ಮಲ್ಪೆ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ

| Published : May 08 2024, 01:00 AM IST

ಸಾರಾಂಶ

ಸ್ಥಳೀಯರು ಮತ್ತು ಆಪತ್ಭಾಂಧವ ಈಶ್ವರ್ ಮಲ್ಪೆ ತಂಡದವರು ಪ್ರಯತ್ನಪಟ್ಟು ಸಂಭವಿಸಬಹುದಾದ ದೊಡ್ಡ ಪ್ರಮಾಣದ ದುರಂತವನ್ನು ತಪ್ಪಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಉಡುಪಿಯ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿದ್ದು, ಅದಾಗಲೇ ಬೆಂಕಿಯನ್ನು ನಂದಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಸಿಟಿ ಸೆಂಟರ್ ವಾಣಿಜ್ಯ ಮಳಿಗೆ, ವಸತಿ ಸಮುಚ್ಛಯದಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಮತ್ತು ಆಪತ್ಭಾಂಧವ ಈಶ್ವರ್ ಮಲ್ಪೆ ತಂಡದವರು ಪ್ರಯತ್ನಪಟ್ಟು ಸಂಭವಿಸಬಹುದಾದ ದೊಡ್ಡ ಪ್ರಮಾಣದ ದುರಂತವನ್ನು ತಪ್ಪಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿಯನ್ನು ನಂದಿಸಲು ನೀರಿನ ಟ್ಯಾಂಕರ್ ವ್ಯವಸ್ಥೆಯನ್ನೂ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡದದವರೇ ಮಾಡಿದರು. ನಂತರ ಉಡುಪಿಯ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿದ್ದು, ಅದಾಗಲೇ ಬೆಂಕಿಯನ್ನು ನಂದಿಸಲಾಗಿತ್ತು.

* ಅಗ್ನಶಾಮಕ ವಾಹನಗಳು ಲಭ್ಯವಿಲ್ಲ!

ಮಲ್ಪೆ ಅಗ್ನಿಶಾಮಕ ದಳದ ಎರಡು ವಾಹನದ ಎಫ್.ಸಿ.ಯನ್ನು ಸಾರಿಗೆ ಅಧಿಕಾರಿಗಳು ರದ್ದುಗೊಳಿಸಿದ್ದು, ಆ ವಾಹನಗಳು ಘಟಕದಿಂದ ಕರ್ತವ್ಯಕ್ಕೆ ಹೊರಗೆ ಬಾರದ ಪರಿಸ್ಥಿತಿಯಲ್ಲಿದೆ.

ಇದರಿಂದ ಅಗ್ನಿದುರಂತ ಸಂಭವಿಸಿದಲ್ಲಿ ಈ ವಾಹನಗಳ ಸೇವೆ ಲಭ್ಯವಾಗುತ್ತಿಲ್ಲ. ಲಕ್ಷಾಂತರ ರುಪಾಯಿ ಬೆಲೆಬಾಳುವ ಬೋಟ್‌ಗಳು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವಾಗ ಅನಾಹುತಗಳು ಸಂಭವಿಸಿ, ಸೊತ್ತು ನಾಶ, ಜನರ ಪ್ರಾಣಹಾನಿ ಸಂಭವಿಸಿದರೆ ಯಾರು ಹೊಣೆ ಎಂದು ಈಶ್ವರ್ ಮಲ್ಪೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಶಾಸಕರು, ಸರ್ಕಾರ ಮಲ್ಪೆ ಅಗ್ನಿಶಾಮಕ ಘಚಕದ ಈ ತಾಂತ್ರಿಕ ಸಮಸ್ಯೆಯ ಬಗ್ಗೆ ಗಮನಹರಿಸಿ, ದೊಡ್ಡ ಅಗ್ನಿ ಅನಾಹುತ ಸಂಭವಿಸುವುದಕ್ಕಿಂತ ಮೊದಲು ಶೀಘ್ರ ಪರಿಹಾರ ಒದಗಿಸಬೇಕಾಗಿದೆ. ಎರಡು ಹೊಸ ಸುಸಜ್ಜಿತ ಅಗ್ನಿಶಾಮಕ ವಾಹನದ ಮಲ್ಪೆ ಪರಿಸರಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಈಶ್ವರ್ ಮಲ್ಪೆ ಮನವಿ ಮಾಡಿದ್ದಾರೆ.