ಶರಣರ ವಚನ ಅರ್ಥೈಸಿಕೊಂಡರೇ ಬಾಳು ಬಂಗಾರ: ಡಾ.ಸಿದ್ದರಾಮ ಸ್ವಾಮೀಜಿ

| Published : May 09 2024, 01:01 AM IST

ಶರಣರ ವಚನ ಅರ್ಥೈಸಿಕೊಂಡರೇ ಬಾಳು ಬಂಗಾರ: ಡಾ.ಸಿದ್ದರಾಮ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅನುಭಾವ ಚಿಂತನ ಕಾರ್ಯಕ್ರಮದಲ್ಲಿ ಗದಗ-ಡಂಬಳದ ತೋಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜೀವನ ಸಾರ್ಥಕವಾಗಬೇಕಾದರೇ ಪ್ರತಿಯೊಬ್ಬರು ಸಾಮರಸ್ಯದಿಂದ ವಿಶ್ವ ಕುಟುಂಬಿಯಾಗಿ ಬದುಕಬೇಕು ಎಂದು ಗದಗ-ಡಂಬಳದ ತೋಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ ನುಡಿದರು.

ಪಟ್ಟಣದ ಪತ್ರಿ ಬಸವನಗರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಪತ್ರಿ ಬಸವೇಶ್ವರ ಶರಣ ಸಂಸ್ಕ್ರತಿ ದ್ವಾದಶೋತ್ಸವ ಹಾಗೂ ಬಸವ ಜಯಂತಿ ಅಂಗವಾಗಿ ನಡೆದ ಅನುಭಾವ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಚನಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ನಡೆದರೇ ಬಾಳು ಬಂಗಾರವಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಸವ ಮಂಟಪದ ಮೂಲಕ ಸುಮಾರು 12 ವರ್ಷಗಳಿಂದ ಈ ಭಾಗದಲ್ಲಿ ವಿಧಾಯಕ ಕಾರ್ಯಗಳನ್ನು ಹಮ್ಮಿಕೊಂಡು ಬಸವಾಮೃತ ಹಂಚುತ್ತಿರುವ ಶರಣೆ ಪ್ರೇಮಾ ಅಂಗಡಿ ದಂಪತಿಗಳ ಕಾರ್ಯ ಅನನ್ಯ ಎಂದರು.

ಪತ್ರಿ ಬಸವೇಶ್ವರ ಅನುಭವ ಮಂಟಪದ ಮುಖ್ಯಸ್ಥೆ ಶರಣೆ ಪ್ರೇಮಾ ಅಂಗಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಅಧ್ಯಯನ ಸೇರಿಂತೆ ಪ್ರತಿಭಾವಂತರನ್ನು ರೂಪಿಸಲು ಈ ಅನುಭವ ಮಂಟಪವು ಸದಾ ಮುಂಚೂಣಿಯಲ್ಲಿದ್ದು, ನಿತ್ಯ ಹಲವು ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಬೈಲಹೊಂಗಲದ ಜನರು ಜಾತಿ, ಮತ, ಪಂಥವಿಲ್ಲದೇ ಬಾಗಿಯಾಗುತ್ತಿರುವದು ಮತ್ತಷ್ಟು ಪುಷ್ಟಿ ನೀಡಿದೆ ಎಂದರು. ಹಿರಿಯರಾದ ಶಿವಪ್ಪ ಮತ್ತಿಕೊಪ್ಪ, ಸಾಹಿತಿ ಕಿರಣ ಗಣಾಚಾರಿ, ಡಾ.ಎಫ್‌.ಡಿ.ಗಡ್ಡಿಗೌಡರ, ಡಾ.ನಿಂಗನಗೌಡ ಪಾಟೀಲ, ಗಿರೀಜಾ ಪಾಟೀಲ, ಮಹಿಳಾ ಕ್ರಿಕೆಟ್‌ ಪಟು ಶ್ರೇಯಾಂಕಾ ಮೆಟಗುಡ್ಡ, ಉದ್ಯಮಿ ಮಹಾಂತೇಶ ಕೋಟಗಿ, ಚಿಕ್ಕೊಪ್ಪದ ಬಸವ ಮಂಟಪದ ಮುಖ್ಯಸ್ಥ ಚನ್ನಪ್ಪ ನರಸಣ್ಣವರ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಶೋಭಾ ಹಂಪಿಹೊಳಿ, ಶಾಂತಕ್ಕ ಖೊದಾನಪೂರ, ಗಂಗಪ್ಪ ಅಂಗಡಿ, ಸುವರ್ಣ ಬಿಜಗುಪ್ಪಿ ಮುಂತಾದವರು ಉಪಸ್ಥಿತರಿದ್ದರು.

ಡಾ.ಎಫ್‌.ಡಿ.ಗಡ್ಡಿಗೌಡರ ಸಂಪಾದಕತ್ವದ ಪತ್ರಿಬಸವ ವೃಕ್ಷದ ದ್ವಾದಶ ದಳ ಸ್ಮರಣ ಸಂಚಿಕೆಯನ್ನು ಡಾ.ಸಿದ್ದರಾಮ ಸ್ವಾಮೀಜಿ ಬಿಡುಗಡೆಗೊಳಿಸಿದರು. ಚಿಕ್ಕೊಪ್ಪ ವೀರಮಾತೆ ಅಕ್ಕನಾಗಲಾಂಭಿಕಾ ಅಕ್ಕನ ಬಳಗದ ಸದಸ್ಯರಿಗೆ ಪತ್ರಿಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಹಿತಿ ಕಿರಣ ಗಣಾಚಾರಿ ಅವರು ಶರಣ ಸಂಸ್ಕ್ರತಿಯಲ್ಲಿ ಯುವಕ ಯುವತಿಯರು ಅಂದು-ಇಂದು ಎಂಬುದರ ಕುರಿತು ಉಪನ್ಯಾಸ ನೀಡಿದರು. ಪುಟಾಣಿಗಳಾದ ಅಶ್ವಿಣಿ, ಅನುರಾಧಾ ಇವರಿಂದ ವಚನ ಗಾಯನ ಜರುಗಿತು. ಮುಕ್ತಾಯಕ್ಕ ಬಳಗದ ಸದಸ್ಯ ವಿಜಯಾ ಹಾಲಭಾಂವಿ ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ ನೀಲಪ್ಪವರ ನಿರೂಪಿಸಿದರು. ಪತ್ರಯ್ಯ ಕುಲಕರ್ಣಿ ವಂದಿಸಿದರು.