ಬರ ಪರಿಹಾರ ಬಿಡುಗಡೆಗೆ ಮೀನಾಮೇಷ ಏಕೆ: ಬಿ.ವೈ.ವಿಜಯೇಂದ್ರ

| Published : Apr 25 2024, 01:11 AM IST / Updated: Apr 25 2024, 02:24 PM IST

Vijayendra

ಸಾರಾಂಶ

ಅಲ್ಪಸಂಖ್ಯಾಂತರ ಅಭಿವೃದ್ಧಿಗೆ ತೋರಿಸುವ ಉತ್ಸಾಹ ಸಂಕಷ್ಟದಲ್ಲಿ ಇರುವ ರೈತರ ಬಗ್ಗೆ ಕಾಂಗ್ರೆಸ್‌ಗೆ ಯಾಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

 ಶಿವಮೊಗ್ಗ / ಶಿಕಾರಿಪುರ : ಅಲ್ಪ ಸಂಖ್ಯಾಂತರಿಗೆ 10 ಸಾವಿರ ಕೋಟಿ ರು. ಬಿಡುಗಡೆ ಮಾಡುವುದಾಗಿ ಹೇಳಿ, 2 ಸಾವಿರ ಕೋಟಿ ರು. ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಬರದ ವಿಚಾರದಲ್ಲಿ ಯಾಕೆ ಇಷ್ಟೊಂದು ಮೀನಾಮೇಷ ಎಣಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರದಿಂದಾಗಿ ರೈತರೂ ತತ್ತರಿಸುತ್ತಿದ್ದಾರೆ. ಬೆಳೆ ಕಳೆದುಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟು ದಿನವಾದರೂ ಅವರಿಗೆ ಸರ್ಕಾರ ಪರಿಹಾರ ಕೊಟ್ಟಿಲ್ಲ. ರೈತರ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅಸಡ್ಡೆ ತೋರುತ್ತಿದೆ ಎಂದು ದೂರಿದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಚನ್ನಾಗಿದೆ. ಮೈತ್ರಿಯಲ್ಲಿ ಸರಿ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷ ಪಿತೂರಿ ನಡೆಸುತ್ತಿದೆ. ಹಿಂದುಗಳ ಮೇಲೆ ಹಲ್ಲೆ ಯಾದರೆ ಅದು ವೈಯಕ್ತಿಕ ಕಾರಣ ಅನ್ನುತ್ತಿರಿ. ಅಲ್ಪ ಸಂಖ್ಯಾಂತರಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ಕೊಲೆ ಪ್ರಕರಣವನ್ನು ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಈ ರೀತಿ ಆದರೆ, ಕಾನೂನು ಸುವ್ಯವಸ್ಥೆಯನ್ನು ಯಾರು ಕಾಪಾಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಸಿಎಂ ಆದವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಇದನ್ನು ರಾಜ್ಯದ ಜನತೆ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ನೀಡಿದರು.

ಅಲ್ಪಸಂಖ್ಯಾಂತರ ಅಭಿವೃದ್ಧಿಗೆ ತೋರಿಸುವ ಉತ್ಸಾಹವನ್ನು ಸಂಕಷ್ಟದಲ್ಲಿ ಇರುವ ರೈತರಿಗೆ ತೋರಿಸಬಹುದಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ನೆರೆ ಪರಿಹಾರ ಹಾಗೂ ತೋಟಗಾರಿಕೆಗಾಗಿ 24 ಸಾವಿರ ರು. ಹಣವನ್ನು ರೈತರಿಗೆ ನೀಡಿದ್ದರು. ಭತ್ತ ಬೆಳೆದ ರೈತರಿಗೆ ಹೆಕ್ಟೇರ್‌ಗೆ 14 ಸಾವಿರ ರು. ನೀಡಿದ್ದರು. ಮಳೆಯಿಂದ ಮನೆ ಕಳೆದುಕೊಂಡಿದ್ದ ಬಡವರ ಮನೆ ನಿರ್ಮಾಣಕ್ಕಾಗಿ 4 ಲಕ್ಷ ರು. ನೀಡಿದ್ದರು. 800 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು.

