ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪವಿತ್ರಾ

| Published : May 10 2024, 01:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಸರ್ಕಾರಿ ಶಾಲೆಯಲ್ಲಿಯೇ ಅಭ್ಯಸಿಸಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ಪವಿತ್ರಾ ಮಡಿವಾಳಪ್ಪ ಕೊಣ್ಣೂರ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾಳೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಸರ್ಕಾರಿ ಶಾಲೆಯಲ್ಲಿಯೇ ಅಭ್ಯಸಿಸಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ ಪವಿತ್ರಾ ಮಡಿವಾಳಪ್ಪ ಕೊಣ್ಣೂರ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾಳೆ.

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಕೆಎಸ್ಆರ್‌ಟಿಸಿ ಬಸ್‌ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಡಿವಾಳಪ್ಪ ಕೊಣ್ಣೂರ ಅವರ ಪುತ್ರಿ ಪವಿತ್ರಾ, ಸರ್ಕಾರಿ ಆರ್‌ಎಂಎಸ್‌ಎ ಶಾಲೆಯಲ್ಲಿ ಓದಿಕೊಂಡು ಈ ಸಾಧನೆ ಮಾಡಿದ್ದಾಳೆ.

ವಿದ್ಯಾರ್ಥಿನಿಯ ಸಾಧನೆಯನ್ನು ಮೆಚ್ಚಿ ಆರ್‌ಎಂಎಸ್‌ಎ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ತೆಗ್ಗಿನಮಠ ಹಾಗೂ ಶಿಕ್ಷಕರು ಪವಿತ್ರಾಗೆ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದರು.

ಇದೆ ವೇಳೆ ಪವಿತ್ರಾ ಕೊಣ್ಣೂರ ಸರ್ಕಾರಿ ಆರ್‌ಎಂಎಸ್ಎ ಶಾಲೆಯ ಮುಖ್ಯಗುರುಮಾತೆ ನೀಲಮ್ಮ ತೆಗ್ಗಿನಮಠ ಹಾಗೂ ನನಗೆ ಬೋಧಿಸಿದ ಶಿಕ್ಷಕರು, ತಂದೆ ತಾಯಿಯವರಿಗೆ ಅಭಿನಂದಿಸಿದಳು. ನಂತರ ಮಾತನಾಡಿದ ಪವಿತ್ರಾ, ನನ್ನ ತಂದೆ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲಿ ನನಗೆ ಯಾವುದೇ ಕೆಲಸ ಹೇಳದೇ ವಿದ್ಯೆ ಕಲಿಯಲು ಪ್ರೋತ್ಸಾಹಿಸಿದರು. ಉತ್ತಮ ಸಾಧನೆ ಮಾಡಿ ಬೆಳೆಯಬೇಕು ಎಂದು ನನ್ನ ತಾಯಿ ಭಾರತಿ ಸ್ಫೂರ್ತಿಯಾಗಿದ್ದರು ಎಂದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಸರ್ಕಾರಿ ಆರ್‌ಎಂಎಸ್‌ಎ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ತೆಗ್ಗಿನಮಠ, ಶಿಕ್ಷಣ ಸಂಯೋಜಕ ಎಸ್.ಎ.ಮೇಟಿ, ಎಸ್.ಬಿ.ಸಜ್ಜನ, ಎಸ್.ಆರ್ ಪಾಟೀಲ ಸೇರಿದಂತೆ ಹಲವರು ಇದ್ದರು.

-------

ಶಾಸಕ ನಾಡಗೌಡರ ಮೆಚ್ಚುಗೆ

ವಿದ್ಯಾರ್ಥಿನಿ ಪವಿತ್ರಾ ಕೊಣ್ಣೂರ ಸಾಧನೆಗೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆರ್‌ಎಂಎಸ್‌ಎ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಮುದ್ದೇಬಿಹಾಳ ತಾಲೂಕಿನ ಘನತೆ ಎತ್ತಿ ಹಿಡಿದಿದ್ದಾಳೆ. ಮುಂದೆ ಕೂಡ ಅವಳು ಇದೇ ರೀತಿ ಸಾಧನೆ ಮಾಡುವ ಮೂಲಕ ದೇಶದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಹೆತ್ತವರ ಹಾಗೂ ಗುರುಗಳಿಗೆ ಗೌರವ ತಂದುಕೊಡಲಿ. ಈ ಬಾರಿ ತಾಲೂಕ ಕ್ಷೇತ್ರ ಶಿಕ್ಷಣ ಇಲಾಖೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಯುವಂತೆ ಮಾಡಿದ್ದಲ್ಲದೇ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

-----------

೯ಎಂಬಿಎಲ್೧: ಮುದ್ದೇಬಿಹಾಳ ಪಟ್ಟಣದ ಆರ್‌ಎಂಎಸ್‌ಎ ಶಾಲೆಯ ಮುಖ್ಯಶಿಕ್ಷಕಿ ನೀಲಮ್ಮ ತೆಗ್ಗಿನಮಠ ಹಾಗೂ ಶಿಕ್ಷಕರು ವಿದ್ಯಾರ್ಥಿನಿ ಪವಿತ್ರಾ ಕೊಣ್ಣೂರಗೆ ಸಿಹಿ ತಿನ್ನಿಸಿ ಸನ್ಮಾನಿಸಿ ಗೌರವಿಸಿದರು.

-----

ಕೋಟ್‌.....

ಯಾರೇ ಆಗಲಿ ಸಮಯ ವ್ಯರ್ಥ ಮಾಡಿಕೊಳ್ಳದೇ ಪರಿಶ್ರಮದಿಂದ ಸದಾ ಓದುವುದು ಮತ್ತು ಶಾಲೆಯಲ್ಲಿ ಗುರುಗಳು ಹೇಳಿದ ಪಾಠದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಮೂಲಕ ಕಂಠಪಾಠ ಮಾಡಿ ಆಭ್ಯಾಸ ಮಾಡಿದರೇ ಸಾಧನೆ ಮಾಡಲು ಸಾಧ್ಯ. ನಾನು ಹೇಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದೇನೋ ಅದೇ ರೀತಿಯಲ್ಲಿ ಮುಂಬರುವ ದಿನಗಳಲ್ಲೂ ಪಿಯುಸಿ ವಿಜ್ಞಾನ ವಿಭಾಗ ತೆಗೆದುಕೊಂಡು ವೈದ್ಯಳಾಗಿ ಸಾಮಾಜಿಕ ಸೇವೆ ಮಾಡುವ ಮೂಲಕ ನನ್ನ ಹೆತ್ತವರ ಕನಸು ನನಸು ಮಾಡುವ ಗುರಿ ಹೊಂದಿದ್ದೇನೆ.

- ಪವಿತ್ರಾ ಕೊಣ್ಣೂರು, ಜಿಲ್ಲೆಯ ಪ್ರಥಮ ರ್‍ಯಾಂಕ್‌ ಪಡೆದ ವಿದ್ಯಾರ್ಥಿನಿ