ಅಕ್ಕ ನುಡಿದಂತೆ ನಡೆದ ತಮ್ಮ ರಾಜ್ಯಕ್ಕೆ ದ್ವಿತೀಯ

| Published : May 10 2024, 01:33 AM IST

ಸಾರಾಂಶ

ಅಕ್ಕನ ಸಾಧನೆಯೇ ತಮ್ಮನಿಗೆ ದಾರಿ ದೀಪವೆಂಬಂತೆ ಅಕ್ಕ ಎಸ್ಸೆಸ್ಸೆಲ್ಸಿಯಲ್ಲಿ ತೆಗೆದುಕೊಂಡ ಅಂಕಗಳನ್ನು ಬೆನ್ನಟ್ಟಿದ ಸಿದ್ಧಾಂತ ನಾಯಕಬಾ ಗಡಗೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡೆಎಸ್ಸೆಸ್ಸೆಲ್ಸಿಯಲ್ಲಿ ನಾನು ತೆಗೆದುಕೊಂಡ ಅಂಕಗಳಿಗಿಂತ ಒಂದು ಅಂಕವಾದರೂ ಹೆಚ್ಚಿಗೆ ತೆಗೆದುಕೊಳ್ಳಬೇಕೆಂಬ ಅಕ್ಕನ ಸವಾಲಿಗೆ ಇಂಗ್ಲಿಷ್‌ ವಿಷಯದಲ್ಲಿ ಮಾತ್ರ ಒಂದೇ ಒಂದು ಅಂಕ ಕಡಿಮೆ ತೆಗೆದುಕೊಂಡಿದ್ದು, ಅಕ್ಕನ ಮಾತಿನ ಒಂದು ಅಂಕದಿಂದಲೇ ರಾಜ್ಯಕ್ಕೆ ಬರಬಹುದಾದ ಪ್ರಥಮ ಸ್ಥಾನದಿಂದ ತಮ್ಮನೋರ್ವನು ವಂಚಿತನಾಗಿದ್ದಾನೆ.ಹಿರಿಯ ಅಕ್ಕನ ಸಾಧನೆಯೇ ತಮ್ಮನಿಗೆ ದಾರಿ ದೀಪವೆಂಬಂತೆ ಅಕ್ಕ ಎಸ್ಸೆಸ್ಸೆಲ್ಸಿಯಲ್ಲಿ ತೆಗೆದುಕೊಂಡ ಅಂಕಗಳನ್ನು ಬೆನ್ನಟ್ಟಿದ ಸಿದ್ಧಾಂತ ನಾಯಕಬಾ ಗಡಗೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಅತೀ ಹಿಂದುಳಿದ ಲೋಕುರ ಗ್ರಾಮದ ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ಕುಂಟುಂಬದ ನಾಯಕಬಾ ಗಡಗೆ ಹಾಗೂ ಮಂಗಲಾ ಗಡಗೆಯವರ ತೃತೀಯ ಸುಪುತ್ರ ಸಿದ್ಧಾಂತ ನಾಯಕಬಾ ಗಡಗೆ ಶೇಡಬಾಳ ಪಟ್ಟಣದ ಆಚಾರ್ಯ ಸುಭಲಸಾಗರ ಪ್ರೌಢ ವಿದ್ಯಾಮಂದಿರದ ವಿದ್ಯಾರ್ಥಿ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕಗಳನ್ನು ಪಡೆದು ಶೇ.99.99 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ.ಅಕ್ಕನ ಸಾಧನೆಯೇ ದಾರಿದೀಪ:

ಸಿದ್ಧಾಂತನಿಗೆ ಪ್ರೀತಿ ಮತ್ತು ಶ್ರುತಿ ಇಬ್ಬರು ಸಹೋದರಿಯರಿದ್ದು, 2020ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಸಹೋದರಿ ಶ್ರುತಿಯು 614 ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಶಾಲೆಯ ಟಾಪರ್‌ ಆಗಿದ್ದಳು. ಅಕ್ಕ ತೆಗೆದುಕೊಂಡ ಅಂಕಗಳಿಗೆ ಒಂದಾದರೂ ಹೆಚ್ಚಿಗೆ ಪಡೆದುಕೊಳ್ಳಬೇಕು ಎನ್ನುವ ಸಹೋದರಿಯ ಪ್ರೋತ್ಸಾಹವೇ ನನ್ನ ಸಾಧನೆಗೆ ಸ್ಫೂರ್ತಿ ಎನ್ನುತ್ತಾನೆ ಸಿದ್ಧಾಂತ.ಸಾಮಾನ್ಯ ಜ್ಞಾನ ಬಗ್ಗೆ ಹೆಚ್ಚಿನ ಆಸಕ್ತಿ:

