ಮಡಿಕೇರಿಯ ಬೆಟ್ಟದ ನಿವಾಸಿಗಳಿಗೆ ಸಿಗಲಿ ಸ್ವಂತ ಸೂರು!

| Published : May 09 2024, 01:00 AM IST

ಮಡಿಕೇರಿಯ ಬೆಟ್ಟದ ನಿವಾಸಿಗಳಿಗೆ ಸಿಗಲಿ ಸ್ವಂತ ಸೂರು!
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಗಾಲ ಆರಂಭವಾದರೆ ಕೊಡಗಿನ ಜನರಲ್ಲಿ ಆತಂಕ ಎದುರಾಗುತ್ತದೆ. 2018ರಿಂದ ಅನಾಹುತ ಸಂಭವಿಸಿ ಭಯಕ್ಕೆ ತಳ್ಳಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಂಗಾರು ಆರಂಭಕ್ಕೆ ಇನ್ನೇನು 20 ದಿನಗಳು ಮಾತ್ರ ಬಾಕಿ ಇದೆ. ಮಳೆಗಾಲ ಆರಂಭವಾದರೆ ಕೊಡಗಿನ ಜನತೆಯಲ್ಲಿ ಒಂದು ಕಡೆ ಆತಂಕ ಮನೆ ಮಾಡುತ್ತದೆ. 2018ರಿಂದ ಈಚೆಗೆ ಮಳೆಯಿಂದ ಅಪಾರ ಅನಾಹುತ ಸಂಭವಿಸಿರುವುದು ಈಗಲೂ ಜನರನ್ನು ಭಯಕ್ಕೆ ತಳ್ಳಿದೆ.

ಮಳೆಗಾಲದಲ್ಲಿ ಮಡಿಕೇರಿಯ ಬೆಟ್ಟದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಆದರೆ ಅವರಿಗೆ ಶಾಶ್ವತ ಪರಿಹಾರ ಇಲ್ಲ. ಆದ್ದರಿಂದ ಅಪಾಯದ ಮನೆಗಳನ್ನು ಗುರುತಿಸಿ ಸರ್ಕಾರ ಅವರಿಗೆ ಮನೆ ನೀಡುವ ಮೂಲಕ ಶಾಶ್ವತ ಪರಿಹಾರ ಒದಗಿಸಬೇಕಿದೆ.

ಮರೀಚಿಕೆಯಾದ ಶಾಶ್ವತ ಪರಿಹಾರ: ಬೆಟ್ಟಗುಡ್ಡಗಳಿಂದ ಕೂಡಿರುವ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಳೆಗಾಲದಲ್ಲಿ ಭೂಕುಸಿತ ಪ್ರಕರಣಗಳು ಸಾಮಾನ್ಯವಾಗಿ ಸಂಭವಿಸುತ್ತದೆ. ಪ್ರಮುಖವಾಗಿ ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ, ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಭೂಕುಸಿತ ಆಗುತ್ತವೆ. ಆದ್ದರಿಂದ ಈ ಭಾಗದಲ್ಲಿ ಈಗಿನಿಂದಲೇ ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರಸಭೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿವುದು ಉತ್ತಮ.

ಭಾರಿ ಮಳೆಯಾದ ಸಂದರ್ಭ ಮಡಿಕೇರಿಯ ಕೆಲವು ಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗುತ್ತದೆ. ಅವರು ಮಳೆಗಾಲದಲ್ಲಿ ಬಾಡಿಗೆ ಮನೆಯನ್ನು ಅಥವಾ ಸಂಬಂಧಿಕರ ಮನೆಯನ್ನು ಆಶ್ರಯಿಸಬೇಕಿದೆ. ಮಳೆಗಾಲ ಮುಗಿಯುವ ವರೆಗೆ ಅವರು ಇತರೆ ಕಡೆ ಜೀವನ ಸಾಗಿಸುವುದು ತೀರಾ ಕಷ್ಟವಾಗಿದೆ. ಆದರೂ ಇವರಿಗೆ ಶಾಶ್ವತ ಪರಿಹಾರ ಮಾತ್ರ ದೊರಕುತ್ತಿಲ್ಲ.

