ಬುದ್ಧಿಜೀವಿಗಳು ಕಾಂಗ್ರೆಸ್‌ನ ಭಟ್ಟಂಗಿಗಳು: ಎಚ್.ಆರ್.ಅರವಿಂದ್

| Published : Apr 25 2024, 01:01 AM IST

ಸಾರಾಂಶ

ಬಿಜೆಪಿ ಮತ್ತು ಹಿಂದೂ ಧರ್ಮವನ್ನು ಟೀಕಿಸುವುದೇ ಅವರ ಮುಖ್ಯ ಗುರಿ. ಜನರು, ರೈತ ಪರವಾದ ಕಾಳಜಿ, ಅಭಿವೃದ್ಧಿಯ ಯಾವೊಂದು ಚಿಂತನೆಗಳೂ ಅವರಲ್ಲಿ ಇಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬುದ್ದಿಜೀವಿಗಳು ಅಂಬೇಡ್ಕರ್‌ ಅವರನ್ನು ಸೋಲಿಸಿದ, ಅವರ ಅಂತ್ಯಕ್ರಿಯೆ, ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡದ ಕಾಂಗ್ರೆಸ್‌ ಪರ ವಕಾಲತ್ತು ವಹಿಸುತ್ತಿದ್ದಾರೆ. ಇವರಿಗೆ ಸ್ವಲ್ಪವೂ ನಾಚಿಕೆಯೂ ಇಲ್ಲ, ನೈತಿಕತೆಯೂ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬುದ್ಧಿಜೀವಿಗಳು ಕಾಂಗ್ರೆಸ್‌ ಪಕ್ಷದ ಭಟ್ಟಂಗಿಗಳು. ಅವರ ಮಾತುಗಳನ್ನು ಯಾರೂ ನಂಬಬೇಡಿ. ಅವರಿಂದ ನಾಡಿಗೆ ಮತ್ತು ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮತದಾರರನ್ನು ಎಚ್ಚರಿಸಿದರು.

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಪರ ಮನೆ ಮನೆಗೆ ತರಳಿ ಮತಯಾಚಿಸಿ ಮಾತನಾಡಿದರು.

ಬಿಜೆಪಿ ಮತ್ತು ಹಿಂದೂ ಧರ್ಮವನ್ನು ಟೀಕಿಸುವುದೇ ಅವರ ಮುಖ್ಯ ಗುರಿ. ಜನರು, ರೈತ ಪರವಾದ ಕಾಳಜಿ, ಅಭಿವೃದ್ಧಿಯ ಯಾವೊಂದು ಚಿಂತನೆಗಳೂ ಅವರಲ್ಲಿ ಇಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬುದ್ದಿಜೀವಿಗಳು ಅಂಬೇಡ್ಕರ್‌ ಅವರನ್ನು ಸೋಲಿಸಿದ, ಅವರ ಅಂತ್ಯಕ್ರಿಯೆ, ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡದ ಕಾಂಗ್ರೆಸ್‌ ಪರ ವಕಾಲತ್ತು ವಹಿಸುತ್ತಿದ್ದಾರೆ. ಇವರಿಗೆ ಸ್ವಲ್ಪವೂ ನಾಚಿಕೆಯೂ ಇಲ್ಲ, ನೈತಿಕತೆಯೂ ಇಲ್ಲ ಎಂದು ಟೀಕಿಸಿದರು.

ಮೋದಿಗೆ ಜಿಂದಾಬಾದ್‌ ಹೇಳುವವರು ಅಪ್ಪಂಗೆ ಹುಟ್ಟಿದವರಲ್ಲ ಎಂಬ ಕೀಳುಮಟ್ಟದ ಹೇಳಿಕೆ ನೀಡುವವರನ್ನು ಬಹಿರಂಗವಾಗಿ ಧಿಕ್ಕರಿಸಬೇಕು. ನಾಗರೀಕತೆಯೇ ಗೊತ್ತಿಲ್ಲದ ಇವರು ಬುದ್ಧಿಜೀವಿಗಳೇ. ಇಂತಹವರಿಂದ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ನಾಡು ಮತ್ತು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕುಮಾರಸ್ವಾಮಿ ಅವರ ಗೆಲುವು ಮುಖ್ಯವಾಗಿದೆ. ಅವರು ಗೆದ್ದರೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಅದರಿಂದ ಕೇಂದ್ರದ ಹಲವು ಯೋಜನೆಗಳನ್ನು ಜಿಲ್ಲೆಗೆ ತರುವುದಕ್ಕೆ ಸಾಧ್ಯವಾಗಲಿದೆ. ಹಾಗಾಗಿ ಮತದಾರರು ಕುಮಾರಸ್ವಾಮಿ ಅವರನ್ನು ಗೆಲ್ಲಿಸುವಂತೆ ಕೋರಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ, ವಿಶ್ವಜ್ಞಾನಿ ಎಂಬ ಖ್ಯಾತಿ ನೀಡುವುದರೊಂದಿಗೆ ಗೌರವ ಹೆಚ್ಚಿಸುವಂತಹ ಕೆಲಸ ಮಾಡಿದೆ. ಕಾಂಗ್ರೆಸ್‌ನ್ನು ಧಿಕ್ಕರಿಸುವಂತೆ ಕರೆಕೊಟ್ಟ ಅಂಬೇಡ್ಕರ್‌ ಮಾತಿಗೆ ವಿರುದ್ಧವಾಗಿ ಬುದ್ಧಿಜೀವಿಗಳು ನಡೆಯುತ್ತಿದ್ದಾರೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಪ್ರ.ಕಾರ್ಯದರ್ಶಿ ಪ್ರವೀಣ್, ಮಹೇಶ್, ಸಣ್ಣಪ್ಪ, ಚರಣ್, ಸತೀಶ್ ಮತ್ತಿತರರಿದ್ದರು.