ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಕಲಬುರಗಿ ನಾಯಕರು

| Published : May 09 2024, 01:02 AM IST

ಸಾರಾಂಶ

ಲೋಕ ಸಮರದ ಕದನ ಕಣದಲ್ಲಿ 60 ದಿನಗಳಿಂದ ತುಂಬಾ ಕಾರ್ಯಮಗ್ನರಾಗಿದ್ದ ಜಿಲ್ಲೆಯ ಜನ ನಾಯಕರು ಮತದಾನವಾಗುತ್ತಿದ್ದಂತಯೇ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದಾರೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕ ಸಮರದ ಕದನ ಕಣದಲ್ಲಿ 60 ದಿನಗಳಿಂದ ತುಂಬಾ ಕಾರ್ಯಮಗ್ನರಾಗಿದ್ದ ಜಿಲ್ಲೆಯ ಜನ ನಾಯಕರು ಮತದಾನವಾಗುತ್ತಿದ್ದಂತಯೇ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದಾರೆ.

ಜಿಲ್ಲೆಯಲ್ಲಿ ಕಳೆದ 2 ತಿಂಗಳಿಂದ ಲೋಕ ಕದನ ಕಣದಲ್ಲಿ ಮುಖಾಮುಕಿಯಾಗಿ ಪರಸ್ಪರ ತೆಗಳುತ್ತ, ಹೇಳಿಕೆ ಸಮರಕ್ಕೆ ಮುಂದಾಗಿದ್ದವರು ಮತದಾನ ಮುಗಿಯುತ್ತಿದ್ದಂತೆಯೇ ಕುಟುಂಬ ಸದ್ಯರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ.

ಕಾಂಗ್ರೆಸ್‌ನ ಹುರಿಯಾಳು ರಾಧಾಕೃಷ್ಣ ಅವರಂತೂ ಬುಧವಾರ ತಮ್ಮಮಾವನರ ಮನೆ ಲುಂಬಿಣಿಯಲ್ಲಿ ಕುಟುಂಬ ಸದಸ್ರೊಂದಿಗೆ ಹೆಚ್ಚಿನ ಸಮಯ ಕಳೆದರು. ಇದಲ್ಲದೆ ಆಗಾಗ ಭೇಟಿಯಾಗಲು ಬರುತ್ತಿದ್ದ ಕಾರ್ಯಕರ್ತರೊಂದಿಗ ಮಾತುಕತೆ ನಡೆಸುತ್ ಮತದಾನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು.

ಕಲಬುರಗಿಯ ಉರಿ ಬಿಸಿಲಲ್ಲಿ 2 ತಿಂಗಳ ಕಾಲ ಪ್ರಚಾರ, ಮತ ಯಾಚನೆ, ಮನೆ ಸುತ್ತಾಟ, ಎಲ್ಲಾ ಮತದಾರರನ್ನ ಕಂಡು ಮತ ಯಾಚಿಸಿರದು ನಿಜಕ್ಕೂ ಪವಾಡದಂತಾಗಿದೆ. ಉರಿ ಬಿಸಿಲಲ್ಲಿ ಈ ಪರಿಯಲ್ಲಿ ಪ್ರಚಾರ ನಾವೇ ನಡೆಸಿದೇವಾ ಎಂಬಂತಾಗುತ್ತಿದೆ. ಈಗಲೂ ಉರಿ ಬಿಸಿಲು ತಗ್ಗಿಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೂ ಬಿರುಸಿನ ಪ್ರಚಾರ ನಡೆಸಿದ್ದು ಮೆಲಕು ಹಾಕಿದರೆ ನಮಗೆ ಅತ್ತರಿಯಾಗುತ್ತಿದೆ ಎಂದು ರಾಧಾಕೃಷ್ಣ ಆಪ್ತರೊಂದಿಗೆ ವಿಷಯ ಹಂಚಿಕೊಂಡರು.

