ಅಂಬರೀಷ್ ಹತ್ಯೆ ಆರೋಪಿಗಳ ಗಡಿಪಾರು ಮಾಡಿ

| Published : May 08 2024, 01:09 AM IST

ಸಾರಾಂಶ

ಗ್ರಾಮದಲ್ಲಿ ಆರೋಪಿ ಸುಮಾರು ೫-೬ ವರ್ಷದಿಂದ ಕೈಗಾರಿಕೆಗಳ ಬಳಿ ಹೊರರಾಜ್ಯದ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡುತಿದ್ದ. ಇದನ್ನು ಪ್ರಶ್ನಿಸಿದ ಪ್ರವೀಣ್ ಕುಮಾರ್ ಎಂಬುವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನ

ಕನ್ನಡಪ್ರಭ ವಾರ್ತೆ ಕೋಲಾರತಾಲ್ಲೂಕಿನ ರಾಮಸಂದ್ರದಲ್ಲಿ ದಲಿತ ಯುವಕ ಅಂಬರೀಶ್ ಕೊಲೆ ಮತ್ತು ಪ್ರವೀಣ್ ಕುಮಾರ್ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ರಾಮಸಂದ್ರದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ಕಾಲ್ನಡಿಗೆ ತಮಟೆ ವಾದ್ಯದೊಂದಿಗೆ ಬೃಹತ್ ಜಾಥಾ ಹಮ್ಮಿ ಕೊಳ್ಳಲಾಗುವುದು ಎಂದು ಪ್ರಗತಿ ಪರ ದಲಿತ ಸಂಘಟನೆಗಳ ಹಿರಿಯ ಮುಖಂಡ ಟಿ.ವಿಜಯ ಕುಮಾರ್ ಎಚ್ಚರಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಗಡಿ ಭಾಗದ ರಾಮಸಂದ್ರದಲ್ಲಿ ದಲಿತ ಯುವಕ ಅಂಬರೀಶ್‌ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಗ್ರಾಮದಲ್ಲಿನ ಸವರ್ಣೀಯ ಚಂದ್ರಪ್ಪ ಮತ್ತು ಅತನ ಸಹಚಾರರಾದ ಶ್ರೀನಿವಾಸ್, ಮಹೇಶ್, ಸುಭಾಷ್, ಹೇಮಂತ್, ಮಂಜುನಾಥ್, ಮಲ್ಲೇಶ್, ವೆಂಕಟೇಶ್, ನವೀನ್ ಸೇರಿದಂತೆ ಸುಮಾರು ೧೫ ಮಂದಿ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದಾರೆ ಎಂದರು.

ಚಂದ್ರಪ್ಪನ ಅಂಗಡಿ ಶೋಧಿಸಿದಾಗ ೨.೫ ಕೆ.ಜಿ. ಗಾಂಜಾ ಪತ್ತೆಯಾಗಿದೆ ಎಂದ ಅವರು, ಗ್ರಾಮದಲ್ಲಿ ಚಂದ್ರಪ್ಪ ಸುಮಾರು ೫-೬ ವರ್ಷದಿಂದ ಕೈಗಾರಿಕೆಗಳ ಬಳಿ ಹೊರರಾಜ್ಯದ ಕಾರ್ಮಿಕರಿಗೆ ಗಾಂಜಾ, ಡ್ರಾಗ್ಸ್ ಇತ್ಯಾದಿಗಳನ್ನು ಮಾರಾಟ ಮಾಡುವಂತ ದಂಧೆ ನಡೆಸುತ್ತಿದ್ದರು, ಇದನ್ನು ಪ್ರಶ್ನಿಸಿದ ಪ್ರವೀಣ್ ಕುಮಾರ್ ಎಂಬುವರ ಮೇಲೆ ಚಂದ್ರಪ್ಪ ಹಲ್ಲೆ ನಡೆಸಿದ್ದಾಗಿ ಹೇಳಿದರು.ಮೃತ ಅಂಬರೀಷ್ ಪತ್ನಿ ಗೌರಮ್ಮ ಮಾತನಾಡಿ, ಹತ್ಯೆ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಎಲ್ಲಾ ಅರೋಪಿಗಳನ್ನು ಜೈಲಿಗೆ ಕಳುಹಿಸುವ ಮೂಲಕ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದರು.ಅಂಬರೀಷ್‌ನ ಸಹೋದರ ನಾಗರಾಜ್, ಅಲ್ಪಸಂಖ್ಯಾತರ ಹಿರಿಯ ಮುಖಂಡ ಸೈಯದ್ ಎ.ಭಾಷಾ, ದಲಿತ ಸಂಘಟನೆಯ ಮುಖಂಡ ವಿಜಯಕುಮಾರ್ ಇದ್ದರು.