ಚುನಾವಣಾ ನಂತರ ನಿರಾಳಗೊಂಡ ಅಭ್ಯರ್ಥಿಗಳು

| Published : May 09 2024, 12:45 AM IST

ಸಾರಾಂಶ

ಕಾರ್ಯಕರ್ತರೊಂದಿಗೆ ಮತದಾನ ಕುರಿತು ರಾಜಾ ವೇಣುಗೋಪಾಲ ನಾಯಕ ಚರ್ಚೆ

ಕನ್ನಡಪ್ರಭ ವಾರ್ತೆ ಸುರಪುರ

ಅಬ್ಬರದಿಂದ ಲೋಕಸಭಾ ಮತ್ತು ವಿಧಾನಸಭಾ ಉಪ ಚುನಾವಣೆ ಮತದಾನ ಮುಗಿದ ಬಳಿಕ ಸುರಪುರ ಮತಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಕೊಂಚ ನಿರಾಳಗೊಂಡಿದ್ದು, ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದರು. ಬೆಳಗ್ಗೆ ತಮ್ಮನಿವಾಸಕ್ಕೆ ಬಂದ ಕಾರ್ಯಕರ್ತರು ಮತ್ತು ಮುಖಂಡರ ಜತೆ ಮತದಾನ ಕುರಿತು ಚರ್ಚೆ ನಡೆಸಿದರು.

ಈ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ, ತಂದೆ ರಾಜಾ ವೆಂಕಟಪ್ಪ ನಾಯಕ ಅವರಿಲ್ಲದೆ ಪ್ರಥಮ ಚುನಾವಣೆ ಎದುರಿಸಿದ್ದೇನೆ. ಸಾಕಷ್ಟು ಅನುಭವವಾಗಿದೆ. ಕಾರ್ಯಕರ್ತರು, ಮುಖಂಡರು, ಬೆಂಬಲಿಗರು, ಅಭಿಮಾನಿಗಳು ಉತ್ಸಾಹ ತೋರಿದ್ದಾರೆ. ಎಲ್ಲೆಡೆ ಉತ್ತಮ ಮತದಾನವಾಗಿದ್ದು, ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಶೀಘ್ರದಲ್ಲೇ ಎಂದಿನಂತೆ ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುವೆ ಎಂದರು.

ಅಧಿಕಾರ ಶಾಶ್ವತವಲ್ಲ. ಅಧಿಕಾರ ಬರುತ್ತೆ ಹೋಗುತ್ತೆ. ನನ್ನ ಕಾರ್ಯಕರ್ತರನ್ನು ಕಾಯುವ ಕೆಲಸ ಮಾಡಿ ಹುಣಸಗಿ ಮತ್ತು ಸುರಪುರ ತಾಲೂಕುಗಳನ್ನು ಅಭಿವೃದ್ಧಿ ಮಾಡುವೆ. ತಂದೆ ಬಿಟ್ಟು ಹೋಗಿರುವ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಪೂರೈಸಿ ನನ್ನ ಕನಸಿನ ಅಭಿವೃದ್ಧಿ ಕೆಲಸ ನಂತರ ಒತ್ತು ನೀಡುವೆ ಎಂದರು.