ಕೃಷಿ ಮಾಡಿ ಜೀವನ ಸಾಗಿಸುತ್ತಿರುವ ಕುಂಟುಂಬದಲ್ಲಿ ಬೆಳೆದ ಸಿದ್ಧಾಂತನು ತಂದೆ, ತಾಯಿಗೆ ಅಗತ್ಯ ಬಿದ್ದಾಗ ಕೃಷಿ ಕೆಲಸ ಕಾರ್ಯಗಳಿಗೆ ಸಹಾಯ ಮಾಡುತ್ತ ತನ್ನ ವಿದ್ಯಾಭ್ಯಾಸದಲ್ಲಿ ತಲ್ಲಿನರಾಗಿರುತ್ತಿದ್ದನು. 1ನೇ ತರಗತಿಯಿಂದ ಹಿಡಿದು ಎಸ್ಸೆಸ್ಸೆಲ್ಸಿಯವರೆಗಿನ ತರಗತಿಯಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಮುಂದೆ ಇರುತ್ತಿದ್ದನು. ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸುತ್ತಿದ್ದ ಸಿದ್ಧಾಂತನು ವಿಜ್ಞಾನ ಸಮಾವೇಶದಲ್ಲಿ ಸುಮಾರು 2 ಬಾರಿ ರಾಜ್ಯಮಟ್ಟದವರೆಗೆ ಹೋಗಿ ಸ್ಫರ್ಧಿಸಿ ಬಂದಿದ್ದಾನೆ. ಹಾಗೆಯೇ ಕ್ವಿಜ್‌ನಲ್ಲಿ ಜಿಲ್ಲಾಮಟ್ಟಕ್ಕೆ ಒಂದು ಬಾರಿ ಸ್ಫರ್ಧೆ ಮಾಡಿರುವುದು ಸಾಮಾನ್ಯ ಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.ಶಾಲೆಯ ಶಿಕ್ಷಕ ವೃಂದ, ಯೂಟೂಬ್‌ ಪ್ರೇರಕ:

ಶಾಲೆಯ ಶಿಕ್ಷಕರು ಮೊದಲಿನಿಂದಲೂ ಸಿದ್ಧಾಂತಗೆ ಪ್ರೋತ್ಸಾಹ ನೀಡುತ್ತ ಬಂದಿದ್ದು, ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲಿತಿರುವುದರಿಂದ ಎಲ್ಲ ಶಿಕ್ಷಕರಿಗೆ ಸಿದ್ಧಾಂತ ಅಚ್ಚುಮೆಚ್ಚಿನ ವಿದ್ಯಾರ್ಥಿಯೂ ಹೌದು, ಪ್ರತಿಭಾವಂತ ವಿದ್ಯಾರ್ಥಿಯೂ ಹೌದು. ಯೂಟೂಬ್‌ಗಳಲ್ಲಿರುವ ಪಾಠದ ವಿಶೇಷ ಉಪನ್ಯಾಸಗಳನ್ನು ಪ್ರತಿ ವಿಷಯ ಶಿಕ್ಷಕರು ಸಿದ್ಧಾಂತನ ಮೊಬೈಲ್‌ಗೆ ಕಳುಹಿಸಿ ಓದಲು ಪ್ರೋತ್ಸಾಹ ನೀಡುತ್ತಿದ್ದರು. ಇದರಿಂದ ಓದಿದ ವಿಷಯದ ಆಳಜ್ಞಾನ ಹಾಗೂ ಪುನರಾವರ್ತನೆಯಾಗಿದ್ದಲ್ಲದೇ ವಿಷಯದ ಪ್ರತಿ ಪಾಠದಲ್ಲಿ ಪರಿಪೂರ್ಣತೆ ಹೊಂದಲು ಸಹಾಯವಾಯಿತೆಂದು ಕಲಿಸಿದ ಶಿಕ್ಷಕ ವೃಂದದ ಪ್ರೋತ್ಸಾಹಕ್ಕೆ ಧನ್ಯತೆ ಅರ್ಪಿಸಿದ್ದಾನೆ.

ಸಿದ್ಧಾಂತ ನಾಯಿಕಬಾ ಗಡಗೆ

ರಾಜ್ಯಕ್ಕೆ ದ್ವಿತೀಯ ಸ್ಥಾನ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ.