ಪತ್ರಿಕೆಗಳನ್ನು ಓದುವುದು, ಟೀವಿಯಲ್ಲಿನ ವಿಶ್ಲೇಷಣೆ, ಬಂಧುಗಳ ವಿವರಣೆ ಎಲ್ಲವನ್ನು ಕಿವಿಗೊಟ್ಟು ಆಲಿಸುವ ರಾಧಾಕೃಷ್ಣ ಮಾತ್ರ ತಮ್ಮ ಮತದಾನದ ಲೆಕ್ಕ ಜೊತೆಗೇ ಇಟ್ಟುಕೊಂಡು ಗೆಲುವಿನ ಸಂತಸದಲ್ಲಿದ್ದರು ಎಂದು ಆಪ್ತರು ಹೇಳಿದ್ದಾರೆ.

ಗಿಡಗಳಿಗೆ ನೀರು ಹಾಕಿದ ಜಾಧವ್‌: ಸಖತ್ತಾಗಿ ಬ್ಯುಸಿಯಾಗಿದ್ದ ಬಿಜೆಪಿಯ ಡಾ. ಉಮೇಶ್ ಜಾದವ್ ಬುಧವಾರದಿಂದ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಮತದಾನ ಮುಗಿದ ಬಳಿಕ ಜಾದವ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಲೆಕ್ಕ ಮಾತ್ರ ಪಕ್ಕ ಇಟ್ಟುಕೊಂಡಿದ್ದಾರೆ. ಹಾಗೆಂದು ಸುಮ್ಮನೆ ಕುಳಿತಿಲ್ಲ ಪತ್ರಿಕೆಗಳ ವರದಿ ಓದುವುದು,ಟಿವಿ ವಿಶ್ಲೇಷಣೆ ವೀಕ್ಷಣೆ ಮಾಡುವುದು ಜೊತೆಗೆ ಮನೆಯ ಉದ್ಯಾನದಲ್ಲಿ ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ.

ದಿನ ಮುಂಜಾನೆ ಐದು ಗಂಟೆಯಿಂದ ಕಾಲಿಗೆ ಚಕ್ರ ಕಟ್ಟಿ ಓಡಾಟ ನಡೆಸಿದ ಜಾಧವ್ ಇದೀಗ ತುಸು ನೆಮ್ಮದಿಯಂದ ಇರೋಣವೆಂದು ಮುಂದಾಗಿದ್ದಾರೆ. ಫಲಿತಾಂಶಕ್ಕೆ ಬರೋಬರ್ರಿ ತಿಗಳಿರೋದರಿಂದ ಕುಟುಂಬದವರೊಂದಿಗೆ ಇರೋದೇ ನೆಮ್ಮದಿ ಎಂದು ಹೇಳುತ್ತಿದ್ದಾರೆ.

ಬಿಡುವಿಲ್ಲದ ಓಡಾಟ: ಕಳೆದ ಮಾರ್ಚ್ 16ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಲ್ಬುರ್ಗಿಗೆ ಆಗಮಿಸಿ ಭಾರತದ ಸಾರ್ವತ್ರಿಕ ಚುನಾವಣೆ ಪ್ರಚಾರ ಕ್ಕೆ ಶಂಖನಾದ ಮೊಳಗಿಸಿದರು ಅಂದೇ ಸಾಯಂಕಾಲ ನಾಲ್ಕು ಗಂಟೆಗೆ ಚುನಾವಣಾ ದಿನಾಂಕ ಪ್ರಕಟಗೊಂಡು ಚುನಾವಣೆ ನೀತಿ ಸಂಹಿತೆ ಜಾರಿ ಗೊಂಡಿತ್ತು. ಅಂದಿನಿಂದ ಮತದಾನದ ವರೆಗೂ ಜಾಧವ್‌ ಓಡಾಟ ಹಾಗೇ ಸಾಗಿತ್ತು. ಊಟಕ್ಕೂ ವಿರಾಮ ಇಲ್ಲದೆ ಕಾರಿನೊಳಗಿದ್ದ ಬಿಸ್ಕತ್ತು ಬಾಳೆಹಣ್ಣು ತಿಂದು ಹಸಿವು ನೀಗಿಸುತ್ತಿದ್ದರು. ಸ್ವತಃ ವೈದ್ಯರಾಗಿರುವುದರಿಂದ ಆರೋಗ್ಯ ಪಾಲನೆಗೆ ಒತ್ತು ನೀಡಿದ್ದರು ಸಮಯದ ಕೊರತೆ ಓಡಾಟ ದ ವೇಗದಿಂದ ಯಾವುದು ಸಾಧ್ಯವಾಗುತ್ತಿರಲಿಲ್ಲ.

