ಬೋಗಸ್‌ ಬಿಲ್‌ ಸೃಷ್ಟಿಸಿ ವಸತಿ ಯೋಜನೆ ಹಣ ದುರುಪಯೋಗ

| Published : May 08 2024, 01:09 AM IST / Updated: May 08 2024, 01:10 AM IST

ಬೋಗಸ್‌ ಬಿಲ್‌ ಸೃಷ್ಟಿಸಿ ವಸತಿ ಯೋಜನೆ ಹಣ ದುರುಪಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯಿತಿ ಅವ್ಯವಹಾರ ತನಿಖೆಗೆ ರೈತ ಸಂಘ ಒತ್ತಾಯ

ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ವಸತಿ ಯೋಜನೆಗಳ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಸೂಕ್ತ ತನಿಖೆ ನಡೆಯಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದರು.

ನಗರದ ರೈತ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ನಿರ್ಗತಿಕರ ಸೂರುಗಳ ಯೋಜನೆ ದಿಕ್ಕು ತಪ್ಪಿಸಿ ಒಬ್ಬೊಬ್ಬರೇ 3-4 ಮನೆಗಳ ಬಿಲ್ಲು ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಎಂದು ಹಲವು ಬಾರಿ ಒತ್ತಾಯಿಸಿದರು ಸಹ ಇದುವರೆಗೂ ಯಾವುದೇ ಅಧಿಕಾರಿಗಳು ಯಾವುದೇ ರೀತಿಯ ತನಿಖೆಗೆ ಮುಂದಾಗಿಲ್ಲದ್ದು ಅನುಮಾನ ಮೂಡಿಸುತ್ತಿದೆ ಎಂದು ಅವರು ಆರೋಪಿಸಿದರು.

ಮುಂದಿನ ಸೋಮವಾರ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಪಂಚಾಯತ್ ರಾಜ್ ಮಂತ್ರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಈ ಎಲ್ಲಾ ಅಕ್ರಮಗಳ ತನಿಖೆಗೆ ಆದೇಶ ನೀಡುವವರೆಗೂ ನಿರಂತರವಾದ ಚಳವಳಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ತಾಲೂಕಿನ ಎಲ್ಲಾ ಭಾಗದ ರೈತರು ಸಂಘಟಿತರಾಗಿ ಹೋರಾಟಕ್ಕೆ ಬರಬೇಕು ಎಂದು ಮನವಿ ಮಾಡಿದರು.

ತಾಲೂಕು ತೀವ್ರ ಬರಗಾಲ ಪೀಡಿತವಾಗಿದ್ದು ಜೆಜೆ ಹಳ್ಳಿ ಹಾಗೂ ಕಸಬಾ ಹೋಬಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಹೊಡೆದು ತೋಟಗಳನ್ನು ಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ತಾಲೂಕಿನ ರೈತರು ಸಂಘಟಿತರಾಗಿ ವಾಣಿವಿಲಾಸ ಜಲಾಶಯದ ನೀರು ತಾಲೂಕಿನ ಎಲ್ಲಾ ಭಾಗಕ್ಕೂ ಹರಿಸಲು ಹೋರಾಟ ಮಾಡಬೇಕಾಗಿದೆ. ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಯೋಜನೆಗಳಿಂದ ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ 10 ಟಿಎಂಸಿ ನೀರು ಹರಿಸಲು ನಿರಂತರ ಚಳವಳಿ ಮಾಡಬೇಕು ಎಂದರು.

ಹೊಸ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ನಿಗದಿ ಮಾಡಿರುವ 5300 ಕೋಟಿ ರು. ಹಣ ಬಿಡುಗಡೆ ಮಾಡಲು ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ಮಾಡಲು ಜಿಲ್ಲೆಯ ರೈತರು ಸಿದ್ದವಾಗಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರ ಅನೇಕ ವೈಯಕ್ತಿಕ ಕಾಮಗಾರಿಗಳಿಗೆ ಸಾಮಗ್ರಿ ಬಿಲ್ ನೀಡಿಲ್ಲ ಮತ್ತು ಅನೇಕ ಕಾಮಗಾರಿಗಳನ್ನು ನಡೆಸದೇ ಬಿಲ್ ಪಾವತಿ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆಯೂ ಯಾರು ಚಕಾರ ಎತ್ತುತ್ತಿಲ್ಲ. ಕೈಗಾರಿಕೆಗಳು, ವಾಣಿಜ್ಯ ಕಂಪನಿಗಳು ಗ್ರಾಮ ಪಂಚಾಯಿತಿಗಳ ಅನುಮತಿ ಪಡೆಯದೆ ತೆರಿಗೆ ಕಟ್ಟದೆ ಅಕ್ರಮವಾಗಿ ನಡೆಯುತ್ತಿವೆ ಎಂದು ಅನೇಕ ಬಾರಿ ಮನವಿ ಮಾಡಿದ್ದು ಜಿಲ್ಲಾ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ಅಧಿಕಾರಿಗಳು ಆ ಬಗ್ಗೆ ಗಮನಹರಿಸುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ರಂಗಸ್ವಾಮಿ, ನಾಗರಾಜಪ್ಪ, ಚಂದ್ರಪ್ಪ, ದೇವೇಂದ್ರಪ್ಪ, ಕೆಂಚಪ್ಪ, ಹಿಂಡಸಕಟ್ಟೆ ರಾಜಣ್ಣ, ಸಿದ್ದಪ್ಪ, ಆರ್.ಕೆ ಗೌಡ್ರು, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

ಎಡ-ಬಲ ನಾಲೆಗೆ ನೀರು ಹರಿಸಲು ಒತ್ತಾಯ: ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿ ವಾಣಿವಿಲಾಸ ಜಲಾಶಯದಿಂದ ಶೀಘ್ರವಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು. ಕಳೆದ 50 ದಿನಗಳ ಹಿಂದೆ ನೀರು ಹರಿಸಿದ್ದು ಇದೀಗ ಬಿಸಿಲಿನ ತಾಪ ಹೆಚ್ಚಾಗಿದ್ದು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಎಡ ಮತ್ತು ಬಲನಾಲೆಗಳ ಮೂಲಕ ತುರ್ತಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.