ಮಾದರಿ ರಾಜ್ಯವನ್ನಾಗಿಸಿದ ನಾಲ್ವಡಿ ಒಡೆಯರ್‌

| Published : May 08 2024, 01:04 AM IST

ಮಾದರಿ ರಾಜ್ಯವನ್ನಾಗಿಸಿದ ನಾಲ್ವಡಿ ಒಡೆಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ದೂರದೃಷ್ಟಿ, ಜನಪರ ಕಾಳಜಿ, ಆಡಳಿತ ದಕ್ಷತೆ ಹಾಗೂ ಸಾಮಾಜಿಕ ನ್ಯಾಯದ ಕನಸುಗಾರರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌, ಶಿಕ್ಷಣ, ಸಾಹಿತ್ಯ, ಆರೋಗ್ಯ, ನೀರಾವರಿ, ಉದ್ಯೋಗ ಹಾಗೂ ಸಾಮಾಜಿಕ ನ್ಯಾಯದ ಸಾಕ್ಷಿಪ್ರಜ್ಞೆಯಂತೆ ಆಡಳಿತ ನಡೆಸಿದ್ದರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮ ದೇಶ ಸ್ವಾತಂತ್ರ್ಯಗಳಿಸಿ ಪ್ರಜಾಪ್ರಭುತ್ವ ಆಡಳಿತ ಬಂದರೂ ಮೈಸೂರು ಅರಸರ ಆಳ್ವಿಕೆಯನ್ನು ಒಪ್ಪಿಕೊಂಡಿದ್ದ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲವನ್ನು ಮೈಸೂರು ರಾಜ್ಯದ ಸುವರ್ಣಯುಗ ಎಂದು ಜನಮನ್ನಣೆ ಗಳಿಸಿತ್ತೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.

ಮಂಗಳವಾರ ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೂರದೃಷ್ಟಿ, ಜನಪರ ಕಾಳಜಿ, ಆಡಳಿತ ದಕ್ಷತೆ ಹಾಗೂ ಸಾಮಾಜಿಕ ನ್ಯಾಯದ ಕನಸುಗಾರರಾಗಿದ್ದ ನಾಲ್ವಡಿ ಅವರು ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ನೀರಾವರಿ, ಉದ್ಯೋಗ ಹಾಗೂ ಸಾಮಾಜಿಕ ನ್ಯಾಯದ ಸಾಕ್ಷಿಪ್ರಜ್ಞೆಯಂತೆ ಆಡಳಿತ ನಡೆಸಿದ್ದರು ಎಂದರು.

1915ರಲ್ಲಿ ಕಸಾಪ ಸ್ಥಾಪಿಸಿದ ಒಡೆಯರ್‌

ಶಿಕ್ಷಣ ಮತ್ತು ಸಾಹಿತ್ಯ ಪ್ರೇಮಿಗಳಾಗಿದ್ದ ನಾಲ್ವಡಿಯವರು 1915ರಲ್ಲಿ 40 ಮಂದಿ ಅಜೀವ ಸದಸ್ಯರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಮಹಾರಾಜರಿಗೆ ವಿದ್ಯಾಪ್ರಸಾರದ ಬಗ್ಗೆ ಹೆಚ್ಚು ಒಲವಿದ್ದು, ಆ ಕಾಲದಲ್ಲಿ ಅತ್ಯಂತ ಕಡಿಮೆ ಸಾಕ್ಷರತೆ ಇದ್ದುದರಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಜನತಾ ಶಾಲೆಯಾಗಿ ಸ್ಥಾಪಿಸಿ ಜನತೆಗೆ ಅಕ್ಷರ ಕಲಿಸಿ ಓದುವ ಸಮಾಜ ನಿರ್ಮಿಸುವ ಅವಕಾಶಗಳನ್ನು ಕಲ್ಪಿಸಿದ್ದರು.

ಅಂದಿನಿಂದ ಕಳೆದ ಒಂದು ಶತಮಾನಕ್ಕೂ ಹೆಚ್ಚಿನ ಕಾಲದಲ್ಲಿ ಸಾಹಿತ್ಯ ಪರಿಷತ್ತು ನಾಡು-ನುಡಿಯ ಅಭಿವೃದ್ಧಿಯ ಪರವಾಗಿ ನಿಂತಿದೆ. ಕರ್ನಾಟಕ ಏಕೀಕರಣ ಚಳವಳಿ, ನೀರಿನ ಹಂಚಿಕೆ ಮತ್ತು ಗಡಿ ಸಮಸ್ಯೆಗಳ ಹೋರಾಟ, ಕರ್ನಾಟಕ ಏಕೀಕರಣ ಚಳವಳಿ, ಕನ್ನಡ ಮಾಧ್ಯಮ ಹೋರಾಟಗಳಲ್ಲಿ ಸಕ್ರಿಯ ಭಾಗಿಯಾಗಿದೆ ಎಂದರು.

ಹಳ್ಳಿಗಳಿಗೂ ಕಸಾಪ ಬೆಳೆಯಲಿ

ಜಿಲ್ಲಾ ಶಾಶ್ವತ ನೀರಾವರಿ ಹೋರಾಟದ ಉಪಾಧ್ಯಕ್ಷ ಮಳ್ಳೂರು ಹರೀಶ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳಿಗೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು. ಸಾಹಿತ್ಯ ಪರಿಷತ್ತಿನ ಸಮಿತಿ ಸದಸ್ಯರಾದ ಸುಶೀಲ ಮಂಜುನಾಥ್, ಪರಿಷತ್ತಿನ ಸಂಸ್ಥಾಪನಾ ಗೀತೆ ರಚಿಸಿ ಗಾಯನ ಮಾಡಿದರು, ಜಿಲ್ಲಾ ಸದಸ್ಯ ಸುದಾ ವೆಂಕಟೇಶ್ ಹಾಗೂ ಸಿ ಎನ್ ಶೇಷಾದ್ರಿರವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಗೌರವ ಕಾರ್ಯದರ್ಶಿ ಎಸ್ ಎನ್ ಅಮೃತ್ ಕುಮಾರ್ ಸಂಘಟನಾ ಕಾರ್ಯದರ್ಶಿಗಳಾದ ಟಿ.ವಿ. ಚಂದ್ರಶೇಖರ್, ಪಟೇಲ್ ನಾರಾಯಣಸ್ವಾಮಿ, ಸತೀಶ್, ಮುನಿನಾರಾಯಣಪ್ಪ ,ಜಿಲ್ಲಾ ಸಮಿತಿಯ ಪಾ ಮು ಚಲಪತಿಗೌಡ, ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಮತ್ತಿತರರು ಇದ್ದರು.