625ಕ್ಕೆ 624 ಅಂಕಗಳು (ಶೇ.99.99)

ಕನ್ನಡ 125 ಕ್ಕೆ 125

ಹಿಂದಿ 100 ಕ್ಕೆ 100

ಸಮಾಜ ವಿಜ್ಞಾನ 100 ಕ್ಕೆ 100

ಇಂಗ್ಲಿಷ್‌ 100ಕ್ಕೆ 99

ಗಣಿತ 100ಕ್ಕೆ 100

ವಿಜ್ಞಾನ 100 ಕ್ಕೆ100

ಶಾಲೆಯಲ್ಲಿ ಶಿಕ್ಷಕರು ಕಠಿಣವಾದ ವ್ಯಾಸಂಗಕ್ಕೆ ಒತ್ತು ಕೊಡುತ್ತಿದ್ದರು. ಅದು ನನಗೆ ಕಷ್ಟದ ಜೊತೆಗೆ ಇಷ್ಟವೂ ಆಗಿತ್ತು. ಬೆಳಗ್ಗೆ 10 ಗಂಟೆಯಿಂದ 5.15 ರವರೆಗೆ ಶಾಲೆಯಲ್ಲಿ ಸಂಜೆ 6.30ಕ್ಕೆ ಮನೆಯಲ್ಲಿ ಓದಲು ಆರಂಭಿಸುತ್ತಿದ್ದೆ. ಶಿಕ್ಷಕರ ಹಾಗೂ ಪಾಲಕರ ಸಹಕಾರದಿಂದ ಇದು ಸಾಧ್ಯಯಾಯಿತು. ವಿಜ್ಞಾನ ಕೋರ್ಸ್‌ ಆಯ್ಕೆ ಮಾಡಿಕೊಂಡು ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆ ಮಾಡಿ ಪೋಷಕರಿಗೆ ಮತ್ತು ಸಮಾಜಕ್ಕೆ ನೆರವಾಗಬೇಕೆಂಬ ಹಂಬಲ ಹೊಂದಿದ್ದೇನೆ. ಈ ಸಾಧನೆಯನ್ನು ತನ್ನ ತಂದೆ-ತಾಯಿ ಹಾಗೂ ಕಲಿಸಿದ ಗುರುಗಳಿಗೆ ಅರ್ಪಿಸುವೆ.

-ಸಿದ್ಧಾಂತ ನಾಯಿಕಬಾ ಗಡಗೆ,

ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸಾಧಕ.ದುಡ್ಡಿದ್ದರಷ್ಟೇ ಸಾಧನೆ ಮಾಡಬಹುದೆಂಬ ಮಾತು ಪ್ರಸ್ತುತ ಸುಳ್ಳಾಗಿದೆ. ಪ್ರತಿಭೆ ಮತ್ತು ಕಠಿಣ ಪರಿಶ್ರಮ ಇದ್ದವರಿಂದಲೂ ಸಾಧನೆ ಸಾಧ್ಯ. ಇದಕ್ಕೆ ಕಾಗವಾಡ ತಾಲೂಕಿನ ಲೋಕುರ ಗ್ರಾಮದ ಸಿದ್ಧಾಂತ ನಾಯಿಕಬಾ ಗಡಗೆ ಎಂಬ ರೈತ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿ ಶೈಕ್ಷಣಿಕ ಸಾಧನೆಯೇ ಸಾಕ್ಷಿಯಾಗಿದೆ. ಗಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ನಗರ ವಿದ್ಯಾರ್ಥಿಗಳಿಗೇನು ಕಮ್ಮಿ ಇಲ್ಲ ಎಂಬುವುದನ್ನು ಸಾಧಿಸಿ ತೋರಿಸಿದ್ದಾನೆ.

-ರಾಜು ಕಾಗೆ,
ಶಾಸಕರು ಕಾಗವಾಡ ಮತಕ್ಷೇತ್ರ.

ತೋಟದ ಮನೆಯಲ್ಲಿದ್ದುಕೊಂಡೇ ಸಿದ್ಧಾಂತ ಅಭ್ಯಾಸ ಮಾಡಿದ್ದಾನೆ. ಯಾವುದೇ ಟ್ಯೂಶನ್‌ನ್ನು ತೆಗೆದುಕೊಳ್ಳದೇ ಶಾಲೆಯಲ್ಲಿ ಹೇಳಿದ್ದನ್ನು ಮಾತ್ರ ಅಚ್ಚುಕಟ್ಟಾಗಿ ಓದಿ ಯಶಸ್ವಿಯಾಗಿದ್ದಾನೆ. ಸಿದ್ಧಾಂತ ಓದುವ ಸಮಯದಲ್ಲಿ ತಾಯಿ ಟಿವಿ ನೋಡುವುದನ್ನೇ ಬಿಟ್ಟು ಮಗನ ಓದಿಗೆ ಪ್ರೋತ್ಸಾಹ ನೀಡಿದ್ದಾರೆ. ಓದುವ ಛಲವಿದ್ದರೇ ಎಂಥವರು ಸಾಧನೆ ಮಾಡಲು ಸಾಧ್ಯ. ಹೀಗೆ ಹಠ ತೊಟ್ಟು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಿದ್ಧಾಂತ ಸಾಧನೆ ಮಾಡಿದ್ದಾನೆ.

-ಮೋಹನಕುಮಾರ ಹಂಚಾಟೆ, ಡಿಡಿಪಿಐ ಚಿಕ್ಕೋಡಿ.