‘ಬಿಎಸ್‌ವೈ ಅಂದು ಕೇಂದ್ರಕ್ಕೆ ಕಾಯದೆ ಪರಿಹಾರ ನೀಡಿದ್ರು’

ರಾಜ್ಯಕ್ಕೆ ಬರ ಪರಿಹಾರ ಕೊಡಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ. ಹಿಂದೆ ಯಡಿಯೂರಪ್ಪನವರು ಸಿಎಂ ಇದ್ದಾಗ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗಲೂ ಸಹ ಪರಿಹಾರ ನೀಡುವಲ್ಲಿ ತಡವಾಗಿದೆ. ತಡವಾಗಲು ಕೆಲವು ಮಾನದಂಡ ಇರುತ್ತದೆ. ಆದರೆ ಬಿಜೆಪಿ ಸರ್ಕಾರವು ಕೇಂದ್ರಕ್ಕೆ ಕಾಯದೆ ತನ್ನ ಖಜಾನೆಯಿಂದಲೇ ಪರಿಹಾರ ನೀಡಿತ್ತು. ಪ್ರಸ್ತುತ ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ಖಜಾನೆ ಖಾಲಿಯಾಗಿದೆ. ರೈತರಿಗೆ ಪರಿಹಾರ ನೀಡಲು ಇವರ ಬಳಿ ಹಣ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲೀ ಸರ್ಕಾರದ ಬಳಿ ಹಣ ಇಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಗ್ಯಾರಂಟಿಗಿಂತ, ಮೋದಿ ಗ್ಯಾರಂಟಿ ಶಾಶ್ವತ: ಬಿಜೆಪಿ ರಾಜ್ಯಾಧ್ಯಕ್ಷ

ಶಿಕಾರಿಪುರ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ಅತಿ ತುಷ್ಟೀಕರಣದಿಂದಾಗಿ ಕಳೆದ 4 ದಿನದಲ್ಲಿ 10 ಹತ್ಯೆಯಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಶೂನ್ಯವಾಗಿದ್ದು, ಈ ದಿಸೆಯಲ್ಲಿ ಕಾರ್ಯಕರ್ತರು ಸರ್ಕಾರದ ನೀತಿಯನ್ನು ಮನೆಮನೆಗೆ ತಲುಪಿಸಿ ಬಿಜೆಪಿಗೆ ಹೆಚ್ಚು ಮತಗಳನ್ನು ದೊರಕಿಸಿಕೊಡುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮಂಗಳವಾರ ಪಟ್ಟಣದ ಮಂಗಳಭವನದ ಹಿಂಭಾಗ ನಡೆದ ತಾಲೂಕು ಬಿಜೆಪಿ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ರಾಘವೇಂದ್ರ ಸತತ 3 ಬಾರಿ ಸಂಸದರಾಗಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೊಳಿಸಿದ್ದಾರೆ. ಕಾರ್ಯಕರ್ತರು ಮತದಾರರ ಜತೆ ಸತತ ಸಂಪರ್ಕ ಹೊಂದಿದ್ದಾರೆ. ಪ್ರತಿಯೊಬ್ಬರ ಕುಂದು ಕೊರತೆ ಆಲಿಸಿ ಪರಿಹಾರದಿಂದ ಪ್ರೀತಿ ವಿಶ್ವಾಸಗಳಿಸಿದ್ದಾರೆ. ಈ ಬಾರಿ ಬಿಜೆಪಿಗೆ ಜನತಾದಳದ ಬೆಂಬಲದಿಂದ ಹೆಚ್ಚಿನ ಶಕ್ತಿ ದೊರಕಿದೆ ಎಂದ ಅವರು, ಕಾಂಗ್ರೆಸ್ ಗ್ಯಾರೆಂಟಿ ತಾತ್ಕಾಲಿಕವಾಗಿದ್ದು, ಮೋದಿ ಗ್ಯಾರೆಂಟಿ ಶಾಶ್ವತವಾಗಿದೆ, ಈ ಬಗ್ಗೆ ಕಾರ್ಯಕರ್ತರು ಮತದಾರರ ಮನವೊಲಿಕೆ ಮಾಡುವಂತೆ ತಿಳಿಸಿದರು.ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಘಟನೆಯಲ್ಲಿ ಸಚಿವರು ವೈಯುಕ್ತಿಕ ಕಾರಣ, ಅಚಾನಕ್ಕಾಗಿ ನಡೆದಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದು. ಯಾದಗೀರ್‌ನಲ್ಲಿ ರೊಟ್ಟಿ ಖರೀದಿಸಲು ತೆರಳಿದ್ದ ಹಿಂದೂ ಯುವಕನ ಮರ್ಮಾಂಗಕ್ಕೆ ಒದ್ದು ಹತ್ಯೆಗೈಯಲಾಗಿದೆ. ಚನ್ನಗಿರಿ, ಗದಗ್ ಮತ್ತಿತರ ಕಡೆಗಳಲ್ಲಿ ಕಳೆದ 4 ದಿನದಲ್ಲಿ 10 ಹತ್ಯೆಯಾಗಿದ್ದು, ಮನೆಯಿಂದ ತೆರಳಿದ ಹೆಣ್ಣು ಮಕ್ಕಳು ವಾಪಾಸ್ ಮನೆಗೆ ಬರುವ ಬಗ್ಗೆ ತಾಯಿ ಕಾಯುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಹಿಂದೂ ವಿರೋಧಿ ನೀತಿ ಜತೆಗೆ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ ಎಂದರು.

