ಪೆನ್‌ಡ್ರೈವ್‌ ಪ್ರಕರಣ: ಸಂಪುಟದಿಂದ ಡಿಕೆಶಿ ವಜಾಗೊಳಿಸಿ

| Published : May 09 2024, 01:05 AM IST

ಪೆನ್‌ಡ್ರೈವ್‌ ಪ್ರಕರಣ: ಸಂಪುಟದಿಂದ ಡಿಕೆಶಿ ವಜಾಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಪಿತೂರಿ ಆರೋಪ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್‌ ಬೆಂ.ಗ್ರಾ. ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಆಗ್ರಹಿಸಿದರು.

ದೊಡ್ಡಬಳ್ಳಾಪುರ: ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪೆನ್‌ಡ್ರೈವ್‌ ಹಂಚಿಕೆ ಪಿತೂರಿ ಆರೋಪ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಜೆಡಿಎಸ್‌ ಬೆಂ.ಗ್ರಾ. ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಆಗ್ರಹಿಸಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಪಿತೂರಿ ವಿರೋಧಿಸಿ ನಗರದ ಪ್ರವಾಸಿ ಮಂದಿರದ ಬಳಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಣ್ಣುಮಕ್ಕಳಿಗೆ ಗ್ಯಾರಂಟಿ ಆಮಿಷವನ್ನೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಈಗ ಹೆಣ್ಣು ಮಕ್ಕಳ ಮರ್ಯಾದೆಯನ್ನು ಬೀದಿಗೆ ತಂದಿದೆ. ಈ ಸರ್ಕಾರ ಇರಬೇಕೋ, ರಾಜೀನಾಮೆ ಕೊಟ್ಟು ಹೋಗಬೇಕೋ ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕಿದೆ. ಒಂದು ಕಡೆ ಆಸೆ ತೋರಿಸಿ, ಮತ್ತೊಂದು ಕಡೆ ಮಾನಹಾನಿ ಮಾಡುತ್ತಿರುವ ವಾಸ್ತವ ತಿಳಿಯಬೇಕಿದೆ ಎಂದರು.

ಸೋಲಿನ ಆತಂಕದಿಂದ ಪಿತೂರಿ!

ಕಾಂಗ್ರೆಸ್ ಸರ್ಕಾರದ ಮೈತ್ರಿ ವೇಳೆ ಅಧಿಕಾರ ಮಾಡಲು ಬಿಡಲಿಲ್ಲ. ಆದರೆ ಎನ್‌ಡಿಎ ಮೈತ್ರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದು, ಇದು ಕಾಂಗ್ರೆಸ್ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೆನ್‌ಡ್ರೈವ್ ಷಡ್ಯಂತ್ರ ರೂಪಿಸಿದ್ದಾರೆ. ಒಬ್ಬ ವ್ಯಕ್ತಿ 2800 ವಿಡಿಯೋ ಮಾಡಲು ಸಾಧ್ಯವೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ವಿಡಿಯೋ ವೈರಲ್ ಮಾಡಿದ ವ್ಯಕ್ತಿಯೂ ಯೋಚಿಸಬೇಕಿತ್ತು. ಇದು ಜೆಡಿಎಸ್ ಪಕ್ಷವನ್ನು ತುಳಿಯುವ ಹುನ್ನಾರವಾಗಿದ್ದು, ರಾಹುಲ್ ಗಾಂಧಿ ಬಳಿ ಪ್ರಶಂಸೆ ಪಡೆಯಲು, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಸೋಲುವ ಹತಾಶೆಯಿಂದ ಈ ರೀತಿ ಷಡ್ಯಂತ್ರ ರೂಪಿಸಲಾಗಿದೆ. ಪಕ್ಷದ ವರಿಷ್ಠರು ಇಂತಹ ಷಡ್ಯಂತ್ರದಿಂದ ಆತಂಕಕ್ಕೆ ಒಳಗಾಗಬೇಕಿಲ್ಲ, ಜೆಡಿಎಸ್, ಮುಖಂಡರು ಕಾರ್ಯಕರ್ತರು ಜೊತೆಗಿದ್ದೇವೆ ಎಂದು ನೈತಿಕ ಬೆಂಬಲ ನೀಡಿದರು.

ಡಿಸಿಎಂ ಬೇಜವಾಬ್ದಾರಿ ವರ್ತನೆ:

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವಿಜಯ್ ಕುಮಾರ್ ಮಾತನಾಡಿ, ಅಶ್ಲೀಲ ವಿಡಿಯೋಗಳನ್ನು ಯಾರು ಸೋರಿಕೆ ಮಾಡಿದರು ಎನ್ನುವ ಅಂಶವನ್ನು ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಬಹಿರಂಗ ಮಾಡಿದ್ದಾರೆ. ಅವರು ನೇರವಾಗಿಯೇ ಸಾಕ್ಷಿ ಸಮೇತ ಡಿ.ಕೆ. ಶಿವಕುಮಾರ್ ಹೆಸರು ಹಾಗೂ ಮಾಜಿ ಸಂಸದ ಎಲ್ ಆರ್. ಶಿವರಾಮೇಗೌಡ ಅವರ ಹೆಸರನ್ನು ಹೇಳಿದ್ದಾರೆ. ಒಂದು ಸೂಕ್ಷ್ಮ ಪ್ರಕರಣದ ಬಗ್ಗೆ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ಉಪ ಮುಖ್ಯಮಂತ್ರಿ, ರಾಜಕೀಯ ಸ್ವಾರ್ಥಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು, ಅದಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿಗೆ ಧಕ್ಕೆ ಉಂಟು ಮಾಡುವ ಏಕೈಕ ಉದ್ದೇಶದಿಂದ ಈ ಸಂಚು ಸಂಚು ನಡೆಸಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಹೆಚ್. ಅಪ್ಪಯ್ಯಣ್ಣ, ಸಂಘಟನ ಕಾರ್ಯದರ್ಶಿ ಹುಸ್ಕೂರ್ ಆನಂದ್, ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ ಮಾಧ್ಯಮ ವಕ್ತಾರ ಕುಂಟನಹಳ್ಳಿ ಮಂಜುನಾಥ್, ನಗರ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್, ಹೋಬಳಿ ಅಧ್ಯಕ್ಷ ಸತೀಶ್, ವಿಶ್ವನಾಥ್, ಮುಖಂಡರಾದ ಚಂದ್ರಶೇಖರ್, ಕಲ್ಲುಪೇಟೆ ಚಂದ್ರು, ಆರ್.ಕೆಂಪರಾಜ್, ಅಂಚರಹಳ್ಳಿ ಆನಂದ್, ಶಾಂತಿನಗರ ಪ್ರಭಾಕ‌ರ್, ಅಮರ್‌ನಾಥ್ ಇತರರು ಉಪಸ್ಥಿತರಿದ್ದರು.8ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಂ.ಗ್ರಾ. ಜಿಲ್ಲಾ ಜೆಡಿಎಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.