ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ

| Published : May 08 2024, 01:00 AM IST

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ಮತಗಟ್ಟೆಯಲ್ಲಿ ಮತದಾನ ಪ್ರಾರಂಭದಿಂದ 9 ಗಂಟೆ ವರೆಗೆ ಜನಜಂಗುಳಿ ಇತ್ತು. ಹೆಚ್ಚಿನ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಕಾಯುತ್ತಿದ್ದವರ ಉದ್ದನೆಯ ಸರತಿ ಸಾಲುಗಳು ಇದ್ದವು. 10 ಗಂಟೆಯ ಬಳಿಕ ಮತದಾನ ಪ್ರಮಾಣ ಕುಸಿಯುತ್ತಿದ್ದರೂ, ಮಧ್ಯಾಹ್ನದ ವರೆಗೂ ಒಂದೇ ರೀತಿಯಲ್ಲಿ ಸಾಗಿತ್ತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಸಾರ್ವತ್ರಿಕ ಚುನಾವಣೆ ಶಾಂತಿಯುತ ಮತದಾನ ನಡೆದಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ. 78.24, ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಶೇ.76.40 ಮತದಾನವಾಗಿದೆ.ಕ್ಷೇತ್ರ ವ್ಯಾಪ್ತಿಯಲ್ಲಿ ಅಮಾಸೆಬೈಲು, ಮಚ್ಚಟ್ಟು, ತೊಂಬಟ್ಟು, ಹಳ್ಳಿಹೊಳೆ, ಯಡಮೊಗೆ, ಬಸ್ರಿಬೇರು, ದೇವರಬಾಳು ಸೇರಿದಂತೆ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಗಳಲ್ಲಿ ನಕ್ಸಲ್ ಬಾಧಿತ ಪ್ರದೇಶದಲ್ಲಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳು ಇದ್ದರೂ ಎಲ್ಲ ಮತಗಟ್ಟೆಗಳಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ.

ಬಹುತೇಕ ಮತಗಟ್ಟೆಯಲ್ಲಿ ಮತದಾನ ಪ್ರಾರಂಭದಿಂದ 9 ಗಂಟೆ ವರೆಗೆ ಜನಜಂಗುಳಿ ಇತ್ತು. ಹೆಚ್ಚಿನ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಕಾಯುತ್ತಿದ್ದವರ ಉದ್ದನೆಯ ಸರತಿ ಸಾಲುಗಳು ಇದ್ದವು. 10 ಗಂಟೆಯ ಬಳಿಕ ಮತದಾನ ಪ್ರಮಾಣ ಕುಸಿಯುತ್ತಿದ್ದರೂ, ಮಧ್ಯಾಹ್ನದ ವರೆಗೂ ಒಂದೇ ರೀತಿಯಲ್ಲಿ ಸಾಗಿತ್ತು. ನಕ್ಸಲ್‌ ಬಾಧಿತ ಪ್ರದೇಶಗಳು, ಮಲೆನಾಡು ಪ್ರದೇಶಗಳು ಹಾಗೂ ಕರಾವಳಿಗಳಲ್ಲಿನ ಮತಗಟ್ಟೆಯಲ್ಲಿ ಮತದಾನದ ಉತ್ಸಾಹ ಕಂಡು ಬಂತು.

ಪ್ರಮುಖ ಮತಗಟ್ಟೆಗಳನ್ನುಹೊರತುಪಡಿಸಿ, ಬಹುತೇಕ ಗ್ರಾಮೀಣ ಪ್ರದೇಶದಲ್ಲಿನ ಮತಗಟ್ಟೆಯ ಹೊರಗೆ ರಾಜಕೀಯ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಂಖ್ಯೆ ಕಡಿಮೆ ಇತ್ತು. ಬೇರೆ ಬೇರೆ ರಾಜಕೀಯ ಪಕ್ಷಗಳ ಟೇಬಲ್ ಬಳಿ ಇದ್ದವರು ಕೂಡ ಪರಸ್ಪರ ಸೌಹಾರ್ದತೆಯಿಂದ ಇದ್ದರು.‌ ಮತಗಟ್ಟೆಗೆ ದೂರದಿಂದ ಬರುವವರಿಗೆ ಹಾಗೂ ಅಶಕ್ತರಿಗಾಗಿ ಅಲ್ಲಲ್ಲಿ ವಾಹನ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಮತಗಟ್ಟೆಯ ಮುಂಭಾಗದಲ್ಲಿ ಶಾಮಿಯಾನ ಹಾಗೂ ಕುರ್ಚಿಯ ವ್ಯವಸ್ಥೆ ಮಾಡಿದ್ದರಿಂದ ಸರತಿ ಸಾಲುಗಳಲ್ಲಿ ನಿಲ್ಲಲಾಗದವರು ವಿಶ್ರಾಂತಿ ಪಡೆದು ತೆರಳಲು ಸಹಾಯವಾಗಿತ್ತು.