ಪ್ರಚಾರ ಭಾಷಣ ಸಭೆ ಇಲ್ಲದೆ ರಿಲಾಕ್ಸ್ ಮೂಡ್ ನಲ್ಲಿದ್ದು ಹೂವಿನ ಗಿಡಗಳಿಗೆ ನೀರುಣಿಸಿದರು. ನಂತರ ವ್ಯಾಯಾಮ ಮುಗಿಸಿ ಚಹಾ ಸವಿದರು ಟಿವಿ ಪತ್ರಿಕೆಗಳ ವರದಿ ವಿಶ್ಲೇಷಣೆ ಮೇಲೆ ಕನ್ನಡಿಗರು ಕುಟುಂಬದವರ ಜೊತೆ ಬೆರೆದರು. ಇಷ್ಟೆಲ್ಲದರ ಮಧ್ಯೆ ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಕ ಮಾಡಿಕೊಂಡ ಜಾಧವ್ ಅಭಿಪ್ರಾಯ ಸಂಗ್ರಹದಲ್ಲೂ ನಿರತರಾಗಿದ್ದರು.

ಪ್ರಿಯಾಂಕ್‌ ಖರ್ಗೆ ನೋ ರಿಲ್ಯಾಕ್ಸೆಶನ್‌: ಕಾಲಿಗೆ ಚಕ್ರ ಕಟ್ಟಿಕೊಂಡೇ ಲೋಕ ಕದನದಲ್ಲಿ ಸುತ್ತಾಡಿರುವ ಸಚಿವ ಪ್ರಿಯಾಂಕ್‌ ಖರ್ಗೆಯವರಿಗೆ ಮತದಾನದ ನಂತರವೂ ನೋ ರಿಲ್ಯಾಸ್ಕ್‌ ಮೂಡ್‌. ಮತದಾನದ ಮಾರನೆ ದಿನೇ ಶಾಸಕರೆಲ್ಲರನ್ನು ಕಂಡು ಅವರೊಂದಿಗೆ ಮಾತುಕತೆ ನಡೆಸಿ ಮತದಾನದ ಮಾಹಿತಿ ಕಲೆ ಹಾಕಿದರು. ಇದಲ್ಲದೆ ಎಲ್ಲೆಡೆ ಸುತ್ತಾಡಿಕೊಂಡಿದ್ದು ಮತದಾನದ ಮಾಹಿತಿ, ತಮಗೆಷ್ಟ, ವಿರೋಧಿಗಳಿಗೆ ಅದೆಷ್ಟು ಮತಗಳ ಚಲಾವಣೆಯಾಗಿರಬಹುದು ಎಂಬ ಲೆಕ್ಕ ಹಾಕಿಕೊಂಡೇ ಸಚಿವರು ಇಡೀ ದಿನ ಸಮಯ ಕಳೆದರು.

ಪೂಜೆ- ಪುನಸ್ಕಾರ ಮಾಡಿದ ಜಗದೇವ ಗುತ್ತೇದಾರ್‌: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ಜಗದೇವ ಗುತ್ತೇದಾರರಿಗೆ 2 ತಿಂಗಳಿಂದ ಬಿಡುವಿಲ್ಲದ ಕೆಲಸವಿತ್ತು. ಖರ್ಗೆಯವರ ಅಳಿಯನವರೇ ಇಲ್ಲಿ ಅಭ್ಯರ್ಥಿಯಾಗಿದ್ದರಿಂದ ದೇಶದ ನಾಯಕರೆಲ್ಲರೂ ಕೇರಾಫ್‌ ಕಲಬುರಗಿ ಕಾಂಗ್ರೆಸ್‌ ಕಚೇರಿಯಲ್ಲೇ ಬಂದಿಳಿದರು.ಎಲ್ಲರೂ ಸರಣಿ ಸುದ್ದಿಗೋಷ್ಠಿ ನಡೆಸುತ್ತ ಹೇಳಿಕೆ ನೀಡುತ್ತಿರೋದರಿಂದ ಅವರೆಲ್ಲರೊಂದಿಗೆ ಇದ್ದು ನಿರಂತರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಜಗದೇವ ಗುತತೇದಾರ್‌ ಮತದಾನದ ಮಾರನೆ ದಿನ ಅಮಾವಾಸ್ಯೆಯಾದ್ದರಿಂದ ಮನೆಯಲ್ಲೇ ಕಾಲ ಕಳೆದರು.

