ಚೆಂಡಿಯಾ ಮತಗಟ್ಟೆಯಲ್ಲಿ ರೂಪಾಲಿ ನಾಯ್ಕ ಮತದಾನ

| Published : May 08 2024, 01:05 AM IST

ಚೆಂಡಿಯಾ ಮತಗಟ್ಟೆಯಲ್ಲಿ ರೂಪಾಲಿ ನಾಯ್ಕ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ತಾಲೂಕಿನ ಚೆಂಡಿಯಾ ಮತಗಟ್ಟೆಯಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ತಮ್ಮ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಕಾರವಾರ:

ಕಾರವಾರ ತಾಲೂಕಿನ ಚೆಂಡಿಯಾ ಮತಗಟ್ಟೆಯಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ತಮ್ಮ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲ್ಲಬೇಕು. ಆ ಮೂಲಕ ಮೋದಿ ಅವರಿಗೆ ಉಡುಗೊರೆ ನೀಡಬೇಕು ಎಂಬ ನಿಟ್ಟಿನಲ್ಲಿ ಕಿತ್ತೂರ, ಖಾನಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎರಡು ಸುತ್ತು ಪ್ರಚಾರ ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಚಂಡ ಬಹುಮತದಿಂದ ಗೆಲುವು ಲಭಿಸಲಿದೆ ಎಂಬ ವಿಶ್ವಾಸ ಇದೆ. ಇದು ದೇಶದ ರಕ್ಷಣೆ, ಅಭಿವೃದ್ಧಿಯ ಚುನಾವಣೆ. ನರೇಂದ್ರ ಮೋದಿ ದೇಶವನ್ನು ಅತ್ಯುತ್ತಮವಾಗಿ ಮುನ್ನೆಡೆಸುತ್ತಿದ್ದಾರೆ. ಅವರಿಗೆ ಇನ್ನಷ್ಟು ಬಲತುಂಬುವ ಕೆಲಸವನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸುವ ಮೂಲಕ ಮಾಡುತ್ತಿದ್ದೇವೆ ಎಂದು ಹೇಳಿದರು.ರೂಪಾಲಿ ಎಸ್. ನಾಯ್ಕ ಅವರು ತಮ್ಮ ಪುತ್ರ, ಸೊಸೆ ಹಾಗೂ ಕುಟುಂಬದ ಇತರರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಮತದಾನ ಮಾಡದ ಪದ್ಮಶ್ರೀ ಸುಕ್ರಿ

ದೇಶದ ಅತ್ಯುನ್ನತ ಪ್ರದ್ಮಶ್ರೀ ಪ್ರಶಸ್ತಿ ಪಡೆದ ಸುಕ್ರಿ ಗೌಡ ಅವರಿಗೆ ಮತದಾನ ಮಾಡಲಾಗದೆ, ನಿರಾಸೆ ವ್ಯಕ್ತಪಡಿಸಿದ ಘಟನೆಯು ನಡೆದಿದೆ.

ನನಗೆ ಮತದಾನ ಮಾಡಲು ಬಹಳ ಹುಮ್ಮಸ್ಸು ಇತ್ತು. ಆದರೆ ನನಗೆ ಆರೋಗ್ಯ ಸರಿ ಇಲ್ಲದೆ ಇರುವುದರಿಂದ ಮತಗಟ್ಟೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.ಸುಕ್ರಿ ಗೌಡ ಅವರ ಸೊಸೆ ಮಂಗಲಾ ಗೌಡ ಮಾತನಾಡಿ, ನನ್ನ ಅತ್ತೆಗೀಗ 86 ವರ್ಷ. ಅವರಿಗೆ ಮತಗಟ್ಟೆ ಹೋಗಲು ಸಾಧ್ಯವಿಲ್ಲ. ಅವರಿಗೆ ಮನೆ ಮನೆ ಮತದಾನದ ಪ್ರಕಿಯೆಯಲ್ಲಿ ಅವಕಾಶ ನೀಡುವಂತೆ ವಿನಂತಿಸಲಾಗಿತ್ತು. ಆದರೆ ಮನೆ ಮನೆ ಮತದಾನದ ಪಟ್ಟಿಯಲ್ಲಿ ನನ್ನ ಅತ್ತೆ ಸುಕ್ರಿ ಗೌಡ ಅವರ ಹೆಸರು ತಪ್ಪಿ ಹೋಗಿದೆ. ಇದರಿಂದ ತುಂಬಾ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯಿಂದ ಮತದಾನ ಕೇಂದ್ರಕ್ಕೆ ಕರೆತಂದ ಸಿಬ್ಬಂದಿ

ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಒಳರೋಗಿ ವಾರ್ಡ್‌ಗಳಲ್ಲಿ ದಾಖಲಾದವರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಿ, ಆ್ಯಂಬುಲೆನ್ಸ್‌ ಜತೆ ಶುಶ್ರೂಷಕ ಅಧಿಕಾರಿಗಳೊಂದಿಗೆ ಅವರವರ ಮತಗಟ್ಟೆಗಳಿಗೆ ಸಾಗಿಸಿ ಮತ ಹಾಕಲು ವ್ಯವಸ್ಥೆ ಸಹಾಯ ಮಾಡಿ ಪುನಃ ಆಸ್ಪತ್ರೆಗೆ ಕರೆತರಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಅವರ ವಿಶೇಷ ಕಳಕಳಿಯಿಂದಾಗಿ ಒಟ್ಟು 18 ಒಳರೋಗಿಗಳು ಮತದಾನ ಮಾಡಿ ತಮ್ಮ ಆರೋಗ್ಯ ನೋವು ಮರೆತು ಹರ್ಷಕ್ಕೆ ಕಾರಣರಾದರು.