ಮಂಡ್ಯ ಲೋಕಸಭಾ ಕ್ಷೇತ್ರ: ಶೇ.81.56 ರಷ್ಟು ಮತದಾನ

| Published : Apr 27 2024, 01:21 AM IST

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಶೇ.81.56 ರಷ್ಟು ಮತದಾನ ನಡೆದಿದೆ. ಪಾಂಡವಪುರ ತಾಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿ ಶೇ.87.13 ರಷ್ಟು ಮತದಾನದೊಂದಿಗೆ ಅತಿ ಹೆಚ್ಚು ಮತದಾನ, ಮಂಡ್ಯ ತಾಲೂಕಿನಲ್ಲಿ ಶೇ.76.98 ರಷ್ಟು ಮತದಾನದೊಂದಿಗೆ ಅತಿ ಕಡಿಮೆ ಮತದಾನವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ರಣಕಣದೊಳಗೆ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆಯಿತು. ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಶೇ.81.56 ರಷ್ಟು ಮತದಾನ ನಡೆದಿದೆ.ಪಾಂಡವಪುರ ತಾಲೂಕಿನ ಮೇಲುಕೋಟೆ ಕ್ಷೇತ್ರದಲ್ಲಿ ಶೇ.87.13 ರಷ್ಟು ಮತದಾನದೊಂದಿಗೆ ಅತಿ ಹೆಚ್ಚು ಮತದಾನ, ಮಂಡ್ಯ ತಾಲೂಕಿನಲ್ಲಿ ಶೇ.76.98 ರಷ್ಟು ಮತದಾನದೊಂದಿಗೆ ಅತಿ ಕಡಿಮೆ ಮತದಾನವಾಗಿದೆ.

ಮದ್ದೂರು ಕ್ಷೇತ್ರದಲ್ಲಿ ಶೇ.82.91 ರಷ್ಟು, ನಾಗಮಂಗಲ ಕ್ಷೇತ್ರದಲ್ಲಿ ಶೇ.84.60 ರಷ್ಟು, ಮಳವಳ್ಳಿ ಕ್ಷೇತ್ರದಲ್ಲಿ ಶೇ. 77.07ರಷ್ಟು, ಮಂಡ್ಯ ಕ್ಷೇತ್ರದಲ್ಲಿ ಶೇ.76.98ರಷ್ಟು, ಕೆ.ಆರ್ .ಪೇಟೆ ಕ್ಷೇತ್ರದಲ್ಲಿ ಶೇ.80.63 ರಷ್ಟು, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಶೇ.84.09ರಷ್ಟು, ಮೇಲುಕೋಟೆ ಕ್ಷೇತ್ರದಲ್ಲಿ ಶೇ.87.13 ರಷ್ಟು ಹಾಗೂ ಕೆ.ಆರ್.ನಗರ ಕ್ಷೇತ್ರದಲ್ಲಿ ಶೇ.80.44 ರಷ್ಟು ಮತದಾನವಾಗಿದೆ.2019ರ ಚುನಾವಣೆಯಲ್ಲಿ ಶೇ.80.23ರಷ್ಟು ಮತದಾನ ನಡೆದಿತ್ತು.

ಒಟ್ಟು 17,12,012 ಮತದಾರರಲ್ಲಿ 13,72,908 ಮಂದಿ ಮತ ಚಲಾಯಿಸಿದ್ದು, ಈ ಪೈಕಿ 6,93,262 ಪುರುಷರು, 6,79,620 ಮಹಿಳೆಯರು ಹಾಗೂ ಇತರರು 26 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.71.47ರಷ್ಟು ಮತದಾನ ನಡೆದಿತ್ತು.

ಅಂದು 16,69,262 ಮತದಾರರಲ್ಲಿ 6,04,491 ಪುರುಷರು, 5,87,306 ಮಹಿಳೆಯರು, 8 ಇತರೆ ಮತದಾರರು ಸೇರಿ ಒಟ್ಟು 11,91,805 ಮತ ಚಲಾವಣೆಗೊಂಡಿದ್ದವು. ಇದರಲ್ಲಿ 6424 ಮತಗಳು ತಿರಸ್ಕೃತಗೊಂಡಿದ್ದವು.ನೇರಳೆಕೆರೆಯಲ್ಲಿ ರಾತ್ರಿ 7.30ರವರೆಗೂ ಮತದಾನ

ಶ್ರೀರಂಗಪಟ್ಟಣ:

ತಾಲೂಕಿನ ನೇರಳೆಕೆರೆ ಗ್ರಾಮದಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ರಾತ್ರಿ 7.30ರವರೆಗೆ ಮತದಾನ ನಡೆದಿದೆ.

ಗ್ರಾಮದ 190 ರ ಮತಗಟ್ಟೆಯಲ್ಲಿ ಮತಯಂತ್ರ ಸಂಜೆ 5 ವೇಳೆಗೆ ಕೈ ಕೊಟ್ಟ ಪರಿಣಾಮ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಮಂದಿ ಮತದಾನ ಮಾಡಲು ಕಾಯ್ದು ನಿಂತಿದ್ದರು. ನಂತರ ಮತಯಂತ್ರ ದುರಸ್ತಿಗೊಳಿಸಿ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಯಿತು. ಇದರಿಂದ ರಾತ್ರಿ 7.30ರವರೆಗೂ ಮತದಾನ ಪ್ರಕ್ರಿಯೆ ನಡೆದಿದೆ.

ಮತಗಟ್ಟೆ ಅಧಿಕಾರಿಗಳು ನಿಗದಿತ ಸಮಯದೊಳಗೆ ಬಂದಿದ್ದ ಎಲ್ಲ ಮತದಾರರಿಗೂ ಮತದಾನದ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಅದೇ ರೀತಿ ತಾಲೂಕಿನ ವಡಿಯಾಂಡಳ್ಳಿ ಬೂತ್ ನಂ.144 ರ ಮತಯಂತ್ರ ಸ್ಥಗಿತಗೊಂಡು ಮತದಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸುಮಾರು 3.19 ರಿಂದ 4 .30 ವರೆಗೆ ಮತಯಂತ್ರ ಸ್ಥಗಿತಗೊಂಡು ನಂತರ ಮತಯಂತ್ರ ದುರಸ್ತಿಪಡಿಸಿ ಮತದಾನ ಆರಂಭಿಸಲಾಯಿತು. ಅಲ್ಲಿಯೂ ಮತದಾನ ರಾತ್ರಿವರೆಗೂ ನಡೆದಿದೆ.