ಇಂಡಿಗನತ್ತ ಗ್ರಾಮಸ್ಥರಿಗೆ ಮಹಾಸಭಾ ನೆರವು

| Published : May 03 2024, 01:11 AM IST

ಸಾರಾಂಶ

ಇಂಡಿಗನತ್ತ, ಮೆಂದರೆ ಗ್ರಾಮಗಳ ನಡುವೆ ನಡೆದ ಗಲಭೆಯಿಂದ ಸಂಕಷ್ಟಕ್ಕೀಡಾಗಿರುವ ನಿವಾಸಿಗಳಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಎಲ್ಲ ರೀತಿಯ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಇಂಡಿಗನತ್ತ, ಮೆಂದರೆ ಗ್ರಾಮಗಳ ನಡುವೆ ನಡೆದ ಗಲಭೆಯಿಂದ ಸಂಕಷ್ಟಕ್ಕೀಡಾಗಿರುವ ನಿವಾಸಿಗಳಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಎಲ್ಲ ರೀತಿಯ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಹಾಗೂ ಮೆಂದರೆ ಗ್ರಾಮದ ನಿವಾಸಿಗಳಿಗೆ ಮತದಾನ ವೇಳೆ ನಡೆದ ಘರ್ಷಣೆಯ ಬಗ್ಗೆ ಅವರು ಮಾತನಾಡಿದರು. ಏ.26ರಂದು ಇಂಡಿಗನತ್ತ ಗ್ರಾಮದಲ್ಲಿ ಮತದಾನ ವೇಳೆ ನಡೆದ ಘರ್ಷಣೆ ಹಾಗೂ ಮತಗಟ್ಟೆ ಧ್ವಂಸ ಮಾಡಿದ ಘಟನೆಯಿಂದ ಗ್ರಾಮದಲ್ಲಿ ನಿವಾಸಿಗಳ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ. ಈ ವಿಚಾರವಾಗಿ ಪೊಲೀಸರು ಹೆಂಗಸರು ಮಕ್ಕಳು ಎನ್ನದೆ ಘಟನೆಗೆ ಕಾರಣರಾದವರನ್ನು ಬಂಧಿಸಲಿ, ಸಂಬಂಧ ಇಲ್ಲದವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.

ಘಟನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಾರಣರಾಗಿದ್ದು, ಅನಾದಿಕಾಲದಿಂದಲೂ ಈ ಭಾಗದ ಮಲೆ ಮಾದೇಶ್ವರ ರನ್ನು ಪೂಜೆ ಮಾಡುವ ಮಕ್ಕಳಿಂದೆ ಬಿಂಬಿಸುವ ಕಾಡಿನ ಮಕ್ಕಳ ನಡುವೆ ವಿಷದ ಬೀಜ ಬಿತ್ತಿ ಎರಡು ಗ್ರಾಮಗಳ ನಡುವೆ ಘರ್ಷಣೆ ನಡೆಯಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಘಟನೆಯಿಂದ ಇಂಡಿಗನತ್ತ ಗ್ರಾಮದಲ್ಲಿ ಬಂಧನ ಭೀತಿಯಿಂದ ಇಡೀ ಗ್ರಾಮವೇ ಖಾಲಿ ಖಾಲಿ ಮನೆಗಳ ಬೀಗ ಜಡಿದು ತಲೆಮೆರೆಸಿಕೊಂಡಿದ್ದಾರೆ. ಅಲ್ಲಿರುವ ಹೆಂಗಸರು ಮಕ್ಕಳನ್ನು ನಿಮ್ಮ ತಂದೆ ತಾಯಿ, ಕುಟುಂಬದವರು ಎಲ್ಲಿದ್ದಾರೆ ಎಂದು ಹೆದರಿಸುತಿದ್ದಾರೆ ಎಂದು ಆರೋಪಿಸಿದರು.

