ಮಹಾವೀರ ತೀರ್ಥಂಕರರ ಸಂದೇಶ ಸಮಾಜಕ್ಕೆ ಅಗತ್ಯವಿದೆ: ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ

| Published : Apr 23 2024, 12:46 AM IST / Updated: Apr 23 2024, 12:47 AM IST

ಮಹಾವೀರ ತೀರ್ಥಂಕರರ ಸಂದೇಶ ಸಮಾಜಕ್ಕೆ ಅಗತ್ಯವಿದೆ: ಅಭಿನವ ಚಾರುಕೀರ್ತಿ ಮಹಾಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

‘ಬದುಕು ಬದುಕಲು ಬಿಡು’ ಎಂಬ ಮಹಾವೀರರ ಕ್ರಾಂತಿಯ ನುಡಿಯನ್ನು ೨೬೦೦ ವರ್ಷಗಳ ನಂತರವೂ ನೆನಪಿಸಿಕೊಳ್ಳುತ್ತೇವೆ. ನಮ್ಮಂತೆ ಇತರ ಸಮಸ್ತ ಜೀವಿಗಳನ್ನು ಬದುಕಲು ಬಿಡಬೇಕು, ಯಾರಿಗೂ ತೊಂದರೆ ಕೊಡಬಾರದು ಎಂಬುದು ಈ ಮಾತಿನ ಸಾರಾಂಶ. ನಮಗೆ ಬದುಕಲು ಹಕ್ಕು ಇರುವ ಹಾಗೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ,

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಬದುಕೇ ಬದುಕಲು ಬಿಡು ಎಂಬ ಭಗವಾನ್ ಮಹಾವೀರ ತೀರ್ಥಂಕರರ ಸಂದೇಶವು ೨೬೦೦ ವರ್ಷಗಳಿಂದ ಇಂದಿನವರೆಗೂ ಪ್ರಚಲಿತವಾಗಿದ್ದು, ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕವಾಗಿದೆ ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿ ಶ್ರೀಮದ್ ಅಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಹೇಳಿದರು.

ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ನಡೆದ ಅಭಿನವ ಚಾರುಶ್ರೀಗಳ ಪ್ರಥಮ ವರ್ಷದ ಪಟ್ಟಾಭಿಷೇಕ ವಧ್ಯಂತೋತ್ಸವ ಹಾಗೂ ೨೬೩೬ ನೇ ಮಹಾವೀರ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.

ಮಹಾವೀರರು ೩೦ನೇ ವಯಸ್ಸಿನವರೆಗೆ ಯುವರಾಜರಾಗಿ ಬದುಕಿದವರು, ೩೦ನೇ ವಯಸ್ಸಿನಲ್ಲಿ ದೀಕ್ಷೆ ಪಡೆದು ೧೨ ವರ್ಷ ತಪಸ್ಸನ್ನು ಆಚರಿಸಿ ೪೨ನೇ ವಯಸ್ಸಿಗೆ ಜ್ಞಾನ ಪ್ರಾಪ್ತಿಯಾಗುತ್ತದೆ. ನಂತರ ೩೦ ವರ್ಷ ಇಡೀ ಜಗತ್ತಿಗೆ ಧರ್ಮೋಪದೇಶ ನೀಡಿ ತಮ್ಮ ೭೨ನೇ ವಯಸ್ಸಿನಲ್ಲಿ ಅವರ ಅಷ್ಟಕರ್ಮಗಳು ನಾಶವಾಗಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುತ್ತಾರೆ.

‘ಬದುಕು ಬದುಕಲು ಬಿಡು’ ಎಂಬ ಮಹಾವೀರರ ಕ್ರಾಂತಿಯ ನುಡಿಯನ್ನು ೨೬೦೦ ವರ್ಷಗಳ ನಂತರವೂ ನೆನಪಿಸಿಕೊಳ್ಳುತ್ತೇವೆ. ನಮ್ಮಂತೆ ಇತರ ಸಮಸ್ತ ಜೀವಿಗಳನ್ನು ಬದುಕಲು ಬಿಡಬೇಕು, ಯಾರಿಗೂ ತೊಂದರೆ ಕೊಡಬಾರದು ಎಂಬುದು ಈ ಮಾತಿನ ಸಾರಾಂಶ. ನಮಗೆ ಬದುಕಲು ಹಕ್ಕು ಇರುವ ಹಾಗೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದೆ, ಅನೇಕಾಂತವಾದ ಇದಕ್ಕೆ ಪುಷ್ಟಿ ನೀಡುತ್ತದೆ. ಅನೇಕಾಂತವಾದ ಎಂದರೆ ಒಂದು ವಿಷಯದ ಬಗ್ಗೆ ವಿವಿಧ ದೃಷ್ಟಿಕೋನದಲ್ಲಿ ಬೇರೆ ಬೇರೆ ಭಾವನೆ ಇರುತ್ತದೆ. ಎಲ್ಲರ ಭಾವನೆಗಳನ್ನು, ಸಂಸ್ಕಾರ, ವಿಧಿ-ವಿಧಾನಗಳನ್ನು, ವಿವಿಧ ಸಂಸ್ಕೃತಿ ಆಚರಣೆ, ಸಂಪ್ರದಾಯಗಳನ್ನು ಒಪ್ಪಿಕೊಳ್ಳುವುದೇ ಅನೇಕಾಂತವಾದ ಎಂದರು.

ಬೆಳಿಗ್ಗೆಯಿಂದಲೇ ಶ್ರೀಮಠದಲ್ಲಿ ಸಿಂಹಾಸನ ಪೂಜೆ, ಶ್ರೀಗಳ ಪ್ರಥಮ ವರ್ಷದ ವಾರ್ಷಿಕ ಪಟ್ಟಾಭಿಷೇಕ ವಧಂತೋತ್ಸವ, ನಂತರ ಭಗವಾನ್ ಮಹಾವೀರ ತೀರ್ಥಂಕರ ಮೂರ್ತಿಯನ್ನು ರಜತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಶ್ರೀಮಠದ ಆವರಣದಿಂದ ಮಂಗಲವಾದ್ಯ, ಚಿಟ್ಟಿಮೇಳ, ಚಂಡೆವಾದ್ಯ ಹಾಗೂ ನಗಾರಿ ವಾದನಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಪುನಃ ಚಾವುಂಡರಾಯ ವೇದಿಕೆಯಲ್ಲಿ ಪಂಚಾಮೃತ ಅಭಿಷೇಕ ಹಾಗೂ ಭಂಡಾರ ಬಸದಿಯಲ್ಲಿ ಕಲ್ಯಾಣ ನೆರವೇರಿಸಲಾಯಿತು.

ಪರಮಪೂಜ್ಯ ಆಚಾರ್ಯಶ್ರೀ ೧೦೮ ಅಂತರ್ಮನ ಪ್ರಸನ್ನಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು ಪಾವನ ಸಾನಿಧ್ಯ ವಹಿಸಿದ್ದರು.