ಬೆಟ್ಟದ ಮೇಲಿನ ಮನೆಗಳಲ್ಲಿ ಸಣ್ಣಪುಟ್ಟ ಬರೆ ಕುಸಿತ ಉಂಟಾಗುತ್ತದೆ. ಇದರಿಂದ ಮನೆಗೆ ತೆರಳಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ ಬರೆ ಜರಿದು ಮನೆಗೆ ಹಾನಿಯಾಗುತ್ತದೆ. ಮಳೆ ಕಳೆದ ಬಳಿಕ ಮತ್ತೆ ಅದೇ ಅಪಾಯದ ಮನೆಯಲ್ಲೇ ಜೀವನ ನಡೆಸುವ ಪರಿಸ್ಥಿತಿ ಉಂಟಾಗಿದೆ.

2018ರಲ್ಲಿ ಭಾರಿ ಮಳೆಯಿಂದಾಗಿ ನಗರದಲ್ಲಿ ಅಪಾರ ಮನೆಗಳಿಗೆ ತೀವ್ರ ಹಾನಿಯಾಗಿತ್ತು. ಇಂದಿಗೂ ಕೂಡ ಬೆಟ್ಟದ ನಿವಾಸಿಗಳು ಅಪಾಯದ ನಡುವೆಯೇ ವಾಸವಾಗಿದ್ದಾರೆ. ಮಳೆಗಾಲ ಎಂದರೆ ಬೆಟ್ಟದ ಮೇಲಿನ ಮನೆಗಳಲ್ಲಿ ವಾಸಿಸುವವರಿಗೆ ರಾತ್ರಿ ನಿದ್ರೆ ಬರುವುದು ಕೂಡ ಕಷ್ಟ. ಅಪಾಯದಲ್ಲಿರುವವರು ಸರ್ಕಾರದಿಂದ ನೀಡಲಾಗುತ್ತಿರುವ ಮನೆಗಳಿಗಾಗಿ ಎದುರು ನೋಡುತ್ತಿದ್ದಾರೆ

ಮಡಿಕೇರಿಯ ಮಂಗಳಾದೇವಿ ನಗರ, ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ 300 ಮನೆಗಳು ಅಪಾಯಕಾರಿ ಸ್ಥಳದಲ್ಲಿವೆ ಎಂದು ಈ ಹಿಂದೆ ಗುರುತಿಸಲಾಗಿತ್ತು. ಆ ಮನೆಯವರು ಮುಂಗಾರು ಮಳೆಯ ವೇಳೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸುವುದು ಸಾಮಾನ್ಯವಾಗಿದೆ. ಆದರೆ ಅವರಿಗೆ ಶಾಶ್ವತ ಪರಿಹಾರ ಮಾತ್ರ ಇಲ್ಲದಿರುವುದು ಚಿಂತೆಗೀಡು ಮಾಡಿದೆ.

ಶಾಶ್ವತ ಪರಿಹಾರ ಅಗತ್ಯ: ಮಡಿಕೇರಿ ನಗರದ ಮಂಗಳಾದೇವಿ ನಗರ, ಮಲ್ಲಿಕಾರ್ಜುನ ನಗರ, ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದ ಕೆಲವು ಕಡೆಗಳಲ್ಲಿ ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಮಳೆಗಾಲದ ಸಂದರ್ಭದಕಲ್ಲಿ ಇಲ್ಲಿನ ಜನ ಜೀವ ಕೈಯಲ್ಲಿಡಿದು ಜೀವನ ನಡೆಸುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ಅವರನ್ನು ಬಾಡಿಗೆ ಮನೆ, ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಮಳೆ ಕಳೆದ ನಂತರ ಮತ್ತೆ ಅವರು ಅದೇ ಮನೆಗೆ ಹಿಂದಿರುಗುತ್ತಾರೆ. ಆದರೆ ಅಪಾಯದ ಮನೆಗಳನ್ನು ಗುರುತಿಸಿ ಅವರಿಗೆ ಶಾಶ್ವತ ಪರಿಹಾರ ನೀಡುವ ಕಾರ್ಯ ಮಾತ್ರ ಆಗುತ್ತಿಲ್ಲ ಎಂಬುದು ವಿಪರ್ಯಾಸ.

