ಕೆಂಡದಂತ ಬಿಸಿಲಿನ ಮಧ್ಯೆ ಚುರುಕಿನ ಮತದಾನ

| Published : May 09 2024, 01:17 AM IST

ಸಾರಾಂಶ

ಕೊಟ್ಟೂರು ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕೊಠಡಿಯಲ್ಲಿ ಆರಂಭಿಸಿರುವ ಸಖಿ ಮತ ಕೇಂದ್ರವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಈ ಮತ ಕೇಂದ್ರದಲ್ಲಿ ಮತ ಚಲಾಯಿಸಲು ಮಹಿಳೆಯರು ಬೆಳಗ್ಗಿನಿಂದಲೇ ಉದ್ದನೇಯ ಸಾಲಿನೊಂದಿಗೆ ನಿರಂತರ ಆಗಮಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಕೊಟ್ಟೂರು

ಪಟ್ಟಣ ಮತ್ತು ತಾಲೂಕಿನಲ್ಲಿ ಕೆಂಡದಂತ ಬಿಸಿಲಿನ ಅರ್ಭಟದಲ್ಲೂ ಮಂಗಳವಾರ ಬೆಳಗ್ಗೆಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾರರು ಚುರುಕಿನಿಂದ ಆಗಮಸಿ ಮತ ಚಲಾಯಿಸಿದರು. ಮತದಾನ ಪ್ರಾರಂಭವಾದ ಬೆಳಗ್ಗೆ 7ಕ್ಕೆ ಬೆರಳಣಿಕೆಯ ಮತದಾರರು ಆಗಮಿಸಿ ಮತ ಚಲಾಯಿಸುತ್ತಿದ್ದರು. ಬೆಳಗ್ಗೆ 9ರ ಸುಮಾರಿನಿಂದಲೇ ಮತದಾರರು ಬಿಸಿಲಿನ ತಾಪಮಾನ ಅಧಿಕವಾಗಿದ್ದರೂ ಉದ್ದನೇ ಸಾಲಿನೊಂದಿಗೆ ಮತಗಳ ಕೇಂದ್ರಗಳತ್ತ ಅತ್ಯುತ್ಸಾಹದಿಂದ ಆಗಮಿಸಿ ಮತಚಲಾಯಿಸಿದರು..

ಮತದಾರರಿಗೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಮತ ಕೇಂದ್ರಗಳ ಬಳಿ ಶಾಮಿಯಾನ ಹಾಕಲಾಗಿತ್ತು. ಇದರ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಬಿರುಬಿಸಿಲಿನ ಮಧ್ಯಾಹ್ನದ 1ರ ಸುಮಾರಿಗೆ ಕೊಟ್ಟೂರು ತಾಲೂಕಿನಲ್ಲಿ ಶೇ. 43ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕೊಠಡಿಯಲ್ಲಿ ಆರಂಭಿಸಿರುವ ಸಖಿ ಮತ ಕೇಂದ್ರವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಈ ಮತ ಕೇಂದ್ರದಲ್ಲಿ ಮತ ಚಲಾಯಿಸಲು ಮಹಿಳೆಯರು ಬೆಳಗ್ಗಿನಿಂದಲೇ ಉದ್ದನೇಯ ಸಾಲಿನೊಂದಿಗೆ ನಿರಂತರ ಆಗಮಿಸುತ್ತಿದ್ದರು. ಕೆಲ ಯುವಕ-ಯುವತಿಯರು ಮತದಾನ ನಂತರ ಸಖಿ ಕೇಂದ್ರಬಳಿ ನಿಂತುಕೊಂಡು ಸೆಲ್ಫಿ ತೆಗೆದುಕೊಂಡು ತಮ್ಮ ಹಕ್ಕು ಚಲಾಯಿಸಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದರು. ಕೊಟ್ಟೂರು ತಾಲೂಕಿನಲ್ಲಿ ಮತದಾನ ಯಾವುದೇ ಬಗೆಯ ತೊಂದರೆ ಇಲ್ಲದೆ ಶಾಂತಿಯುತವಾಗಿ ಸಾಗಿತು.

ಉಜ್ಜಯಿನಿ ಜಗದ್ಗುರು ಶ್ರೀಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಉಜ್ಜಿನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ಕೊಟ್ಟೂರಿನ ಹಳೆ ಪಟ್ಟಣ ಪಂಚಾಯಿತಿ ಕಚೇರಿಯ ಮತಕೇಂದ್ರದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಪತ್ನಿ ಅನ್ನಪೂರ್ಣ ಪುತ್ರರು ಮತ್ತು ಸೊಸೆಯೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ ತುಕರಾಂ ಕೊಟ್ಟೂರಿಗೆ ಬೆಳಗ್ಗೆ 11.30ರ ಸುಮಾರಿಗೆ ಆಗಮಿಸಿ ಕೆಲ ಮತಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮತದಾನ ವಿವರಗಳನ್ನು ಪಡೆದುಕೊಂಡರು. ಶಾಸಕ ಕೆ. ನೇಮರಾಜ ನಾಯ್ಕ ಕೊಟ್ಟೂರಿನ ಮತಕೇಂದ್ರಗಳಿಗೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಜೆಡಿಎಸ್ ಕಾರ್ಯಕರ್ತರ ಜತೆ ಕೆಲಕಾಲ ಚರ್ಚಿಸಿದರು.

ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಲ್. ಶ್ರೀ ಹರಿಬಾಬು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ್ ಭೇಟಿ ನೀಡಿ ಮತದಾನ ಸುಗಮವಾಗಿ ನಡೆದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.