ಸುಸೂತ್ರವಾಗಿ ನಡೆದ ಮತದಾನ

| Published : May 08 2024, 01:05 AM IST

ಸಾರಾಂಶ

ಸಾರ್ವತ್ರಿಕ ಲೋಕಸಭಾ ಚುನಾವಣೆಯಂಗವಾಗಿ ಮಂಗಳವಾರ ಜರುಗಿದ ಮತದಾನವು ಪಟ್ಟಣ ಸೇರಿದಂತೆ ಮತಕ್ಷೇತ್ರದಲ್ಲಿ ಸಣ್ಣಪುಟ್ಟ ಗೊಂದಲ ಹೊರತು ಪಡಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಾರ್ವತ್ರಿಕ ಲೋಕಸಭಾ ಚುನಾವಣೆಯಂಗವಾಗಿ ಮಂಗಳವಾರ ಜರುಗಿದ ಮತದಾನವು ಪಟ್ಟಣ ಸೇರಿದಂತೆ ಮತಕ್ಷೇತ್ರದಲ್ಲಿ ಸಣ್ಣಪುಟ್ಟ ಗೊಂದಲ ಹೊರತು ಪಡಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಜರುಗಿತು.

ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಬೆಳಗ್ಗೆ ೧೧ ಗಂಟೆಯವರೆಗೂ ಕಡಿಮೆ ಪ್ರಮಾಣದಲ್ಲಿ ಆಗಮಿಸಿ ಮತದಾನ ಮಾಡಿದರೆ ಮಧ್ಯಾಹ್ನ ೧, ೩ ಗಂಟೆಯೊತ್ತಿಗೆ ಬಿಸಿಲಿನ ಪ್ರಖರತೆಯಿದ್ದರೂ ಬಿರುಸಿನಿಂದ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ಬೆಳಗ್ಗೆ ೯ ಗಂಟೆಗೆ ಶೇ.೯.೦೭, ೧೧ ಗಂಟೆಗೆ ಶೇ.೨೨.೨೭,೧ ಗಂಟೆಗೆ ೪೧.೭೬, ೩ ಗಂಟೆಗೆ ಶೇ.೫೨.೮೯, ಸಂಜೆ ೫.೧೫ ಗಂಟೆಗೆಯವರೆಗೆ ಶೇ. ೬೪.೯೭ ರಷ್ಟು ಮತದಾನ ಆಗಿದೆ ಎಂದು ತಹಸೀಲ್ದಾರ ಕಾರ್ಯಾಲಯದ ಮೂಲಗಳು ತಿಳಿಸಿದವು.

ಮತಕ್ಷೇತ್ರದ ಬಳೂತಿ ಆರ್‌ಸಿ ಗ್ರಾಮದ ೧೮೪ ಮತಗಟ್ಟೆಯಲ್ಲಿ ಸಿಯು ದಲ್ಲಿ ದೋಷ ಕಂಡುಬಂದಿದ್ದರಿಂದ ಇಡೀ ವಿದ್ಯುನ್ಮಾನ ಮಂತ್ರದ ಸೆಟ್ ಬದಲಾವಣೆ ಮಾಡಲಾಯಿತು. ನಿಡಗುಂದಿ,ಹೆಬ್ಬಾಳ, ಸೇರಿದಂತೆ ಇನ್ನೆರಡು ಮತಗಟ್ಟೆ ಕೇಂದ್ರದಲ್ಲಿ ವಿವಿ ಪ್ಯಾಟ್‌ದಲ್ಲಿ ದೋಷ ಕಂಡುಬಂದಿರುವುದರಿಂದಾಗಿ ವಿವಿ ಪ್ಯಾಟ್ ಬದಲಾವಣೆ ಹೊರತು ಪಡಿಸಿದಂತೆ ಯಾವುದೇ ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಯಾವುದೇ ದೋಷ ಕಂಡು ಬಂದ ವರದಿಯಾಗಿಲ್ಲ.

ಪಟ್ಟಣದ ವಿವೇಕಾನಂದ ಶಾಲೆಯಲ್ಲಿರುವ ಮತಗಟ್ಟೆ ಕೇಂದ್ರ ಸೇರಿದಂತೆ ಕೆಲವೆಡೆ ಮತದಾನ ಸಮಯ ಮುಕ್ತಾಯದ ಅವಧಿ ಮುನ್ನ ಮತದಾರರು ಸರದಿಯಲ್ಲಿ ನಿಂತಿರುವುದರಿಂದಾಗಿ ಅವರಿಗೆ ಚೀಟಿ ನೀಡಿ ಅವರಿಗೆ ಮತದಾನ ಮಾಡುವ ಅವಕಾಶ ನೀಡಲಾಯಿತು ಎಂದು ತಿಳಿದುಬಂದಿತ್ತು.

ಕಳೆದ ವಿಧಾನಸಭೆ ಚುನಾವಣೆಯ ಮತದಾನ ನಡೆಯುವ ದಿನದಂದು ಮಸಬಿನಾಳ ಗ್ರಾಮದಲ್ಲಿ ವಿವಿ ಪ್ಯಾಟ್ ಇದ್ದ ವಾಹನವನ್ನು ಜಖಂ ಮಾಡಿದ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಮತಗಟ್ಟೆ ಕೇಂದ್ರಗಳ ಮುಂದೆ ಪೊಲೀಸ್ ವಾಹನವೊಂದು ಬಿಡು ಬಿಟ್ಟಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ಗ್ರಾಮಕ್ಕೆ ಚುನಾವಣಾ ವೀಕ್ಷಕರಾದ ಡಾ. ರತನಕಣ್ವರ್ ಗಾಧವಿಚಾರನ ಭೇಟಿ ನೀಡಿದರು.

ವಯೋವೃದ್ದರು, ವಿಕಲಚೇತನರು ತಮ್ಮ ಮನೆಯವರ ಸಹಾಯದೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಮತಗಟ್ಟೆ ಕೇಂದ್ರಗಳ ಹತ್ತಿರ ಮತದಾರರಿಗೆ ಆಯಾ ಪಕ್ಷದ ಕಾರ್ಯಕರ್ತರು ಚೀಟಿಗಳನ್ನು ಕೊಡುವ ಗುಂಪುಗಳು ಕಂಡುಬಂದಿತ್ತು.

ಜೆಡಿಎಸ್ ಮುಖಂಡ ಸೋಮನಗೌಡ ಪಾಟೀಲ ಮನಗೂಳಿ ಅವರು ತಮ್ಮ ಸ್ವಗ್ರಾಮ ಮನಗೂಳಿ ಪಟ್ಟಣದ ಮತಗಟ್ಟೆ ೨೪ ರಲ್ಲಿ ಮತ ಚಲಾಯಿಸಿದರು. ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ತಮ್ಮ ಸ್ವಗ್ರಾಮ ಕೊಲ್ಹಾರ ಪಟ್ಟಣದ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತ ಚಲಾಯಿಸಿದರು. ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಅವರು ವಿಜಯಪುರದಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಬಿಗಿ ಪೊಲೀಸ್ ಭದ್ರತೆ:

ಶಾಂತಿಯುತ ಮತದಾನಕ್ಕಾಗಿ ಮತಕ್ಷೇತ್ರದ ೨೩೦ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿ ಅರೆಸೇನಾ ಪಡೆ ಯೋಧರು ಸೇರಿದಂತೆ ಭದ್ರತಾ ಸಿಬ್ಬಂದಿ ಮತಗಟ್ಟೆ ಸುತ್ತಮುತ್ತ ಬಿಗಿ ಭದ್ರತೆಯನ್ನು ಒದಗಿಸಿದರು.

----