ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಿ: ಆರ್.ರಘು

| Published : May 09 2024, 12:45 AM IST

ಸಾರಾಂಶ

ನಾಲ್ವಡಿಯವರ ತಂದೆಯವರಾದ ಶ್ರೀಮನ್ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಹಾಗೂ ಅದರ ಆವರಣ ಸಹ ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತಗೊಂಡಿದ್ದು, ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾರಿತ್ರಿಕ ಕೊಡುಗೆಗಳನ್ನು ನೀಡಿದ ಅವರನ್ನು ನಿತ್ಯವೂ ಅಪಮಾನಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಕೆಲವರು ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಚೆಲ್ಲುತ್ತಿರುವುದರಿಂದ ನೂರಾರು ಸಂಖ್ಯೆಯಲ್ಲಿ ಹಾರಿ ಬರುವ ಪಾರಿವಾಳಗಳು ಅರಮನೆಯ ಅಂದಗೆಡಲು ಹಾಗೂ ಕಟ್ಟಡಕ್ಕೆ ಅಸ್ಥಿರತೆ ಉಂಟು ಮಾಡಲು ಕಾರಣವಾಗಿವೆ ಎಂದು ಬಿಜೆಪಿ ಮುಖಂಡ ಆರ್. ರಘು ಹೇಳಿದ್ದಾರೆ.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ಪತ್ರ ಬರೆದಿರುವ ಅವರು, ನಾಲ್ವಡಿಯವರ ತಂದೆಯವರಾದ ಶ್ರೀಮನ್ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಹಾಗೂ ಅದರ ಆವರಣ ಸಹ ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತಗೊಂಡಿದ್ದು, ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾರಿತ್ರಿಕ ಕೊಡುಗೆಗಳನ್ನು ನೀಡಿದ ಅವರನ್ನು ನಿತ್ಯವೂ ಅಪಮಾನಿಸುವಂತಾಗಿದೆ.

ಅರಮನೆಯ ಸುತ್ತಮುತ್ತ ವ್ಯಾಪಾರವನ್ನಾಶ್ರಯಿಸಿರುವ, ದೇವಸ್ಥಾನಗಳ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಅರ್ಚಕರು ಹಾಗೂ ಭೇಟಿ ನೀಡುವ ಸಾರ್ವಜನಿಕರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ, ಅಲ್ಲದೇ ಸಾರ್ವಜನಿಕ ಹಾಗೂ ವಾಹನಗಳ ಸುಗಮ ಸಂಚಾರಕ್ಕೂ ಇದರಿಂದ ತೀವ್ರ ಅಡಚಣೆ ಉಂಟಾಗುತ್ತಿದೆ. ಮೈಸೂರಿನ ಹೆಮ್ಮೆಯ, ವಿಶ್ವ ವಿಖ್ಯಾತ ಸುಂದರ ಅರಮನೆಯ ಆಯಾಕಟ್ಟಿನ ಸ್ಥಳಗಳಲ್ಲಿ ಗೂಡುಕಟ್ಟಿಕೊಂಡಿರುವ ಪಾರಿವಾಳಗಳು ಅರಮನೆಯ ಸೌಂದರ್ಯ ಹಾಗೂ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿವೆ.

ಈ ಹಿನ್ನೆಲೆ ಈ ಕೂಡಲೇ ಮೈಸೂರು ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಹಾಗೂ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು, ಪಾರಿವಾಳಗಳಿಗೆ ಧಾನ್ಯ ತಂದು ಚೆಲ್ಲುವವರಿಗೆ ತಡೆಯೊಡ್ಡಿ ಅರಮನೆಯ ಸುತ್ತಳತೆಯ 2 ಕಿ.ಮೀ ವ್ಯಾಪ್ತಿಯವರೆಗೂ ಇಂತಹ ಚಟುವಟಿಕೆಗಳಿಗೆ ಆಸ್ಪದ ನೀಡದೇ ನಿಷೇಧಿಸುವಂತೆ ಪರಂಪರೆ ಹಾಗೂ ಪರಿಸರ ಕಾಳಜಿಯ ನಾಗರೀಕರ ಪರವಾಗಿ ಅವರು ಒತ್ತಾಯಿಸಿದ್ದಾರೆ.

ಅಲ್ಪ ವೆಚ್ಚದಲ್ಲಿ ಮಹಾನ್ ಪುಣ್ಯ ಕಟ್ಟಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿನ ಕೆಲವು ವ್ಯಕ್ತಿಗಳು ಪಾರಿವಾಳಗಳಿಗೆ ಧಾನ್ಯಗಳನ್ನು ತಂದು ಚೆಲ್ಲುತ್ತಿದ್ದು, ಈ ನಿಟ್ಟಿನಲ್ಲಿ ತಕ್ಷಣವೇ ಕ್ರಮಕೈಗೊಂಡು ಪಾರಂಪರಿಕ ಅರಮನೆಯ ಸುರಕ್ಷತೆ ಕಾಪಾಡುವಂತೆ ಮೈಸೂರಿನ ಪರಂಪರೆ ಹಾಗೂ ಪರಿಸರ ಕಾಳಜಿಯುಳ್ಳ ನಾಗರೀಕರ ಪರವಾಗಿ ಅವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದೂ ಸಹ ಅನಿವಾರ್ಯವಾದೀತೆಂದು ಅವರು ತಿಳಿಸಿದ್ದಾರೆ.