ಮನೆಯಲ್ಲೇ ಇದ್ದೆ. ಅಮಾವಾಸ್ಯ ಇರೋ ಕಾರಣ ಕುಟುಂಬ ಸಮೇತರಾಗಿ ಪೂಜೆ- ಪುನಸ್ಕಾರದಲ್ಲಿ ಪಾಲ್ಗೊಂಡಿದ್ದೆ. ಪಕ್ಷದ ಪರ ಮತದಾರರ ಒಲವು ವ್ಯಕ್ತವಾಗಿದೆ. ನಾವು ಈ ಬಾರಿ ಗೆಲ್ಲೋದು ಪಕ್ಕಾ ಎಂದು ಜಗದೇವ ಗುತ್ತೇದಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್‌ ಈ ಬಾರಿ ಜೇವರ್ಗಿಯಲ್ಲಿ ಅತೀ ಹೆಚ್ಚಿನ ಸಭೆಗಳನ್ನು ನಡೆಸಿ ಕೈ ಪರ ಮತಬೇಟೆ ನಡೆಸಿದ್ದರು. ಉರಿ ಬಿಸಿಲಲ್ಲಿ ನಡೆದ ನಿರಂತರ ಸಭೆಗಳಿಂದ ಬಸವಳಿದಿದ್ದ ಡಾ. ಅಜಯ್‌ ಸಿಂಗ್‌ ಅವರು ಮತದಾನ ಪ್ರಕ್ರಿಯೆ ಮುಗಿದು ತಮ್ಮ ಪಕ್ಷದ ಪರ ಒಲವು ಕಂಡಿರೋದು ಕೇಳಿ ಖುಷಿಯಲ್ಲಿ ಬೆಂಗಳೂರು ಸರಿ ಕುಟುಂಬದವರೊಂದಿಗೆ ಬೆರೆತಿದ್ದಾರೆ.

ಚುನಾವಣೆ ಪ್ರಚಾರದಲ್ಲಿ ಕುಟುಂಬಕ್ಕೆ ಸಮಯವನ್ನೇ ಕೊಟ್ಟಿರಲಿಲ್ಲ. ಹೀಗಾಗಿ ಮತದಾನವಾಯ್ತು. ನಮ್ಮ ಪಕ್ಷದ ಪರ ಉತ್ತಮ ವಾತಾವರಣವಿದೆ. ಫಲಿತಾಂಶಕ್ಕಾಗಿ 1 ತಿಂಗಳು ಕಾಯಲೇಬೇಕು ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಇನ್ನು ಕಲಬುರಗಿ ದಕ್ಷಿಣ ಶಾಸರಾದ ಅಲ್ಲಂಪ್ರಭು ಪಾಟೀಲರು ಮತದಾನದ ಮಾರನೆ ದಿನವೂ ಪಕ್ಷದ ನಾಯಕರು ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ತತ್ಮ್ಮ ಕ್ಷೇತ್ರದಲ್ಲಿನ ಶೇ. 55 ರಷ್ಟು ಮತದಾನವಾದ ಬಗ್ಗೆ, ಅದರಲ್ಲಿ ಕಾಂಗ್ರೆಸ್‌ ಪರವೇ ಹೆಚ್ಚಿನ ಒಲವು ಕಂಡಿರೋ ಬಗ್ಗೆಯೂ ಬೆಂಬಲಿಗರೊಂದಿಗೆ ಸಭೆ ನಡೆಸಿ, ಮಾತುಕತೆ ಮಾಡಿ ಮಾಹಿತಿ ಕಲೆ ಹಾಕುವಲ್ಲಿ ಮಗ್ನರಾಗಿದ್ದರು. ಇವರಿಗೂ ಮತದಾನದ ನಂತರವೂ ನೋ ರಿಲ್ಯಾಕ್ಸ್‌ ಎಂಬಂತೆಯೇ ಬುಧವಾರವೂ ಕೆಲಸ ಮಾಡಿದರು.