ನಿರ್ದಿಷ್ಟ ಮತಗಟ್ಟೆಯಲ್ಲಿ ಮತದಾರರನ್ನು ಆಕರ್ಷಿಸಲು ಮಾಡಲಾಗಿದ್ದ ಸಖಿ ಮತಗಟ್ಟೆ, ಸೆಲ್ಫಿ ಪಾಯಿಂಟ್, ಸಾಂಪ್ರದಾಯಕ ಮತಗಟ್ಟೆ ಹಾಗೂ ಚಿಣ್ಣರ ಅಂಗಳ ನಿರ್ಮಿಸಲಾಗಿತ್ತು. ಹೊಸ ಮತದಾರರು ಖುಷಿ, ಖುಷಿಯಾಗಿ ಬಂದು ಮತದಾನದಲ್ಲಿ ಭಾಗವಹಿಸಿದ್ದರು.

80 ವರ್ಷ ದಾಟಿದವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರೂ, ಹೆಚ್ಚಿನ ಮತಗಟ್ಟೆಯಲ್ಲಿ ವಯೋವೃದ್ಧ ಹಾಗೂ ವಿಶೇಷ ಚೇತನ ಮತದಾರರು ಮತದಾನಕ್ಕಾಗಿ ಬಂದಿದ್ದರು. ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗೋಡು ಮತಗಟ್ಟೆಗೆ ರಿಕ್ಷಾದಲ್ಲಿ ಆಗಮಿಸಿದ ವಯೋವೃದ್ಧೆಯೋರ್ವರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಎತ್ತಿಕೊಂಡು ಹೋಗಿ ಮತದಾನಕ್ಕೆ ಸಹಾಯ ಮಾಡುವ ಮೂಲಕ ಗಮನ ಸೆಳೆದರು.

* ಜನನಾಯಕರಿಂದ ಹಕ್ಕು ಚಲಾವಣೆ

ಕುಂದಾಪುರ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಅಮಾಸೆಬೈಲು ಗ್ರಾಮ ಪಂಚಾಯಿತಿಯ ಮಚ್ಚಟ್ಟು ಗ್ರಾಮದ ಮತಗಟ್ಟೆಯಲ್ಲಿ ತಾಯಿ ಸುನಂದ ಜಿ. ಕೊಡ್ಗಿ ಹಾಗೂ ಪುತ್ರಿ ಮಹಿಮಾ ಕೊಡ್ಗಿ ಅವರ ಜೊತೆಯಲ್ಲಿ ಬಂದು ಮತದಾನ ಮಾಡಿದರು. ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾನ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ನಟ ಹಾಗೂ ನಿರ್ದೇಶಕ ರಿಷಭ್‌ ಶೆಟ್ಟಿ, ಕೆರಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.

* ಕತಾರ್‌ನಿಂದ ಬಂದು ಮತದಾನ

ದೂರದ ಕತಾರ್‌ನಲ್ಲಿ ಉದ್ಯೋಗಿಯಾಗಿರುವ ನಾಗರಾಜ್ ಕೌಂಜೂರು, ಮತದಾನ ಮಾಡಲೆಂದೇ ಸೋಮವಾರ ಕತಾರ್‌ನಿಂದ ಆಗಮಿಸಿ ಮಾವಿನಕಟ್ಟೆ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ, ಮಂಗಳವಾರ ಕತಾರ್‌ಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರು, ಮುಂಬೈ, ಹೈದರ್‌ಬಾದ್, ಹುಬ್ಬಳ್ಳಿ, ಬೆಳಗಾಂ ಮುಂತಾದ ಕಡೆಗಳಲ್ಲಿ ಉದ್ಯೋಗಾರ್ಥ ನೆಲೆಸಿದ್ದ ಬೈಂದೂರು ಕ್ಷೇತ್ರದ ಮತದಾರರು ದೊಡ್ಡ ಸಂಖ್ಯೆಯ ಊರಿಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಿದ್ದರು.

ಉಪ ವಿಭಾಗಾಧಿಕಾರಿ ರಶ್ಮೀ ಎಸ್.ಆರ್. ಹಾಗೂ ಉಪ ವಿಭಾಗದ ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಹಾಗೂ ಬಂದೋಬಸ್ತ್‌ ಕಾರ್ಯಗಳು ನಡೆದಿದೆ.