ಮಹಾಬಲ ಅವರ ‘ಮೇಘದೂತ’ ಸೇರಿ 4 ಕೃತಿಗಳ ಲೋಕಾರ್ಪಣೆ

| Published : May 06 2024, 01:31 AM IST

ಸಾರಾಂಶ

ಬಿಎಂಶ್ರೀ ಪ್ರತಿಷ್ಠಾನದಲ್ಲಿ ‘ಕನ್ನಡಪ್ರಭ’ದ ಸಹ ಸುದ್ದಿ ಸಂಪಾದಕ ಮಹಾಬಲ ಸೀತಾಳಬಾವಿ ಅನುವಾದಿಸಿರುವ ಕಾಳಿದಾಸ ಮಹಾಕವಿಯ ಮೇಘದೂತ ಕೃತಿಯೂ ಸೇರಿದಂತೆ ನಾಲ್ಕು ಬಿಡುಗಡೆ ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೇಖಕರ ಅಹಂ ಕನ್ನಡದಲ್ಲಿ ಸಂಪಾದಕತ್ವ ಪರಿಕಲ್ಪನೆ ಬೆಳೆಯಲು ಅಡ್ಡಿಯಾಗಿದೆ ಎಂದು ವಿದ್ವಾಂಸ, ಬಸವರಾಜ ಕಲ್ಗುಡಿ ಹೇಳಿದರು.

ಭಾನುವಾರ ನಗರದ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಅಂಕಿತ ಪುಸ್ತಕ ಪ್ರಕಟಿಸಿರುವ ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’, ಉದಯಕುಮಾರ್ ಹಬ್ಬು ಅನುವಾದಿಸಿದ ಕೃತಿ ‘ಚಂದ್ರಗುಪ್ತ ಮೌರ್ಯ’, ವೈ.ಜಿ.ಮುರಳೀಧರನ್ ಅನುವಾದಿಸಿರುವ ‘ವಿಕ್ಟರ್ ಫ್ರಾಂಕಲ್’ ಹಾಗೂ ‘ಕನ್ನಡಪ್ರಭ’ ಪತ್ರಿಕೆ ಸಹ ಸುದ್ದಿ ಸಂಪಾದಕ ಮಹಾಬಲ ಸೀತಾಳಬಾವಿ ಅನುವಾದಿಸಿರುವ ಕಾಳಿದಾಸ ಮಹಾಕವಿಯ ‘ಮೇಘದೂತ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದೊಂದು ದಶಕದಲ್ಲಿ ಅಕಾಡೆಮಿಕ್ ಆಗಿ, ವಿದ್ವತ್‌ಪೂರ್ಣವಾಗಿ ಸಾಹಿತ್ಯ ವಿಮರ್ಶೆ, ಸಂಶೋಧನಾ ಪ್ರಬಂಧ ಪ್ರಕಟಿಸುತ್ತಿದ್ದ ಪತ್ರಿಕೆ, ನಿಯತಕಾಲಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಸಾಹಿತ್ಯದ ಗಂಭೀರ ವಿಮರ್ಷೆಯ ಬರಹಕ್ಕೆ ವೇದಿಕೆ ಯಾವುದು ಎಂಬ ಪ್ರಶ್ನೆಯಿದೆ. ಇದು ಕನ್ನಡ ಭಾಷೆಯ ವಿದ್ವತ್‌ಪೂರ್ಣತೆಯ ಉಳಿವು, ಅಳಿವಿನ ಪ್ರಶ್ನೆಯೂ ಹೌದು. ಅದರಲ್ಲೂ ಕೆಲ ಪೀತ ಪತ್ರಿಕೆಗಳು ಸಾಹಿತ್ಯ ವಿಮರ್ಶೆ ಹೆಸರಿನಲ್ಲಿ ಹಣ ಪಡೆದು ತಗಡು ಲೇಖನ ಪ್ರಕಟಿಸುತ್ತಿವೆ. ಅಣಬೆಗಳಂತೆ ಇವು ಬೆಳೆಯುತ್ತಿರುವುದು ಘನಘೋರ ವಾತಾವರಣ ಎಂದರು.

