ಡಿಕೆಶಿ ಪ್ರತಿಕೃತಿಗೆ ಸಿಡಿ ಹಾರ ಹಾಕಿ ಬೆಂಕಿ ಹಚ್ಚಿ ಪ್ರತಿಭಟನೆ

| Published : May 09 2024, 12:45 AM IST

ಡಿಕೆಶಿ ಪ್ರತಿಕೃತಿಗೆ ಸಿಡಿ ಹಾರ ಹಾಕಿ ಬೆಂಕಿ ಹಚ್ಚಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ರಾಮನಗರ: ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳನ್ನು ತಡೆದು ಪ್ರತಿಭಟಿಸಿದರು.

ಅಲ್ಲದೆ, ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವಿದ್ದ ಪ್ರತಿಕೃತಿಗೆ ಸಿಡಿ ಹಾರ ಹಾಕಿ, ಚಪ್ಪಲಿಯಿಂದ ಹೊಡೆದರು. ಇಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಅಡ್ಡಿ ಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆಯಿತು.

ಪೊಲೀಸರ ವಿರೋಧದ ನಡುವೆಯೂ ಪ್ರತಿಭಟನಾಕಾರರು ಪ್ರತಿಕೃತಿಗೆ ಬೆಂಕಿ ಹಚ್ಚಿದರಲ್ಲದೆ ಡಿಕೆಶಿ ಭಾವಚಿತ್ರವಿರುವ ಪ್ಲ್ಯಾಕಾರ್ಡ್(ಫಲಕ) ಗಳನ್ನು ಅದರಲ್ಲಿ ದಹಿಸಿದರು. ತಕ್ಷಣ ಪೊಲೀಸರು ಬೆಂಕಿ ನಂದಿಸಿದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಮತ್ತೊಂದೆಡೆ ಪ್ಲ್ಯಾಕಾರ್ಡ್ ಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚಿ ಸಿಟ್ಟು ಪ್ರದರ್ಶಿಸಿತು.

ಎಡಿಸಿ - ಎಎಸ್ಪಿಗೆ ಮನವಿ ಸಲ್ಲಿಕೆ :

ಆನಂತರ ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ನೇತೃತ್ವದಲ್ಲಿ ಉಭಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಹಾಗೂ ಪೊಲೀಸ್ ಭವನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಐಪಿಸಿ 354 ಸಿ, 354 ಡಿ ಮತ್ತು 66 ಇಐಟಿ ಅನ್ವಯವಾಗಿದ್ದು, ಹೀನಸ್ ಪ್ರಕರಣವಾಗಿದೆ. ಹಾಸನ ಜಿಲ್ಲೆಯ ಎಸ್ಪಿರವರು ಆರೋಪಿಗಳನ್ನು ಬಂಧಿಸದೇ ಓಡಾಡಲು ಬಿಟ್ಟು, ಬೇರ್ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಎಫ್ ಐಆರ್ ದಾಖಲಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ಪ್ರಗತಿ ಸಾಧಿಸಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್ ಐಟಿಗೆ ವಹಿಸಿದ್ದು, ಕೇಸಿಗೆ ಸಂಬಂಧಿಸಿದಂತೆ ವರದಿಗಳನ್ನು ಎಸ್ ಐಟಿಗೆ ನೀಡದೆ ತಮ್ಮಲ್ಲಿಯೇ ಇಟ್ಟುಕೊಂಡಿದ್ದು, ಆರೋಪಿಗಳಿಗೆ ಅನುಕೂಲವಾಗುವಂತೆ ಕೇಸನ್ನು ಮುಚ್ಚಿಟ್ಟಿದ್ದಾರೆ ಎಂದು ದೂರಿದರು.

ಪೊಲೀಸ್ ಇಲಾಖೆಯಿಂದ ಆರೋಪಿ ಎ - 1 ಕಾರ್ತಿಕ್ ಗೌಡನನ್ನು ಬಂಧಿಸಲು ಈವರೆಗೂ ಯಾವುದೇ ತಂಡ ರಚಿಸಿಲ್ಲ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಹಾಸನ ಎಸ್ಪಿಯವರು ಆರೋಪಿಗಳ ಪರವಾಗಿ ನಿಂತಿದ್ದಾರೆ. ವಕೀಲ ದೇವರಾಜೇಗೌಡರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೂ ಮಾಜಿ ಸಂಸದ ಎಲ್.ಆರ್ .ಶಿವರಾಮೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲು ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದರು.

ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಕೇಸನ್ನು ತನಿಖೆ ಮಾಡಲು ಇಲ್ಲಿಯವರೆಗೆ ಯಾವುದೇ ಕ್ರಮ ವಹಿಸಿಲ್ಲ. ಪ್ರಕರಣವನ್ನು ತನಿಖೆಗೆ ಪಡೆಯಲು ಹಾಸನದ ಎಸ್ಪಿಯವರು ಯಾವುದೇ ರೀತಿಯ ತನಿಖಾ ಸಂಸ್ಥೆಯಿಂದ ಹ್ಯಾಂಡಿಂಗ್ ಓವರ್ ನೋಟಿಸ್ ನೀಡಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳು ಪ್ರಬಲವಾಗಿರುವುದರಿಂದ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿರವರು ಎಸ್ ಐಟಿ ಸಂಸ್ಥೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ಬಳಸಿಕೊಂಡು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್ .ಡಿ.ರೇವಣ್ಣ ಅವರನ್ನು ಬಂಧಿಸುವ ಮೂಲಕ ಕೇಸನ್ನು ಮರೆಮಾಚಲು ಹೊರಟಿದ್ದಾರೆ ಎಂದು ದೂರಿದರು.

ಸಂತ್ರಸ್ಥೆ ಎನ್ನಲಾದ ಮಹಿಳೆಯನ್ನು ವಶಕ್ಕೆ ಪಡೆದಿರುವುದಾಗಿ ಹೇಳಲಾಗಿದೆ. ಈವರೆವಿಗೂ ಪೊಲೀಸ್ ಇಲಾಖೆ ಹೇಳಿಕೆಯನ್ನು ಪಡೆದು ತನಿಖೆ ನಡೆಸುವಲ್ಲಿ ವಿಫಲವಾಗಿದೆ. ರೇವಣ್ಣ ಅವರನ್ನು ಬಂಧಿಸುವಲ್ಲಿದ್ದ ಮುತವರ್ಜಿ ಪ್ರಕರಣದ ತನಿಖೆ ನಡೆಸುವಲ್ಲಿ ಕಾಣುತ್ತಿಲ್ಲ. ಸಿಎಂ-ಡಿಸಿಎಂ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಹಾಗೂ ಅವರು ಹೇಳಿದಂತೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಕಾನೂನು ರೀತಿಯ ನ್ಯಾಯ ಸಿಗುವುದಿಲ್ಲ. ಆದ್ದರಿಂದ ಸದರಿ ಪ್ರಕರಣವನ್ನು ಸಿಬಿಐ ಸಂಸ್ಥೆಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಜೆಡಿಎಸ್ ಮುಖಂಡರಾದ ಜಯಮುತ್ತು, ನಾಗರಾಜು, ಸೋಮೇಗೌಡ, ನರಸಿಂಹಮೂರ್ತಿ, ರವಿ, ರಾಜಶೇಖರ್, ಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಪುಷ್ಪಾಲತಾ ಮತ್ತಿತರರು ಭಾಗವಹಿಸಿದ್ದರು.ಬಾಕ್ಸ್ .............

ಪ್ರತಿಭಟನಾಕಾರರ ವಿರುದ್ಧ ಪ್ರಯಾಣಿಕರ ಆಕ್ರೋಶ:

ಈ ಪ್ರತಿಭಟನೆಯಿಂದಾಗಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಬಿಸಿಲ ಬೇಗೆ ಹೆಚ್ಚಾಗಿದ್ದರಿಂದ ವಾಹನಗಳಲ್ಲಿ ಕುಳಿತುಕೊಳ್ಳಲಾಗದೆ ಸವಾರರು, ಪ್ರಯಾಣಿಕರು ಪರದಾಡಿದರು. ಕೊನೆಗೆ ಮಹಿಳಾ ಪ್ರಯಾಣಿಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿಗೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಮಹಿಳಾ ಪ್ರಯಾಣಿಕರನ್ನು ಸಮಾಧಾನ ಪಡಿಸಿದರು.

8ಕೆಆರ್ ಎಂಎನ್ 1,2,3.ಜೆಪಿಜಿ

1.ರಾಮನಗರದಲ್ಲಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುತ್ತಿರುವುದು

2.ರಾಮನಗರದಲ್ಲಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

3.ಜೆಡಿಎಸ್ -ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಯಾಣಿಕರು ಮಾತಿನ ಚಕಮಕಿ ನಡೆಸಿದರು.