ಗುಂಡ್ಲುಪೇಟೆಯಲ್ಲಿ ಶಾಂತಿಯುತ ಮತದಾನ

| Published : Apr 27 2024, 01:22 AM IST

ಸಾರಾಂಶ

ಲೋಕಸಭೆ ಚುನಾವಣೆಯ ಮತದಾನ ತಾಲೂಕಿನಲ್ಲಿ ಶುಕ್ರವಾರ ಶಾಂತಿಯುತವಾಗಿ ಮಂದಗತಿಯಲ್ಲಿ ನಡೆದರೆ, ಸಂಜೆ ಬಳಿಕ ಮತದಾನ ಕೆಲಕಾಲ ಬಿರುಸಿನಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಲೋಕಸಭೆ ಚುನಾವಣೆಯ ಮತದಾನ ತಾಲೂಕಿನಲ್ಲಿ ಶುಕ್ರವಾರ ಶಾಂತಿಯುತವಾಗಿ ಮಂದಗತಿಯಲ್ಲಿ ನಡೆದರೆ, ಸಂಜೆ ಬಳಿಕ ಮತದಾನ ಕೆಲಕಾಲ ಬಿರುಸಿನಿಂದ ನಡೆಯಿತು.ಮುಂಗಾರು ಮಳೆ ಬೀಳದ ಕಾರಣ ಗ್ರಾಮಾಂತರ ಪ್ರದೇಶದಲ್ಲಿ ರೈತರು, ಕೃಷಿ ಕಾರ್ಮಿಕರು ಆಸಕ್ತಿಯಿಂದ ಮತಗಟ್ಟೆಗೆ ಬಂದಿರಲಿಲ್ಲ. ಬೆಳಗ್ಗೆ ೭ ಗಂಟೆಗೆ ಪ್ರಾರಂಭವಾದ ಮತದಾನ ಮಧ್ಯಾಹ್ನದವರೆಗೆ ಬೇಕಾಬಿಟ್ಟಿಯಾಗಿ ಮತದಾರರು ಬಂದು ಮತ ಹಾಕಿದರು.

ತಾಲೂಕಿನ ಮಂಗಲ, ಕಳ್ಳೀಪುರ, ಮಲ್ಲಮ್ಮನಹುಂಡಿ ಗ್ರಾಮದ ಮತ ಯಂತ್ರ ತಾಂತ್ರಿಕ ದೋಷದಿಂದ ಕೆಲ ಕಾಲ ಸ್ಥಗಿತಗೊಂಡಿತ್ತು. ಬಳಿಕ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಮತದಾನ ನಡೆದಿದೆ.

ಮತ್ತೆ ಕೆಟ್ಟ ಮತಯಂತ್ರ: ತಾಲೂಕಿನ ತೆರಕಣಾಂಬಿ ಹುಂಡಿಯ ಮತಗಟ್ಟೆಯಲ್ಲಿ ಮೊದಲ ಬಾರಿ ಮತ ಯಂತ್ರ ಕೈ ಕೊಟ್ಟಿತು. ನಂತರ ಮತದಾನ ನಡೆಯುತ್ತಿದ್ದ ವೇಳೆ ಮತ್ತೆ ಮತಯಂತ್ರ ಕೆಟ್ಟು ಮತದಾನ ವಿಳಂಬವಾಯಿತು. ೨ ಬಾರಿಗೆ ಮತಯಂತ್ರ ಕೆಟ್ಟ ಇವಿಎಂನನ್ನು ಚುನಾವಣಾಧಿಕಾರಿಗಳು ಬದಲಿಸಲು ಸೂಚನೆ ಬಂದ ನಂತರ ಮತದಾನಕ್ಕಾಗಿ ಮತದಾರರು ಕೆಲ ಸಮಯ ಕಾದು ಕುಳಿತರು.

ಬೆಳಗ್ಗೆಯಿಂದಲೇ ಪ್ರಮುಖ ಪಕ್ಷಗಳ ಕಾರ್ಯಕರ್ತರು ಮತಗಟ್ಟೆಯ ಬಳಿ ಜಮಾಯಿಸಿ ಮತಗಟ್ಟೆಗೆ ಬರುತ್ತಿದ್ದ ಮತದಾರರನ್ನು ಕೈ ಮುಗಿದು ನಮ್ಮ ಪಕ್ಷದ ಗುರುತಿಗೆ ಮತನೀಡಿ ಎಂದು ದುಂಬಾಲು ಬೀಳುತ್ತಿದ್ದರು.

ವಿಧಾನ ಸಭಾ ಚುನಾವಣೆಯ ರೀತಿಯಲ್ಲಿ ಕಾರ್ಯಕರ್ತರ ಆರ್ಭಟ, ಅಬ್ಬರ, ಗಲಾಟೆಗಳು ಮಾತ್ರ ಈ ಚುನಾವಣೆಯಲ್ಲಿ ಕಂಡು ಬಂದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸಾಲುಗಟ್ಟಿ ಮತ ಚಲಾಯಿಸಿದ ದೃಶ್ಯ ಹೆಚ್ಚಿಗೆ ಕಾಣಲಿಲ್ಲ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾಜಿ ಸಚಿವೆ ಡಾ.ಗೀತಾಮಹದೇವಪ್ರಸಾದ್‌, ಚಿಕ್ಕಪ್ಪ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಪತ್ನಿ ವಿದ್ಯಾ ಗಣೇಶ್‌ರೊಂದಿಗೆ ಸ್ವಗ್ರಾಮ ಹಾಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದರು. ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಚೌಡಹಳ್ಳಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹಂಗಳ ಮತಗಟ್ಟೆಯಲ್ಲಿ ಮತದಾನ ಮಾಡಿದರು.