ಮೂಲಭೂತ ಸೌಲಭ್ಯ ಕಲ್ಪಿಸಿ:

ಕೋಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರ ನಡೆದಾಡಿದಂತಹ ಗ್ರಾಮಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಕಡೆಗಣಿಸಿ ಮೂಲ ಸೌಲಭ್ಯ ಕಲ್ಪಿಸುವಂತೆ ಚುನಾವಣಾ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸುತ್ತಾ ಬಂದಿವೆ. ಗ್ರಾಮಗಳ ನಿವಾಸಿಗಳ ಮೇಲೆ ಸೋದರರಂತೆ ಸಹಬಾಳ್ವೆ ನಡೆಸುತ್ತಿದ್ದ ಎರಡು ಗ್ರಾಮಗಳ ನಡುವೆ ವಿಷದ ಬೀಜ ಬಿತ್ತಿ ಘರ್ಷಣೆಗೆ ಅಧಿಕಾರಿಗಳು ಕಾರಣರಾಗಿದ್ದಾರೆ. ಹೀಗಾಗಿ ಸರ್ಕಾರ, ಜಿಲ್ಲಾಡಳಿತ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಇಂಡಿಗನತ್ತ, ಮೆಂದರೆ ಹಾಗೂ ವಿವಿಧ ಗ್ರಾಮಗಳಲ್ಲಿ ಅವಿದ್ಯಾವಂತ ನಿರುದ್ಯೋಗಿಗಳೇ ತುಂಬಿರುವ ಗ್ರಾಮಗಳಿಗೆ ಅಧಿಕಾರಿಗಳೇ ಬೇಕಾಗಿರುವ ಸೌಲಭ್ಯ ನೀಡಲು ವಿಫಲರಾಗಿದ್ದಾರೆ. ಹೀಗಿರುವಾಗ ಗ್ರಾಮಸ್ಥರ ಮತ ನೀಡುವಂತೆ ಕೇಳಲು ನಿಮಗೆ ಏನು ಅಧಿಕಾರ ಇದೆ. ಗ್ರಾಮಸ್ಥರು ತಲತಲಾಂತರದಿಂದ ವಾಸ ಮಾಡುವ ಗ್ರಾಮಗಳಿಗೆ ಮೂಲ ಸೌಲಭ್ಯಗಳನ್ನು ಕೇಳುವುರದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮತದಾನ ಮಾಡುವಂತೆ ಪ್ರೇರೇಪಿಸುವ ಅಧಿಕಾರಿಗಳು ಸೌಲಭ್ಯ ನೀಡುವುದರಲ್ಲೂ ಸಹ ಉತ್ಸಾಹ ತೋರಬೇಕು. ಈ ಘಟನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೆ ಕಾರಣ. ನೊಂದವರಿಗೆ ಧ್ವನಿಯಾಗಬೇಕಾದ ಸರ್ಕಾರ ಈ ಘಟನೆಗೆ ಕಾರಣರಾದ ಅಧಿಕಾರಿ ವರ್ಗದವರ ಮೇಲೆ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ, ನೋಂದವರಿಗು ಸಹ ಈ ಘಟನೆಯಿಂದ ಸೂಕ್ತ ಪರಿಹಾರ ನೀಡಬೇಕು ಎಂದರು.

ಮಹಾಸಭಾ ವತಿಯಿಂದ ಗ್ರಾಮಸ್ಥರಿಗೆ ಸಹಕಾರ: ಘಟನೆಯಲ್ಲಿ ನೊಂದವರಿಗೆ ಎರಡು ಗ್ರಾಮಗಳ ನಿವಾಸಿಗಳಿಗೆ ಸಂಪೂರ್ಣವಾಗಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಪ್ರಕರಣದಲ್ಲಿ ಸಿಲುಕಿರುವವರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಜನಾಂಗೀಯ ಘರ್ಷಣೆಗೆ ಕಾರಣರಾದವರನ್ನು ಸರ್ಕಾರ ನ್ಯಾಯಾಂಗ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ಕಾರ್ಯದರ್ಶಿ ಅನಾಪುರ ಉಮೇಶ್, ಜಿಲ್ಲಾ ನಿರ್ದೇಶಕ ವೀರಭದ್ರ ಸ್ವಾಮಿ, ಕೊಳ್ಳೇಗಾಲ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಮಹದೇವಪ್ರಸಾದ್, ಹನೂರು ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ, ತಮಿಳುನಾಡಿನ ಎಐಡಿಎಂಕೆ ಪಕ್ಷದ ರಾಮಾಪುರ ಹಿರಿಯ ಮುಖಂಡ ರವಿ ಮತ್ತು ಸಂದೀಪ್ ಉಪಸ್ಥಿತರಿದ್ದರು.