ಲೋಕಸಭೆ ಚುನಾವಣೆ: ಯಾದಗಿರಿಯಲ್ಲಿ ಶಾಂತಿಯುತ ಮತದಾನ

| Published : May 08 2024, 01:00 AM IST

ಸಾರಾಂಶ

ಯಾದಗಿರಿ ಜಿಲ್ಲೆಯ ನಾಲ್ಕು (ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್‌) ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಲೋಕಸಭೆ ಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಯಚೂರು ಲೋಕಸಭೆ ಹಾಗೂ ಕಲಬುರಗಿ ಲೋಕಸಭೆ ವ್ಯಾಪ್ತಿಯ, ಯಾದಗಿರಿ ಜಿಲ್ಲೆಯ ನಾಲ್ಕು (ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್‌) ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಲೋಕಸಭೆ ಚುನಾವಣೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಮಂಗಳವಾರದಂದೇ ಸುರಪುರ (ಶೋರಾಪುರ) ವಿಧಾನಸಭೆಗೆ ಉಪ ಚುನಾವಣೆಯೂ ನಡೆದಿದ್ದು, ಬಾದ್ಯಾಪುರ ಗ್ರಾಮದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟದಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೆಲವೆಡೆ ಮಾತಿನ ಚಕಮಕಿ ಬಿಟ್ಟರೆ, ಚುನಾವಣೆ ಶಾಂತಿಯುತವಾಗಿತ್ತು. ಸುರಪುರ ಮತಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಮತದಾನ ಕಂಡಿದೆ.

ಮೇ 7ರ ಸಂಜೆ 5ರವರೆಗೆ ಜಿಲ್ಲೆಯಲ್ಲಿ ನಡೆದ ಶೇ. 59.64 ರಷ್ಟು ಮತದಾನ ಗಮನಿಸಿದರೆ, ಕಳೆದ ಬಾರಿ 2019ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಶೇ.58.06 ರಷ್ಟು ಮತದಾನಕ್ಕಿಂತ ಹೆಚ್ಚಿನ ಮತದಾನದ ಸಾಧ್ಯತೆ ಅಂದಾಜಿಸಲಾಗಿದೆ. ಆಗ ಮತ್ತು ಈಗಿನ ಮತದಾರರ ಸಂಖ್ಯೆ 45,194 ರಷ್ಟು ಹೆಚ್ಚಿರುವುದು ವಿಶೇಷ.

ಯಾದಗಿರಿ ಜಿಲ್ಲೆಯ 1,134 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತ್ತು. ಯಾದಗಿರಿ ಮತಕ್ಷೇತ್ರದ ಖಾನಾಪುರ ಗ್ರಾಮದ ಮತಗಟ್ಟೆ ಸಂಖ್ಯೆ158 ಹಾಗೂ ಶಹಾಪುರ ಮತಕ್ಷೇತ್ರದ ದರ್ಶನಾಪುರ ಗ್ರಾಮದಲ್ಲಿ ಮತಯಂತ್ರಗಳಲ್ಲಿ ಕಂಡ ದೋಷದಿಂದಾಗಿ ಒಂದೆರೆಡು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಆರಂಭದಲ್ಲೇ ದೋಷ ಕಂಡಿದ್ದರಿಂದ ನಂತರದಲ್ಲಿ ಬೇರೆ ಮತಯಂತ್ರಗಳ ತಂದ ನಂತರ ಮತದಾನ ನಿರಾತಂಕವಾಗಿ ನಡೆಯಿತು.

ಹೆಣ್ಮಕ್ಕಳೇ ಸ್ಟ್ರಾಂಗು!

ಹಾಗೆ ನೋಡಿದರೆ, ಕಳೆದ ಹತ್ತಾರು ದಿನಗಳಿಂದ ಬೆವರಿಳಿಸಿದ್ದ 44-45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಮಂಗಳವಾರ ಜಿಲ್ಲೆಯಲ್ಲಿ ಕೊಂಚ ಕರಗಿತ್ತು. ಇಡೀ ದಿನ ತಾಪಮಾನ 39 -41 ಡಿಗ್ರಿ ಸೆಲ್ಸಿಯಸ್‌ ತಲುಪಿದ್ದರಿಂದ, ಬಿಸಿಲ ಬೇಗೆಗೆ ಮತದಾನ ಮತ್ತೆಲ್ಲಿ ಕಡಿಮೆ ಆದೀತೋ ಅನ್ನೋ ಆತಂಕ ನಿವಾರಿಸಿದಂತಾಗಿತ್ತು. ಕಾಡುತ್ತಿದ್ದ ಬಿಸಿಗಾಳಿ ಮಂಗಳವಾರ ಕೊಂಚ ತಗ್ಗಿದ್ದು, ಮತಗಟ್ಟೆಗಳತ್ತ ಜನರ ಹೆಜ್ಜೆ ಹಾಕಲು ಅನುಕೂಲವಾಗಿತ್ತು.

ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳತ್ತ ದೌಡಾಯಿಸಿದರು. ಮಹಿಳೆಯರು ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಉತ್ಸುಕರಾಗಿ ಪಾಲ್ಗೊಂಡು, ಮತ ಚಲಾಯಿಸುತ್ತಿದ್ದುದು ಗಮನಾರ್ಹವಾಗಿತ್ತು. ಅದರಲ್ಲೂ, 84 ವರ್ಷದ ವಯೋವೃದ್ಧರು, ಬಾಣಂತಿಯರು, ಗರ್ಭಿಣಿಯರು ಮತಗಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬಂದರು. ಬಿರು ಬಿಸಿಲಲ್ಲೂ ಹೆಣ್ಮಕ್ಕಳು ಮತಗಟ್ಟೆಗಳತ್ತ ದಾಪುಗಾಲು ಹಾಕಿ, ಮತದಾನ ಮಾಡಿ ಹೊರಬರುತ್ತಿರುವುದು ಕಂಡು ಬಂತು.

ಸಲೈನ್‌ ಬಿಚ್ಚಿಸಿಕೊಂಡು ಬಂದು ಮತ ಹಾಕಿದ ಅಜ್ಜಿ !

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ 85 ವರ್ಷದ ವಯೋವೃದ್ಧೆ, ಯಾದಗಿರಿಯ ಡಾ. ಅಂಬೇಡ್ಕರ್ ಚೌಕ್‌ ನಿವಾಸಿ ಸಾಬವ್ವ ಹಚ್ಚಿದ್ದ ಸಲೈನ್ ಬಿಚ್ಚಿಸಿಕೊಂಡು ಬಂದು, ಮೊಮ್ಮಗನ ನೆರವಿನೊಂದಿಗೆ ಮತ ಚಲಾಯಿಸಿದರು.

ಹತ್ತಿಕುಣಿಯ 84 ವರ್ಷದ ಬಿಸ್ಮಿಲ್ಲಾ ಬೀ, ಯಾರ ಹಂಗಿಗೂ ಕಾಯದೇ ಮತ ಹಾಕಿದರು. ಕಳೆದ 66 ವರ್ಷಗಳಿಂದ ಅವರ ಮತ ಚಲಾವಣೆ ತಪ್ಪಿಲ್ಲವಂತೆ. 82 ವರ್ಷದ, ಯಾದಗಿರಿಯ ಬಸವೇಶ್ವರ ನಗರದ ತಿಪ್ಪಮ್ಮ ಸಂಬಂಧಿಕರ ನೆರವಿನೊಂದಿಗೆ ಬೆಳಗ್ಗೆ ಯಾದಗಿರಿ ನಗರದ ಜೈನ್‌ ದೋಕಾ ಶಾಲೆಯ ಕಟ್ಟಡದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು.

82 ವರ್ಷದ ಯಾದಗಿರಿ ಭೀಮವ್ವ ಊಟ ಮರೆತರೂ, ವೋಟ್ ಮರೆಯದೆ ಹಾಕಿ ಬಂದಿದ್ದಾರೆ. ಹುಣಸಗಿ 84 ವರ್ಷದ ದೇವೇಂದ್ರಪ್ಪ ಚಂದಾ ದೃಷ್ಟಿ ಕಳೆದುಕೊಂಡಿದ್ದರೂ, ಮೊಮ್ಮಗನ ನೆರವಿನೊಂದಿಗೆ ಬಂದು ಮತ ಮಾಡಿದರು.

ಯಾದಗಿರಿ ಕೋಲಿವಾಡಾ ನಿವಾಸಿ, 75 ವರ್ಷದ ಕಸ್ತೂರೆಮ್ಮ ವ್ಹೀಲ್‌ ಚೇರ್ ಮೇಲೆ ಬಂದು ಮತ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ಕೈ ಮುರಿದುಕೊಂಡ ಆಸ್ಪತ್ರೆ ಸೇರಿದ್ದ ಯಾದಗಿರಿ ಅಬ್ದುಲ್ ರಜಾಕ್ ಆಸ್ಪತ್ರೆಯಿಂದ ಬಂದು ಮತ ಮಾಡಿದ್ದಾರೆ. ಯಾದಗಿರಿಯ ಕಾಜಗಾರವಾಡಿ/ಬ್ರಾಹ್ಮನವಾಡಿ 80 ವರ್ಷದ ಚೋಳಮ್ಮ ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಹಾಕಿದರು.

ದುಬೈನಿಂದ ಬಂದು ವೋಟ್‌ ಮಾಡಿದರು!

