ಕಲಬುರಗಿಯಲ್ಲಿ ನಡ್ಡಾ ಭರ್ಜರಿ ರೋಡ್‌ ಶೋ

| Published : Apr 27 2024, 01:17 AM IST

ಕಲಬುರಗಿಯಲ್ಲಿ ನಡ್ಡಾ ಭರ್ಜರಿ ರೋಡ್‌ ಶೋ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜಗತ್‌ ಪ್ರತಾಪ್‌ ನಡ್ಡಾ ಅವರು ಶುಕ್ರವಾರ ಕಲಬುರಗಿಯಲ್ಲಿ 4 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌ ಪರ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜಗತ್‌ ಪ್ರತಾಪ್‌ ನಡ್ಡಾ ಅವರು ಶುಕ್ರವಾರ ಕಲಬುರಗಿಯಲ್ಲಿ 4 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌ ಪರ ಮತಯಾಚಿಸಿದರು. ಬಳಿಕ, ಯಾದಗಿರಿ ಜಿಲ್ಲೆ ಸುರಪುರ ಹಾಗೂ ಬೀದರ್‌ ಜಿಲ್ಲೆ ಹುಮನಾಬಾದ್‌ಗಳಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.

ಕಲಬುರಗಿಯಲ್ಲಿ ಗಂಜ್‌ನ ನಗರೇಶ್ವರ ಶಾಲಾ ಮೈದಾನದಿಂದ ಶುರುವಾದ ರೋಡ್‌ ಶೋ ಸುಮಾರು 4 ಕಿಮೀ ದೂರ ನಡೆಯಿತು. ನಡ್ಡಾ, ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್‌, ಎಂಎಲ್ಸಿ ಬಿಜಿ ಪಾಟೀಲ್‌, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ಎಂಎಲ್‌ಸಿ ರಘುನಾಥ ಮಲ್ಕಾಪುರೆ ಮತ್ತಿತರರು ಅವರಿಗೆ ಸಾಥ್‌ ನೀಡಿದರು. ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್‌ ಘೋಷಣೆಗಳು ಮೊಳಗಿದವು. ರೋಡ್‌ ಶೋ ಮಧ್ಯೆ ಸೂಪರ್‌ ಮಾರ್ಕೆಟ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಇಂಡಿಯಾ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಲಬುರಗಿಯ ತವರು ನೆಲದ ನೇತಾರ ಡಾ.ಮಲ್ಲಿಕಾರ್ಜುನ ಖರ್ಗೆ ಇದೀಗ ಕಾಂಗ್ರೆಸ್‌ ಅಧ್ಯಕ್ಷರಿದ್ದಾರೆ. ಇಂಡಿಯಾ ಒಕ್ಕೂಟದ ಪ್ರಧಾನಿ ಸ್ಥಾನಕ್ಕೆ ಅವರ ಹೆಸರು ಹೇಳಿದವರು ಇದೀಗ ಹಗರಣಗಳನ್ನು ಹೊದ್ದುಕೊಂಡಿದ್ದಾರೆ ಎಂದು ದಿಲ್ಲಿ ಸಿಎಂ ಕೇಜ್ರಿವಾಲ್‌ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು. ಇವರಿಂದ ದೇಶದ ಉದ್ಧಾರ ಸಾಧ್ಯವೆ? ಎಂದು ಪ್ರಶ್ನಿಸಿದರು.

ಕರ್ನಾಟಕ ಸೇರಿ ದೇಶಾದ್ಯಂತ ಬಿಜೆಪಿ, ಮೋದಿ ಪರ ಮತದಾರರು ಒಲವು ತೋರುತ್ತಿದ್ದಾರೆ. ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚಿನ ಸ್ಥಾನ ಗೆಲ್ಲೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ನ್ಯಾಯ: ನಡ್ಡಾ

ದೇಶದಲ್ಲಿ ಈ ಹಿಂದೆ ನಡೆಯುತ್ತಿದ್ದ ಜಾತಿ ಹಾಗೂ ಒಳ ಜಗಳದ ಸಂಸ್ಕೃತಿಯನ್ನು ನರೇಂದ್ರ ಮೋದಿಯವರು ಅಳಿಸಿದ್ದು, ವಿಕಾಸವಾದ ರಾಜಕೀಯ ನೀಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು.ಬೀದರ್‌ ಜಿಲ್ಲೆ ಹುಮನಾಬಾದ್ ನಗರದ ಥೇರ್‌ ಮೈದಾನದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ-ಜೆಡಿಎಸ್‌ನ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೋದಿಯವರ ಅಧಿಕಾರಾವಧಿಯಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರಿಗೂ ಒಂದೇ ನ್ಯಾಯ, ಒಂದೇ ಸೌಲಭ್ಯ ನೀಡಲಾಗುತ್ತಿದೆ. ಮೋದಿಯವರು ಹತ್ತು ವರ್ಷದಲ್ಲಿ ಹೊಸ ಯೋಜನೆಯೊಂದಿಗೆ ಮುಂದೆ ಸಾಗುತ್ತಿದ್ದಾರೆ. ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಕುಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ 5ನೇ ಸ್ಥಾನದಲ್ಲಿದೆ. ಮೂರನೇ ಬಾರಿ ಮೋದಿ ಆಯ್ಕೆಯಾದರೆ ಮೂರನೇ ಆರ್ಥಿಕ ವ್ಯವಸ್ಥೆಗೆ ನಾವು ಬರಲಿದ್ದೇವೆ. ಸದ್ಯ ಭಾರತ ಆಟೋಮೋಬೈಲ್‌ನಲ್ಲಿ 3ನೇ ಸ್ಥಾನ, ಔಷಧಿಯಲ್ಲಿ 2ನೇ ಸ್ಥಾನ, ಪೆಟ್ರೋಲ್, ಸ್ಟೀಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಈಗ ಮೇಡ್‌ ಇನ್‌ ಇಂಡಿಯಾ ಪ್ರಕಾಶಿಸುತ್ತಿದೆ ಎಂದರು.ಕಾಂಗ್ರೆಸ್ ಅವಧಿಯಲ್ಲಿ ಪಾಕಿಸ್ತಾನದಿಂದ ಗುಂಡು ಹಾರಿಸಿದರೆ, ಪ್ರತಿದಾಳಿ ನಡೆಸಲು ನಮ್ಮ ಸೈನಿಕರಿಗೆ ಆದೇಶ ಸಿಗುತ್ತಿರಲಿಲ್ಲ. ಈಗ ಪಾಕಿಸ್ತಾನ ಗುಂಡು ಹಾರಿಸಿದರೆ ತಕ್ಷಣ ಉತ್ತರ ನೀಡಲು ಸೈನಿಕರಿಗೆ ಸ್ವಾತಂತ್ರ್ಯನೀಡಲಾಗಿದೆ. ಗಡಿ ಭಾಗದಲ್ಲಿ ಶೇ.30ರಷ್ಟು ರಸ್ತೆಗಳು ನಿರ್ಮಾಣವಾಗಿವೆ. ಪ್ರಧಾನ ಮಂತ್ರಿ ಅವಾಸ ಯೋಜನೆಯಲ್ಲಿ 4 ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮೂರು ಕೋಟಿ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.