ಪ್ರಗತಿ ಪರಿಶೀಲನಾ ಸಭೆಗೆ ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಗೈರು

| Published : May 10 2024, 01:34 AM IST

ಪ್ರಗತಿ ಪರಿಶೀಲನಾ ಸಭೆಗೆ ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕುಗಳ ಆರ್ಥಿಕ ಚಟುವಟಿಕೆ, ಸರ್ಕಾರದ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿವೆ. ಆದರೆ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಗೆ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸದ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ರಾಜ್ಯಸಲಹಾ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ತಿಳಿಸಿದರು.

ನಗರದ ಲೀಡ್ ಬ್ಯಾಂಕ್ ಕಾರ್ಯಾಲಯ ಬ್ಯಾಂಕ್ ಬರೋಡಾ ವತಿಯಿಂದ ನಾಲ್ಕನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕುಗಳ ಆರ್ಥಿಕ ಚಟುವಟಿಕೆ, ಸರ್ಕಾರದ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿವೆ. ಆದರೆ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಸಕ್ತ ತೈಮಾಸಿಕ ಅವಧಿಯಲ್ಲಿ ೮೨೩೦.೭೦ ಕೋಟಿ ಇದ್ದು, ಇದರಲ್ಲಿ ಪ್ರತಿಶತ ಶೇ. ೧೧೨ರಷ್ಟು ಸಾಧನೆಯಾಗಿದ್ದು, ಆದ್ಯತಾ ರಂಗಕ್ಕೆ ೯೨೧೬.೭೫ ಕೋಟಿ ರು. ಸಾಲ ನೀಡಿ ಶೇ. ೧೧೨ರಷ್ಟು ಗುರಿ ಸಾಧಿಸಲಾಗಿದೆ. ಕೃಷಿ ರಂಗಕ್ಕೆ ೭೧೩೭.೦೩ ಕೋಟಿ ರು. ಸಾಲ ನೀಡಿ ಶೇ. ೧೦೭ರಷ್ಟು ಪ್ರಗತಿ ಸಾಧಿಸಲಾಗಿದೆ. ಕೈಗಾರಿಕಾ ರಂಗಕ್ಕೆ ೧೧೫೫.೫೭ ಕೋಟಿ ರು. ಸಾಲ ನೀಡಿ ಶೇ. ೧೫೩ರಷ್ಟು ಗುರಿ ಸಾಧನೆ ಹಾಗೂ ಇತರೆ ಆಧ್ಯತಾ ರಂಗಕ್ಕೆ ೮೧೬.೩೯ ಕೋಟಿ ರು. ಸಾಲ ನೀಡಿ ಶೇ. ೧೧೩ರಷ್ಟು ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ದುರ್ಬಲ ವರ್ಗದವರಿಗೆ ಈವರೆಗೆ ಒಟ್ಟು ೬೦೦೫.೮೫ ಕೋಟಿ ರು. ಸಾಲ ವಿತರಿಸಲಾಗಿದೆ. ಅಲ್ಪ ಸಂಖ್ಯಾತರಿಗೆ ೩೬೦.೯೫ ಕೋಟಿ ರು.ಮತ್ತು ಮಹಿಳಾ ಖಾತೆದಾರರಿಗೆ ೪೮೫೦.೭೪ ಕೋಟಿ ರು. ವಿತರಿಸಿರುವುದಾಗಿ ಹೇಳಿದರು.

ಸರ್ಕಾರದ ಹಲವು ಯೋಜನೆಗಳಾದ ಉದ್ಯೋಗಿನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳಾದ ಸ್ವ-ಉದ್ಯೋಗ ಯೋಜನೆ ಮತ್ತು ಇಡಿಪಿ ಯೋಜನೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಯೋಜನೆಗಳ ಅಡಿ ಅರ್ಜಿಗಳನ್ನು ಬ್ಯಾಂಕುಗಳಿಗೆ ಕಳುಹಿಸಲಾಗಿದ್ದು, ಸಾಲ ಮಂಜೂರಿಗೆ ಕ್ರಮ ವಹಿಸಲಾಗುತ್ತಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿಯೂ ಸಹ ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಸಾಲ ಮಂಜೂರಾತಿ ಮಾಡಬೇಕು ಎಂದು ಸೂಚಿಸಿದರು.

ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಡಾ. ನವೀನ್‌ಕುಮಾರ್, ಆರ್‌ಬಿಐ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ಡಿಡಿಎಂ ಹರ್ಷಿತ ಸಭೆಯಲ್ಲಿ ಭಾಗವಹಿಸಿದ್ದರು.