ಯುವ ಮುಖಂಡ ಮಹೇಶ್ ಹುಲ್ಮಾರ್ ಅಪಾರ ಬೆಂಬಲಿಗರ ಜತೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಎಲ್ಲರಿಗೂ ಸೂಕ್ತ ಗೌರವ ನೀಡಲಾಗುವುದು ಎಂದ ಅವರು ರಾಜ್ಯ ಮಟ್ಟದಲ್ಲಿ ಜೆಡಿಎಸ್ ಬೆಂಬಲ ನೀಡಿದ್ದು ಎಲ್ಲ ಕ್ಷೇತ್ರವನ್ನೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಯುವಶಕ್ತಿ ರಾಷ್ಟ್ರಶಕ್ತಿಯಾಗಿದ್ದು, ಯುವಪೀಳಿಗೆ ಬಲಿಷ್ಠ ರಾಷ್ಟ್ರದ ಭವಿಷ್ಯವಾಗಿದೆ. ದೇಶದಲ್ಲಿ 35 ವರ್ಷ ವಯೋ ಮಿತಿಯೊಳಗಿನ ಶೇ.65 ಯುವಶಕ್ತಿ ಇದ್ದು, ವಿಕಸಿತ ಭಾರತ ಮೂಲಕ 4 ವಿಭಾಗವಾಗಿಸಿ ಶಕ್ತಿ ನೀಡುವ ಕಾರ್ಯ ಮೋದಿ ಮಾಡಿದ್ದಾರೆ ಎಂದು ತಿಳಿಸಿದರು.

ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಪುರಸಭಾ ಸದಸ್ಯ ಯುವ ಮುಖಂಡ ಮಹೇಶ್ ಹುಲ್ಮಾರ್ ಮಾತನಾಡಿ, ಸತತ 3 ದಶಕದಿಂದ ಕಾಂಗ್ರೆಸ್ ಪಕ್ಷ ಸಂಘ ಟಿಸಿದ್ದು, ಇದೀಗ ನಾಗರಹಾವು ಬಂದು ಹುತ್ತಕ್ಕೆ ಸೇರಿಕೊಂಡು ಕಚ್ಚತೊಡಗಿದೆ ಗೀತಾರಿಗೆ ಮತಕೇಳಲು ಬರುವ ನಾಗರಹಾವಿಗೆ ಹಾಲು ಹಾಕಬೇಡಿ ಎಂದರು.ಈ ಸಂದರ್ಭದಲ್ಲಿ ಮಹೇಶ್ ನೇತೃತ್ವದಲ್ಲಿ ನೂರಾರು ಯುವಕರು, ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ,ತಾ.ಅಧ್ಯಕ್ಷ ಹನುಮಂತಪ್ಪ,ನಗರಾಧ್ಯಕ್ಷ ರಾಘವೇಂದ್ರ,ಮುಖಂಡ ಗುರುಮೂರ್ತಿ,ಎಚ್ ಟಿ ಬಳಿಗಾರ್,ಅರುಣ್ ಕುಗ್ವೆ, ಸುಬಾಷ್, ಪ್ರಶಾಂತ್ ಸಾಳಂಕೆ, ಜೆಡಿಎಸ್ ಅಧ್ಯಕ್ಷ ಯೋಗೀಶ್ ಬೆಂಕಿ ಮತ್ತಿತರರು ಉಪಸ್ಥಿತರಿದ್ದರು.

