ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ

| Published : Apr 23 2024, 12:46 AM IST / Updated: Apr 23 2024, 12:47 AM IST

ಸಾರಾಂಶ

ಯಾವುದೇ ರಾಜಕೀಯ ಪಕ್ಷಗಳಿಗೆ ಸಂವಿಧಾನ ಬದಲಾವಣೆ ಮಾಡುವ ಹಕ್ಕು, ಅಧಿಕಾರ ಇಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯಾವುದೇ ರಾಜಕೀಯ ಪಕ್ಷಗಳಿಗೆ ಸಂವಿಧಾನ ಬದಲಾವಣೆ ಮಾಡುವ ಹಕ್ಕು, ಅಧಿಕಾರ ಇಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಜಿಲ್ಲಾ ಮಾದಿಗ ಸಮುದಾಯದ ಮುಖಂಡರು, ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮತ್ತೆ ಮೋದಿ ಪ್ರಧಾನಿಯಾದರೆ ಸಂವಿಧಾನ, ಪ್ರಜಾಪ್ರಭುತ್ವ ನಾಶ ಮಾಡುತ್ತಾರೆ ಎಂದು ಸುಳ್ಳು ಹೇಳಿ ಜನತೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳಿಗೆ ಸಂವಿಧಾನ ಬದಲಾಯಿಸುವ ಹಕ್ಕು, ಅಧಿಕಾರ ಇಲ್ಲ ಎಂದು ಹೇಳಿದರು. ಒಳ ಮೀಸಲಾತಿ ಏಕೆ ಕೊಡಬೇಕು ಎಂದ ಸಿದ್ದರಾಮಯ್ಯನವರ ಕಾಂಗ್ರೆಸ್‌ಗೆ ವೋಟ್ ಹಾಕಬೇಕಾ? ಒಳ ಮೀಸಲಾತಿ ಕೊಟ್ಟ ಬಿಜೆಪಿಗೆ ಮತ ಹಾಕುವ ಮೂಲಕ ಪಕ್ಷದ ಅಭ್ಯರ್ಥಿ ಎಸ್.ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಮಾಡುವ ಕೆಲಸ ಆಗಬೇಕು ಎಂದರು. ಕಾಂಗ್ರೆಸ್ 60 ವರ್ಷ ಸರ್ಕಾರ ಮಾಡಿದರೂ ಅವರು ದಲಿತರ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಒಳ ಮೀಸಲಾತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬೆರಳು ತೋರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನ ಹೆಚ್ಚಿಸುವ ಕೆಲಸ ಮಾಡಲ್ಲಿಲ್ಲ, ಆದರೆ ವಿದ್ಯಾರ್ಥಿಗಳ ಮತ ಮಾತ್ರ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಬುಡುಬುಡಿಕೆ:

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ಇಂದಿನ ಕಾಂಗ್ರೆಸ್ ನೆಹರು ಕಾಂಗ್ರೆಸ್ ಅಲ್ಲ. ಸಿದ್ದರಾಮಯ್ಯ ನವರ ಕಾಂಗ್ರೆಸ್ ಆಗಿದೆ. ಸಿದ್ದರಾಮಯ್ಯ ಬುಡುಬುಡಿಕೆ ಎಂದು ಲೇವಡಿ ಮಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಮಾಜಿ ಅಧ್ಯಕ್ಷ ಆರ್.ಸುಂದರ್, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ. ಮೂಡಹಳ್ಳಿಮೂರ್ತಿ, ಬೂದಿತಿಟ್ಟು ರಾಜೇಂದ್ರ , ಮುಖಂಡರಾದ ಶಿವಕುಮಾರ್, ಶಿವು, ದ್ವಾರ್ಕಿ, ಶಿವಮಲ್ಲು, ಚಿನ್ನಸ್ವಾಮಿ, ಲಿಂಗರಾಜು, ಚನ್ನಬಸಪ್ಪ ಮಹದೇವಯ್ಯ, ರಾಚಯ್ಯ, ಹಸಗೂಲಿ ಸಿದ್ದಯ್ಯ, ವೆಂಕಟೇಶ್, ಗಣೇಶ್, ಮಾಜಿ ಗ್ರಾಪಂ ಅಧ್ಯಕ್ಷ ಅರಕಲವಾಡಿ ಮಹದೇವಯ್ಯ ಭಾಗವಹಿಸಿದ್ದರು.