ಒಂದು ಓಟಿನ ಮಹತ್ವ ಸಾರಲು ದುಬೈನ ಶಾರ್ಜಾದಿಂದ ಯಾದಗಿರಿಗೆ ಆಗಮಿಸಿದ ವಿಜಯ ಗುಜ್ಜರ್ ಮತದಾನ ಮಾಡಿದ್ದಾರೆ. ಶಾರ್ಜಾದಿಂದ ಹೈದರಾಬಾದಿಗೆ ಆಗಮಿಸಿದ ಅವರು, ಅಲ್ಲಿಂದ ಬೆಳಗ್ಗೆ ಯಾದಗಿರಿಗೆ ಆಗಮಿಸಿ ಮತದಾನ ಮಾಡಿದರು. ದುಡ್ಡಿಗಿಂತ ಮತದಾನ ದೊಡ್ಡದು ಅನ್ನೋದು ಅವರ ಭಾವನೆ.

ತುಂಬು ಗರ್ಭಿಣಿಯರಿಂದ ಮತದಾನ:

ಶಹಾಪುರ ತಾಲೂಕಿನ ಹತ್ತಿಗೂಡೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯೊಂದರಲ್ಲಿ ಗರ್ಭಿಣಿಯರಾದ ನಿಂಗಮ್ಮ, ತಾಯಮ್ಮ ಹಾಗೂ ಸುನಿತಾ ಮತ ಚಲಾಯಿಸಿದರು. ಬಿರು ಬಿಸಿಲ ಲೆಕ್ಕಿಸದೇ ಮತದಾನ ಮಾಡಿದ ಅವರ ಪರಿ ಅನೇಕರಿಗೆ ಮಾದರಿಯಾಯಿತು. ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲಿ ಗರ್ಭಿಣಿಯರು ಮತದಾನ ಮಾಡಲು ಆಗಮಿಸಿದ್ದುದು ಕಂಡು ಬಂತು.

ಶಹಾಪುರ ತಾಲೂಕಿನ ಗಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 219ರಲ್ಲಿ 88 ವರ್ಷದ ವಯೋವೃದ್ಧೆ ಸಾತಮ್ಮ ಸಿದ್ದಪ್ಪ ಇವರು ಮಗನ ಸಹಾಯದಿಂದ ಮತ ಚಲಾಯಿಸಿದರು. ದೋರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ

ಮತಗಟ್ಟೆ ಸಂಖ್ಯೆ 147 ರಲ್ಲಿ 85 ವರ್ಷದ ವಯೋವೃದ್ಧೆ ಗಂಗಮ್ಮ ಹೆಳವರನ್ನು ಮೊಮ್ಮಗ ವಿಶ್ವ ಎತ್ತಿಕೊಂಡು ಬಂದು ಮತದಾನ ಕರ್ತವ್ಯ ನಿಭಾಯಿಸಲು ನೆರವಾದ. ಮೊದಲ ಮತದಾನ ಮಾಡಿದ ಒಂದೇ ಕುಟುಂಬದ ಐವರು:

ಇದೇ ಮೊದಲ ಬಾರಿಗೆ ಮತದಾನ ಮಾಡಿದ ಶಹಾಪುರ ನಗರದ ಕೊಲ್ಲೂರು ಚೈತ್ರ ಒಂದೇ ಕುಟುಂಬದ ಐವರು ಯುವಕ- ಯುವತಿಯರ ಮನೆ-ಮನದಲ್ಲಿ ಸಂಭ್ರಮ ಮೂಡಿತ್ತು. ಹಕ್ಕು ಚಲಾವಣೆ ಮಾಡಿ ಶಾಯಿ ಹಚ್ಚಿದ್ದ ಬೆರಳ ಚಿತ್ರ ತೆಗೆದು ತುಂಬಾ ಖುಷಿಪಟ್ಟರು. ಅವರ ಮುಖಭಾವದಲ್ಲಿ ಸಂಭ್ರಮ ಮನೆ ಮಾಡಿತ್ತು.

ಒಂದೇ ಕುಟುಂಬದ 21 ಜನರಿಂದ ಮತದಾನ !

ಶಹಾಪುರ ನಗರದ ಚೌಧರಿ ಅವಿಭಕ್ತ ಕುಟುಂಬದವರಿಂದ ಏಕಕಾಲದಲ್ಲಿ 21 ಮಂದಿ ಮತ ಚಲಾಯಿಸಿದರು. ಶಹಾಪುರದಲ್ಲಿ ತಂದೆ, ತಾಯಿ, ಅಣ್ಣ ತಮ್ಮಂದಿರು ಅತ್ತೆ ಸೊಸೆಯಂದಿರರು-ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ 21 ಮಂದಿ ಮತ ಹಾಕುವ ಮೂಲಕ ಗಮನ ಸೆಳೆದರು.