ಅಧ್ಯಾತ್ಮ, ಧಾರ್ಮಿಕ ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ: ಡಾ. ಶಂಕರ ಭಟ್ಟ

| Published : May 10 2024, 01:34 AM IST

ಸಾರಾಂಶ

೨೫ ದಿನಗಳ ಕಾಲ ಶಿಬಿರದಲ್ಲಿ ಅಗತ್ಯವಾದ ಸಂಧ್ಯಾವಂದನೆ, ಜಪ- ತಪ, ಸೂಕ್ತಾದಿಗಳು, ಶಂಕರ ಸ್ತೋತ್ರ, ರುದ್ರ, ಯೋಗ ಮುಂತಾದವುಗಳ ಜತೆ ಬದುಕಿಗೆ ಬೇಕಾದ ಸನ್ಮಾರ್ಗದ ದಾರಿಗಳನ್ನು ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ನೀಡಿದ್ದಾರೆ.

ಯಲ್ಲಾಪುರ: ಇಂತಹ ಸಂಸ್ಕೃತಿ, ಆಧ್ಯಾತ್ಮಿಕ, ಧಾರ್ಮಿಕ ಶಿಕ್ಷಣದ ಶಿಬಿರದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಶಿಬಿರದಲ್ಲಿ ಏಕಾಗ್ರತೆಯಿಂದ ಸುಮ್ಮನೆ ಕುಳಿತುಕೊಳ್ಳುವ ರೂಢಿಯನ್ನು ಬೆಳೆಸಿಕೊಂಡರೆ ಭವಿಷ್ಯತ್ತಿನ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತೀರಿ ಎಂದು ಸ್ವರ್ಣವಲ್ಲಿಯ ಶ್ರೀ ರಾಜರಾಜೇಶ್ವರೀ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶಂಕರ ಭಟ್ಟ ಬಾಲೀಗದ್ದೆ ತಿಳಿಸಿದರು.

ಮೇ ೮ರಂದು ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ವಸಂತ ವೇದ- ಸಂಸ್ಕೃತ- ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

೨೫ ದಿನಗಳ ಕಾಲ ಶಿಬಿರದಲ್ಲಿ ಅಗತ್ಯವಾದ ಸಂಧ್ಯಾವಂದನೆ, ಜಪ- ತಪ, ಸೂಕ್ತಾದಿಗಳು, ಶಂಕರ ಸ್ತೋತ್ರ, ರುದ್ರ, ಯೋಗ ಮುಂತಾದವುಗಳ ಜತೆ ಬದುಕಿಗೆ ಬೇಕಾದ ಸನ್ಮಾರ್ಗದ ದಾರಿಗಳನ್ನು ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ನೀಡಿದ್ದಾರೆ. ಅದು ಶಿಬಿರದ ನಂತರವೂ ಜೀವನದುದ್ದಕ್ಕೂ ಮುಂದುವರಿಸಿಕೊಂಡು ಹೋಗಬೇಕು ಎಂದರು.

ನಾಟಕ ಪುಸ್ತಕ ಕರ್ತೃ ಟಿ.ವಿ. ಕೋಮಾರ ಮಾತನಾಡಿ, ಪೌರೋಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಗೌರವ ಲಭಿಸುತ್ತಿದೆ. ಆದರೆ ಅಲ್ಲಿ ಪರಿಪೂರ್ಣ ಅಧ್ಯಯನ ಮಾಡಿದ ವ್ಯಕ್ತಗಳಿಗೆ ಐಟಿ ಉದ್ಯೋಗಿಗಳಿಗಿಂತಲೂ ಹೆಚ್ಚಿನ ಸಂಪಾದನೆ ಪಡೆಯುವ ಅವಕಾಶ ಲಭಿಸುತ್ತಿದೆ. ವೇದ ಮತ್ತು ಸಂಸ್ಕೃತದಿಂದ ನಮ್ಮ ಮೌಲ್ಯ, ಪರಂಪರೆಯ ಜತೆ ಕೇವಲ ಐದಾರು ಗಂಟೆಗಳ ಕಾಲ ಶ್ರಮ ವಹಿಸಿದರೆ ಸಾಕಷ್ಟು ಸಂಪಾದನೆ ಮತ್ತು ಕುಟುಂಬದ ಜತೆ ನೆಮ್ಮದಿ ಬದುಕನ್ನು ಕಾಣಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿ, ಈ ವರ್ಷದ ಈ ಶಿಬಿರ ಯಶಸ್ಸು ಕಂಡಿದೆ. ಪಾಲಕರು ತಮ್ಮ ವಿದ್ಯಾರ್ಥಿಗಳಿಂದ ಶಿಬಿರದಲ್ಲಿ ಪಡೆದ ಜ್ಞಾನವನ್ನು ಮುಂದುವರಿಸಿಕೊಂಡು ಹೋಗುವುದರ ಜತೆ ನಮ್ಮ ಪಾಠಶಾಲೆಗಳಿಗೆ ಹೆಚ್ಚಿನ ಅಧ್ಯಯನಕ್ಕೆ ಕಳುಹಿಸಿದರೆ ಉತ್ತಮ ಪುರೋಹಿತರು, ವಿದ್ವಾಂಸರು ಆಗಬಹುದು ಎಂದರು.

ಶಿಬಿರಾರ್ಥಿಗಳ ಪರವಾಗಿ ಗಣೇಶ ಭಟ್ಟ, ಮಹಂತ ಭಾಗ್ವತ ತಮ್ಮ ಅನುಭವ ಹಂಚಿಕೊಂಡರು. ಸಂಸ್ಥೆಯ ನಿರ್ದೇಶಕರಾದ ಶಂಕರ ಭಟ್ಟ ತಾರೀಮಕ್ಕಿ, ನಾಗೇಂದ್ರ ಕವಾಳೆ, ಮತ್ತು ಶಿಬಿರ ಸಂಚಾಲಕರಲ್ಲೊಬ್ಬರಾದ ವಿ. ವೆಂಕಟರಮಣ ಭಟ್ಟ ಮತ್ತು ಶಾರದಾಂಬಾ ದೇವಸ್ಥಾನದ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ, ಮಾತೃಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ ಶುಭ ಹಾರೈಸಿದರು.

ಶಿಬಿರಾರ್ಥಿಗಳಿಂದ ವೇದಘೋಷ, ಪಾಠಶಾಲಾ ಮುಖ್ಯಾಧ್ಯಾಪಕ ಡಾ. ನರಸಿಂಹ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಗೌ. ಕಾರ್ಯದರ್ಶಿ ರಾಘವೇಂದ್ರ ಭಟ್ಟ ಸ್ವಾಗತಿಸಿದರು. ಅಧ್ಯಾಪಕ ಡಾ. ನರಸಿಂಹ ಭಟ್ಟ ನಿರ್ವಹಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ ವಂದಿಸಿದರು.