ಅಪಾಯದಲ್ಲಿದ್ದವರಿಗೆ ಮನೆಗಳನ್ನು ಕೊಡಿ!: ಪ್ರತಿ ಬಾರಿ ಮಳೆಗಾಲ ಬಂದ ಸಂದರ್ಭ ಮಡಿಕೇರಿಯ ಅಪಾಯದ ಸ್ಥಿತಿಯಲ್ಲಿರುವವರನ್ನು ಸ್ಥಳಾಂತರ ಮಾತ್ರ ಮಾಡಲಾಗುತ್ತದೆ. ಆದರೆ ಅವರಿಗೆ ಪರಿಹಾರ ಇಲ್ಲ. ಮಳೆಗಾಲ ಮುಗಿದ ಬಳಿಕ ಸಂತ್ರಸ್ತರು ಮತ್ತೆ ಅದೇ ಮನೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ತೀರಾ ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಜಿಲ್ಲಾಡಳಿತ ಹಾಗೂ ನಗರಸಭೆ ಗುರುತಿಸಿ ಅವರಿಗೆ ಮಾದಾಪುರ ಸಮೀಪದ ಜಂಬೂರು ಬಾಣೆಯಲ್ಲಿ ನಿರ್ಮಾಣವಾಗಿರುವ ಹೊಸ 200 ಮನೆಗಳನ್ನು ನೀಡುವಂತೆ ಒತ್ತಾಯ ಕೇಳಿ ಬರುತ್ತಿದೆ.

ಮಳೆಗಾಲದಲ್ಲಿ ಇಂದಿರಾನಗರ, ಮಲ್ಲಿಕಾರ್ಜುನ ನಗರ ಮತ್ತಿತರ ಕಡೆ ಬರೆ ಕುಸಿತ ಘಟನೆಗಳು ಸಂಭವಿಸುತ್ತದೆ. ಮಳೆಗಾಲದ ಮುನ್ನೆಚ್ಚರಿಕೆಯ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ನಿರ್ದೇಶನ ಮಾಡಲಿದ್ದಾರೆ. ಅದರಂತೆ ನಗರಸಭೆಯಿಂದ ಕ್ರಮ ವಹಿಸಲಾಗುವುದು ಎಂದು ಮಡಿಕೇರಿ ನಗರಸಭೆ ಪೌರಾಯುಕ್ತ ವಿಜಯ್ ತಿಳಿಸಿದರು.

2018ರಿಂದ ಈಚೆಗೆ ಕೊಡಗಿನಲ್ಲಿ ಮಳೆಗಾಲ ಎಂದರೆ ಭಯಪಡುವ ಪರಿಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಿ ನಗರಸಭೆಯಿಂದ ಮಳೆಗಾಲ ಕಳೆಯುವ ವರೆಗೆ ತಮ್ಮ ಮನೆಯಿಂದ ಇತರೆ ಸುರಕ್ಷಿತ ಕಡೆಗೆ ಸ್ಥಳಾಂತರಗೊಳ್ಳುವಂತೆ ನೋಟಿಸ್‌ ಮಾತ್ರ ಕಳುಹಿಸುತ್ತಾರೆ. ಆದರೆ ಶಾಶ್ವತ ಪರಿಹಾರ ಇಲ್ಲ. ಆದ್ದರಿಂದ ನಗರದಲ್ಲಿ ಯಾರು ಅಪಾಯ ಸ್ಥಿತಿಯಲ್ಲಿ ಇದ್ದಾರೆ ಅವರಿಗೆ ಜಂಬೂರು ಬಾಣೆಯಲ್ಲಿರುವ ನಿರ್ಮಾಣವಾಗಿರುವ ಹೊಸ ಮನೆಗಳನ್ನು ನೀಡಬೇಕು ಎಂದು ಮಡಿಕೇರಿ ಕೊಡಗು ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ರವಿ ಗೌಡ ಹೇಳಿದರು.