಂತಿಗೆ, ಮಲ್ಲಿಗೆ,ಕಮಲ, ಕನಕಾಂಬರ ಮುಂತಾದ ಹೂವುಗಳನ್ನು ಬಳಸಿ ಪುಷ್ಪಯಾಗ ನಡೆಸಲಾಯಿತು. ಅಪರೂಪದ ಬುಟ್ಟಿಗಟ್ಟಲೆ ಹೂವುಗಳನ್ನು ಯಾಗಕ್ಕೆ ಬಳಸಲಾಗಿತ್ತು.

ಏಳು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಮಲ್ಲೇಶ್ವರದ ಶ್ರೀ ಸ್ವರ್ಣಾಂಬಾ ದೇವಿಯವರ ತೆಪ್ಪೋತ್ಸವದೊಂದಿಗೆ ಏಳು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಕಂಡಿತು. ಮೂಲಸ್ಥಾನದಲ್ಲಿ ಶ್ರೀ ಅಮ್ಮನವರಿಗೆ ವಿಶೇಷ ಪೂಜೆಗಳು ನಡೆದ ನಂತರ ಸ್ವರ್ಣಾಂಬ ದೇವಿ ಉತ್ಸವ ವಿಗ್ರಹಕ್ಕೆ ಸೇವಂತಿಗೆ, ಮಲ್ಲಿಗೆ,ಕಮಲ, ಕನಕಾಂಬರ ಮುಂತಾದ ಹೂವುಗಳನ್ನು ಬಳಸಿ ಪುಷ್ಪಯಾಗ ನಡೆಸಲಾಯಿತು. ಅಪರೂಪದ ಬುಟ್ಟಿಗಟ್ಟಲೆ ಹೂವುಗಳನ್ನು ಯಾಗಕ್ಕೆ ಬಳಸಲಾಗಿತ್ತು.

ಸಂಜೆ ದೇವಾಲಯದ ಮುಂದಿನ ಸ್ವರ್ಣ ಪುಷ್ಕರಣಿಯಲ್ಲಿ ಸ್ವರ್ಣಾಂಬಾ ದೇವಿಗೆ ತೆಪ್ಪೋತ್ಸವ ನಡೆಸಲಾಯಿತು. ಆಲಂಕೃತ ತೆಪ್ಪದಲ್ಲಿ ಸ್ವರ್ಣಾಂಬಾ ದೇವಿಯೊಡನೆ ಅರಳೀಮರದಮ್ಮ, ಚೌಡ್ಲಾಪುರ ಕರಿಯಮ್ಮ ದೇವಿ ಮತ್ತು ಕೆಂಚರಾಯಸ್ವಾಮಿಯನ್ನು ಕೂರಿಸಿ ಪುಷ್ಕರಣಿಯಲ್ಲಿ ಮೂರು ಸುತ್ತು ತೆಪ್ಪವನ್ನು ಎಳೆಯಲಾಯಿತು. ಸಾವಿರಾರು ಭಕ್ತರು ತೆಪ್ಪೋತ್ಸವದಲ್ಲಿ ಪಾಲ್ಗೊಂಡರು.

ದೇವಿಗೆ ಅಷ್ಟಾವಧಾನ ಸೇವೆ ನಡೆಸಿದ ಬಳಿಕ ದೇವರನ್ನು ಗ್ರಾಮದೊಳಗಿನ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಊರಿನ ಆಲಯ ಪ್ರವೇಶ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆಯಲ್ಲಿ ಸಾಲಾಗಿ‌ ಕರ್ಪೂರ ಬೆಳಗುತ್ತಾ ಉತ್ಸವದ ಜೊತೆ ಸಾಗಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ ಮಾತನಾಡಿ, ಏಳು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ಎಂ.ಟಿ.ಹನುಮಂತಯ್ಯ, ಕಾರ್ಯದರ್ಶಿ ಎಂ.ವೈ.ಚಂದ್ರಶೇಖರ, ಸದಸ್ಯರಾದ ಎಂ.ಆರ್.ಧರ್ಮಣ್ಣ, ಮಾಲತೇಶ್ ಇದ್ದರು.

7ಕಕೆಡಿಯು2.

ಶ್ರೀಸ್ವರ್ಣಾಂಬ ದೇ‍ವಿಯವರ ತಪ್ಪೋತ್ಸವವು ನಡೆಯಿತು.