ಆರ್ಯರು ಹೊರಗಿನವರು ಎನ್ನುವುದು ಶುದ್ಧ ಕಟ್ಟುಕತೆ: ಡಾ.ರೋಹಿಣಾಕ್ಷ

| Published : May 06 2024, 01:31 AM IST

ಸಾರಾಂಶ

ಲೇಖಕ ಡಾ.ಜಿ.ಬಿ.ಹರೀಶ್ ವಿರಚಿತ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆಗೊಳಿಸಿ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಅಂಬೇಂಡ್ಕರ್‌ ಅರಿವಿನ ಪ್ರಸ್ತುತತೆಯ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್ಯರು ಹೊರಗಿನಿಂದ ಭಾರತಕ್ಕೆ ಬಂದವರು, ಇಲ್ಲಿನ ಮೂಲ ನಿವಾಸಿ ದ್ರಾವಿಡರನ್ನು ದಾಸ್ಯಕ್ಕೆ ಒಳಪಡಿಸಿದರು ಎಂಬುದೆಲ್ಲ ಶುದ್ಧ ಕಟ್ಟುಕತೆ ಎಂಬುದನ್ನು ಸ್ವತಃ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಗಹನವಾದ ಸಂಶೋಧನೆಯ ಮೂಲಕ ಸ್ಪಷ್ಟವಾಗಿ ತಿಳಿಸಿದ್ದರು ಎಂದು ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಹೇಳಿದರು.

ಭಾನುವಾರ ನಗರದ ಎನ್‌.ಆರ್‌. ಕಾಲೋನಿಯ ಡಾ.ಸಿ.ಅಶ್ವಥ್ ಕಲಾಭವನದಲ್ಲಿ ಲೇಖಕ ಡಾ.ಜಿ.ಬಿ.ಹರೀಶ್ ಬರೆದಿರುವ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹೊರಗಿನಿಂದ ಬಂದ ಆರ್ಯರು ಮೂಲನಿವಾಸಿ ದ್ರಾವಿಡರನ್ನು ದಕ್ಷಿಣದ ಕಡೆ ತಳ್ಳಿದ್ದಾರೆ. ಹೀಗಾಗಿ, ನಮಗೆ ಉತ್ತರದ ಕಡೆಯವರ ಜೊತೆಗೆ ಸೇರುವ ಅಗತ್ಯವಿಲ್ಲ. ಸಾಧ್ಯವಾದರೆ ದ್ರಾವಿಡ ಸ್ಥಾನ ನಿರ್ಮಾಣ ಮಾಡುತ್ತೇವೆ ಎಂದು ಕೆಲವರು ತೀವ್ರವಾದ ಮಾತು ಆಡುತ್ತಾರೆ. ಅಂಥವರು ಅಂಬೇಡ್ಕರ್ ಅವರನ್ನು ಸಾಂದರ್ಭಿಕವಾಗಿ ಉಲ್ಲೇಖಿಸುತ್ತಾರೆ. ಆದರೆ, ಆರ್ಯನ್ನರ ಆಕ್ರಮಣದ ಕಲ್ಪಿತ ಸಿದ್ಧಾಂತ ಹೇಳುವಾಗ ಅಂಬೇಡ್ಕರ್ ಅವರ ಸಂಶೋಧನೆಯನ್ನೇ ಮರೆಮಾಚುತ್ತಾರೆ ಎಂದು ಟೀಕಿಸಿದರು.

ಅಂಬೇಡ್ಕರ್ ಅವರು ಸಂವಿಧಾನ ಆಧಾರಿತ ಏಕ ಭಾರತದ ಬಗ್ಗೆ ಸ್ಪಷ್ಟವಾಗಿದ್ದರು. ಋಗ್ವೇದದಲ್ಲಿ ಅನೇಕ ಸಲ ಆರ್ಯ ಪದದ ಉಲ್ಲೇಖವನ್ನು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ಭಾರತದ ಮೇಲೆ ದಾಳಿ ಮಾಡಿದ್ದೇ ಆದರೆ, ಆರ್ಯರು ಜಗತ್ತಿನ ಯಾವ ಭಾಗದಲ್ಲಿ ನೆಲೆಸಿದ್ದರು ಎಂಬ ಪ್ರಶ್ನೆ ಕೇಳಿದ್ದಾರೆ. ಪಾಶ್ಚಿಮಾತ್ಯ ವಿದ್ವಾಂಸರು ಒಂದು ಸುಳ್ಳು ಸಾಬೀತು ಮಾಡಲು ಮತ್ತೊಂದು ಸುಳ್ಳು ಸೃಷ್ಟಿಸುತ್ತಿದ್ದರು. ಅದಕ್ಕೆ ಭಾಷೆಯ ನೆಪವನ್ನು ಸೇರಿಸಿ ಸುಳ್ಳಿನ ಸರಮಾಲೆಯ ಮೇಲೆ ಆರ್ಯನ್ನರ ಆಕ್ರಮಣ ಸಿದ್ಧಾಂತ ಸೃಷ್ಟಿಸಿದ್ದರು ಎಂದು ಅಂಬೇಡ್ಕರ್ ಅವರ ಅಧ್ಯಯನದಿಂದ ಸ್ಪಷ್ಟವಾಗುತ್ತದೆ ಎಂದು ಡಾ. ರೋಹಿಣಾಕ್ಷ ತಿಳಿಸಿದರು.

ಲೇಖಕ ಜಿ.ಬಿ.ಹರೀಶ್ ಮಾತನಾಡಿ, ಕೆಲವು ವ್ಯಕ್ತಿಗಳು ಅಂಬೇಡ್ಕರ್ ಅವರು ತಮಗೇ ಸೀಮಿತವಾದ ವ್ಯಕ್ತಿ ಎಂಬಂತೆ ವರ್ತಿಸುತ್ತಾರೆ. ಅಂಬೇಡ್ಕರ್ ಬಗ್ಗೆ ಮಾತಾಡಲು, ಬರೆಯಲು ತಮಗೆ ಮಾತ್ರ ಹಕ್ಕು ಇದೆ ಎಂಬಂತೆ ಮಾತನಾಡುತ್ತಾರೆ. ನಾನು ಈ ಪುಸ್ತಕ ಬರೆದಾಗಲೂ ಕೆಲವರು ಇಂತಹ ಮಾತುಗಳನ್ನು ಆಡಿದ್ದಾರೆ. ಆದರೆ, ಅನೇಕ ಲೇಖನಗಳ ಸಂಗ್ರಹವಾಗಿರುವ ಈ ಪುಸ್ತಕವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಅದಕ್ಕಾಗಿಯೇ ಎಲ್ಲರಿಗೂ ಬೇಕಾದ ಅಂಬೇಡ್ಕರ್ ಎಂದು ಪುಸ್ತಕಕ್ಕೆ ಹೆಸರಿಟ್ಟಿದ್ದೇವೆ ಎಂದರು. ಈ ವೇಳೆ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖರಾದ ರಾಜೇಶ್‌ ಪದ್ಮಾರ್‌ ಇದ್ದರು.