ರಾಘಣ್ಣನ 3 ಲಕ್ಷ ಮತಗಳಿಂದ ಗೆಲ್ಲಿಸಿ: ವಿಜಯೇಂದ್ರ ಕರೆ

ಶಿವಮೊಗ್ಗ: ಯಡಿಯೂರಪ್ಪನವರು ರೈತ ಬಜೆಟ್ ಮಂಡಿಸುವ ಮೂಲಕ ತಾವೊಬ್ಬ ರೈತ ಮುಖ್ಯಮಂತ್ರಿ ಎಂದು ನಿರೂಪಿಸಿದರು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ರೈತ ಉತ್ಪಾದಕರ ಸಂಸ್ಥೆಗಳ ಪ್ರಮುಖರು ಮತ್ತು ಪ್ರಗತಿಪರ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಯಡಿಯೂರಪ್ಪ ಎಂದರೆ ಅಭಿವೃದ್ಧಿ ಎಂಬ ಮಾತು ಇದೆ. ಇದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ರಾಘವೇಂದ್ರ ಅವರು ಸಂಸದರಾಗಿ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಇಲ್ಲಿ ಕೂಡ ಅಭಿವೃದ್ಧಿ ಎಂದರೆ ರಾಘಣ್ಣ ಎಂಬ ಮಾತಿದೆ. ಇಂತಹ ರಾಘಣ್ಣನನ್ನು ಸುಮಾರು ಮೂರು ಲಕ್ಷದ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರ ಬಾಳು ಹಸನಾಗಬೇಕು ಎಂಬುದು ಪ್ರಧಾನಿಯವರ ಇಚ್ಛೆಯಾಗಿದೆ. ಅದಕ್ಕೆ ಪೂರಕವಾದ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಮೆಚ್ಚಿ ಈಗಾಗಲೇ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಕೈ ಜೋಡಿಸಿದ್ದು ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ ದೇಶದಲ್ಲೇ ಪ್ರಥಮ ರೈತ ಬಜೆಟ್ ಮಂಡಿಸಿದರು. ಜೊತೆಗೆ ಹತ್ತು ಹಲವಾರು ರೈತ ಪರ ಕಾರ್ಯಕ್ರಮ ರೂಪಿಸಿದರು. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆ 6 ಸಾವಿರ ನೀಡಿದಾಗ ಯಡಿಯೂರಪ್ಪನವರು ರಾಜ್ಯ ಸರ್ಕಾರದಿಂದ 4 ಸಾವಿರ ಸೇರಿಸಿ ನೀಡಿದರು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ರೈತರಿಗೆ ಬೇಕಾದ ಗೊಬ್ಬರವನ್ನು ಅತ್ಯಂತ ಕಡಿಮೆ ಸಬ್ಸಿಡಿ ದರದಲ್ಲಿ ನೀಡಲಾಗಿದೆ. ಯಡಿಯೂರಪ್ಪನವರ ಅವಧಿಯಲ್ಲಿ ರೈತರ ಪಂಪ್ ಸೆಟ್‌ಗಳಿಗೆ ಕೇವಲ 25 ಸಾವಿರ ರು.ಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಅದು ಈಗ ಎರಡೂವರೆ ಲಕ್ಷ ರು. ಆಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿತ್ತು. ಅದನ್ನೂ ಕೂಡ ನಿಲ್ಲಿಸಲಾಗಿದೆ ಎಂದು ದೂರಿದರು.ಸಂಸದರಾಗಿ ಬಿ.ವೈ.ರಾಘವೇಂದ್ರ ಮತ್ತೊಮ್ಮೆ ಗೆಲ್ಲುತ್ತಾರೆ. ರಾಜ್ಯದಲ್ಲಿ ಇದುವರೆಗೆ ಕಾಣದ ಉತ್ತಮ ವಾತಾವರಣ ಇದೆ ಎಂದರು.

ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ. ಎಸ್.ಪಾಟೀಲ್ ನಡಹಳ್ಳಿ, ಕೇಂದ್ರ ರೈತ ಮೋರ್ಚಾದ ಮುಖಂಡರಾದ ಜಯಸೂರ್ಯ, ಶಂಭುಕುಮಾರ್, ಆನಂದ್, ಡಾ. ನವೀನ್ ಇನ್ನಿತರರಿದ್ದರು.

ಅಲ್ಪಸಂಖ್ಯಾತರಿಗೆ ಕೊಡುವ ಕೈಯಿಂದ ರೈತನಿಗ್ಯಾಕೆ ಬರೆ?

ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ರು. ಘೋಷಣೆ ಮಾಡಲು ಸರ್ಕಾರದ ಬಳಿ ಹಣವಿದೆ. ಆದರೆ, ಬರಗಾಲದಲ್ಲಿ ತತ್ತರಿಸಿದ ರೈತನಿಗೆ ಒಂದು ರುಪಾಯಿ ಕೊಡಲು ಇವರ ಬಳಿ ಹಣವಿಲ್ಲ. ಜನರಿಗೆ ವಂಚನೆ ಮಾಡಲು ಆಗುವುದಿಲ್ಲ. ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿದೆ. ನೀವೆಲ್ಲ ರಾಘಣ್ಣನನ್ನು ಗೆಲ್ಲಿಸಲು ರೈತರು ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.