ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮತದಾನ ಬಹಿಷ್ಕಾರ

| Published : May 08 2024, 01:09 AM IST

ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮತದಾನ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಹುನಗುಂದ ಸಮೀಪದ ದಾಸಬಾಳ ಗ್ರಾಮದಲ್ಲಿ ನರೇಗಾ ಉದ್ಯೋಗ, ನೀರು ರಸ್ತೆ ಹೀಗೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಸಮೀಪದ ದಾಸಬಾಳ ಗ್ರಾಮದಲ್ಲಿ ನರೇಗಾ ಉದ್ಯೋಗ, ನೀರು ರಸ್ತೆ ಹೀಗೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ದಾಸಬಾಳ ಮತ್ತು ಕೆಸರಪೆಂಟಿ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳು ಮರೀಚಿಕೆವೆ. ಜನರ ತೊಂದರೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮತದಾನ ಮಾಡಿಯಾದರೂ ಏನು ಪ್ರಯೋಜನ ಎಂದು ಎರಡು ಗ್ರಾಮದ ಮತದಾರರು ಮತದಾನ ಬಹಿಷ್ಕರಿಸಿದ್ದರು.

ಮಾಹಿತಿ ಪಡೆದ ತಾಲೂಕು ಆಡಳಿತ ಅಧಿಕಾರಿಗಳು ಬೆಳಗ್ಗೆ 9ರ ಸುಮಾರಿಗೆ ಸ್ಥಳಕ್ಕೆ ದೌಡಾಯಿಸಿದರು. ಗ್ರಾಮಸ್ಥರ ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗ್ರಾಮದ ಹಿರಿಯ ಶಂಕರಗೌಡ ಗೌಡರ್ ನಾಗನಗೌಡ ಗೌಡರ್ ಮಾತನಾಡಿ, ನೀವು ಬಂದ ರಸ್ತೆ ಹೇಗಿದೆ, ಇಲ್ಲಿನ ಪಂಚಾಯತಿ ಆಡಳಿತ ನ್ಯಾಯಾಲಯದಲ್ಲಿದೆ, ಬಸ್ಸಿನ ಸೌಕರ್ಯ, ಕುಡಿಯುವ ನೀರು, ನರೇಗಾ ಉದ್ಯೋಗದಿಂದ ವಂಚಿತರಾಗಿದ್ದೇವೆ, ಪಶುಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ, ಚರಂಡಿ, ರಸ್ತೆಗಳಿಲ್ಲದೆ ವನವಾಸದ ಅನುಭವಿಸುವಂತಾಗಿದೆ. ಸಾಕಷ್ಟು ಬಾರಿ ಎಲ್ಲರ ಗಮನಕ್ಕೂ ತಂದರೂ ಪರಿಹಾರ ದೊರೆತಿಲ್ಲ. ಚುನಾವಣೆ ಬಂದಾಗ ಮತಪಡೆದು ಇತ್ತ ಯಾರೂ ತಿರುಗಿ ನೋಡುವುದಿಲ್ಲ ಎಂದು ಹರಿಹಾಯ್ದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಈಗ ಸಧ್ಯ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೈಗೊಳ್ಳಲಾಗುವುದೆಂದು ಭರವಸೆ ನೀಡಿ ಮನವೊಲಿಸಿದ ಬಳಿಕ 2 ತಾಸು ತಡವಾಗಿ ಮತದಾನ ಪ್ರಾರಂಭಿಸಿದರು.

ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ತಾಪಂ ಇಒ ಮುರಳೀಧರ ದೇಶಪಾಂಡೆ, ತಾರಾ, ಗ್ರೇಡ್-2 ತಹಸೀಲ್ದಾರ್‌ ಮಹೇಶ ಸಂದಿಗವಾಡ, ಪಿಎಸ್‌ಐ ಎಂ.ಎ. ಸತ್ತಿಗೌಡರ ಮತ್ತು ಸಿಬ್ಬಂದಿ ಈರಣ್ಣ ಕಾಕಂಡಕಿ ಸ್ಥಳದಲ್ಲಿದ್ದರು. ದಾಸಬಾಳ ಮತ್ತು ಕೆಸರಪೆಂಟಿ ಗ್ರಾಮ ಸೇರಿ ಒಂದು ಮತಗಟ್ಟೆಗೆ 309 ಪುರುಷ ಮತ್ತು 309 ಮಹಿಳಾ ಮತದಾರರು ಇದ್ದಾರೆ.

ಮುಖಂಡ ಮಹಾಂತೇಶ ಕಾಶಪ್ಪನವರ, ಮುತ್ತು ಗೌಡರ, ಶರಣಗೌಡ ಗೌಡರ, ರವಿ ಗೌಡರ, ಗೋವಿನಗೌಡ ಗೌಡರ, ರವಿ ಅಲ್ಲೂರ, ಪವಾಡೆಪ್ಪ ಕೆಂಗಲ್ ಸೇರಿದಂತೆ ಹಲವಾರು ಮತದಾರರು ಪಾಲ್ಗೊಂಡಿದ್ದರು.