ಸಂಪಾದಕತ್ವ ಎನ್ನುವುದು ಯುರೋಪಿಯನ್‌ ಸಂಸ್ಕೃತಿಯಲ್ಲಿ ಹುಲುಸಾಗಿ ಬೆಳೆದಿದೆ. ಹೀಗಾಗಿಯೇ ಹಲವು ಲೇಖಕರು ದೊಡ್ಡಮಟ್ಟದಲ್ಲಿ ಬೆಳೆದಿದ್ದಾರೆ. ವೃತ್ತಿಪರ ಸಂಪಾದಕ ಕೃತಿಯ ಯಾವ ಅಂಶವನ್ನು ಮುನ್ನೆಲೆಗೆ ತರಬೇಕು, ಯಾವ ವಿಚಾರಕ್ಕೆ ಮೊದಲ ಆದ್ಯತೆ ಸಿಗಬೇಕು ಸ್ಪಷ್ಟೀಕರಿಸುತ್ತಾನೆ. ಆದರೆ, ಕನ್ನಡದಲ್ಲಿ ಲೇಖಕರ ಅಹಂ ಕನ್ನಡದಲ್ಲಿ ಸಂಪಾದಕತ್ವ ಸಂಸ್ಕೃತಿ ಬೆಳೆಯಲು ಅಡ್ಡಿಯಾಗಿದೆ. ತಾನು ಬರೆದ ಲೇಖನವನ್ನು ಇನ್ನೊಬ್ಬರಿಗೆ ತೋರಿಸಿ ಯಾಕೆ ಸಂಪಾದನೆ ಮಾಡಿಸಬೇಕು ಎಂಬ ಭಾವನೆ ಹೋಗಬೇಕಿದೆ. ಜೊತೆಗೆ ತಜ್ಞ ಸಂಪಾದಕರನ್ನು ಕಂಡುಕೊಳ್ಳುವುದು ಕಷ್ಟವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಪತ್ರಿಕಾ ಸಮೂಹದ ನಿರ್ದೇಶಕ ಕೆ.ಎನ್‌.ಶಾಂತಕುಮಾರ್ ಮಾತನಾಡಿ, ಇಂಗ್ಲಿಷ್‌ನಲ್ಲಿ ವಿಕಾಸಗೊಂಡಂತೆ ಕನ್ನಡ ಸಾಹಿತ್ಯದಲ್ಲೂ ಕೃತಿ ಸಂಪಾದಕತ್ವ ವ್ಯವಸ್ಥೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಲೇಖಕರು ಹಾಗೂ ಪ್ರಕಾಶಕರು ಚಿಂತನೆ ನಡೆಸಬೇಕಾದ ಅಗತ್ಯವಿದೆ. ಸೃಜನಶೀಲ ಲೇಖಕನ ಚಿಂತನೆ ಬರವಣಿಗೆಯಲ್ಲಿ ಸಾಮಾನ್ಯ ಎನಿಸಬಹುದಾದ ಸಾಧ್ಯತೆ ಇದೆ. ವಾಕ್ಯರಚನೆ, ಕಾಗುಣಿತ ದೋಷ ಮೀರಿ, ಇಡೀ ಕೃತಿಯ ಪರಿಕಲ್ಪನೆ, ರಚನಾ ಕ್ರಮ, ಶೈಲಿಯ ಕುರಿತು ಸಲಹೆ ನೀಡುವ ಜೊತೆಗೆ ಬರಹಕ್ಕೆ ಸೊಬಗು ನೀಡುವಲ್ಲಿ ಸಂಪಾದಕನ ಕೊಡುಗೆ ಬಳಸಿಕೊಳ್ಳಬೇಕು ಎಂದರು.

ಇನ್ನು, ದಿನಪತ್ರಿಕೆಗಳಲ್ಲಿ ಪುಸ್ತಕ ವಿಮರ್ಷಾ ಲೇಖನಗಳ ಪ್ರಮಾಣ ಹಾಗೂ ಗುಣಮಟ್ಟ ಕುಸಿತವಾಗಲು ಪುಸ್ತಕೋದ್ಯಮ, ಪತ್ರಿಕೋದ್ಯಮದಲ್ಲಿ ಅದ ಬದಲಾವಣೆ ಕಾರಣ. ಈಗ ವೆಬ್‌ಸೈಟ್, ಬ್ಲಾಗ್, ಅಂತರ್ಜಾಲ ಆಧರಿತ ಮಾಧ್ಯಮಗಳು ಪದಮಿತಿಯ ನಿರ್ಬಂಧ, ಕಾಯುವಿಕೆಯ ಸಮಸ್ಯೆ ಇಲ್ಲದೆ ಸಾಹಿತ್ಯ ವಿಮರ್ಷೆ ಪ್ರಕಟಿಸುತ್ತಿವೆ. ಹೀಗಾಗಿ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಷೆಯ ವಿಚಾರ ಸೀಮಿತವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ವಿದ್ವಾಂಸ ಜಗದೀಶ್ ಶರ್ಮ ಸಂಪ ಮಾತನಾಡಿ, ಮೇಘದೂತ ಕೃತಿಯಲ್ಲಿ ಮಲ್ಲಿನಾಥನ ಸಂಜೀವಿನಿ ವ್ಯಾಖ್ಯಾನವನ್ನು ತಂದಿರುವುದು ಬಹುಶಃ ಕನ್ನಡದಲ್ಲಿ ಮೊದಲನೇಯದ್ದು. ಇನ್ನು, ಚಂದ್ರಗುಪ್ತ ಮೌರ್ಯ ಕೃತಿ ಕಾಶ್ಮೀರದಿಂದ ಪ್ರಾರಂಭವಾಗಿ ಕರ್ನಾಟಕದಲ್ಲಿ ಮುಕ್ತಾಯವಾಗುವ ವಿಶೇಷತೆ ಒಳಗೊಂಡಿದೆ. ಸಾವಿರಾರು ವರ್ಷದ ಹಿಂದೆ ಭಾರತೀಯರು ಸಾಮ್ರಾಜ್ಯ ಸ್ಥಾಪನೆಯ ಹಿಂದೆ ಯೋಚಿಸುತ್ತಿದ್ದ ಬಗೆಯನ್ನು ತಿಳಿಯಲು ಕೃತಿ ನೆರವಾಗುತ್ತದೆ ಎಂದು ತಿಳಿಸಿದರು.

ನಾಲ್ಕು ಕೃತಿಗಳ ಲೇಖಕರು ಅನಿಸಿಕೆ ಹಂಚಿಕೊಂಡರು. ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ಸೇರಿ ಇತರರಿದ್ದರು.