ಕೈ ಹಿಡಿದ ಗ್ಯಾರಂಟಿ ಲಾಭ ಪಡೆದ ಮಹಿಳೆಯರು

| Published : May 10 2024, 01:33 AM IST / Updated: May 10 2024, 03:14 PM IST

ಸಾರಾಂಶ

 ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದ ಮಹಿಳೆಯರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಶಾಸಕ ಮತ್ತು ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌.ನಾಡಗೌಡ(ಅಪ್ಪಾಜಿಗೌಡ) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಮುದ್ದೇಬಿಹಾಳ :  ಪ್ರಧಾನಿ ಮೋದಿಯವರು ಹಿಂದಿನಿಂದಲೂ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಟೀಕಿಸುತ್ತಲೇ ಬಂದರು. ಆದರೂ, ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದ ಮಹಿಳೆಯರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಶಾಸಕ ಮತ್ತು ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್‌.ನಾಡಗೌಡ(ಅಪ್ಪಾಜಿಗೌಡ) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್‌ ಮುಖಂಡರೊಂದಿಗೆ ಸಮಾಲೋಚನೆಯಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದೆಲ್ಲೆಡೆ ಬಿರು ಬಿಸಿಲಿನ ಮಧ್ಯೆಯೂ ಮತದಾರರು ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಹೀಗಾಗಿ, ಅವರಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅಗೌರವದ ಮಾತುಗಳನ್ನಾಡುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಮತದಾರರು ಜಾಗೃತರಾಗಿದ್ದು, ಕೇಂದ್ರದ ವಿರುದ್ಧ ಮತ ಚಲಾವಣೆ ಮಾಡಿರುವ ವಿಶ್ವಾಸ ನನಗಿದೆ ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದರೊಂದಿಗೆ ಜನರ ವಿಶ್ವಾಸದಲ್ಲಿ ಆಡಳಿತ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ೧೦ ವರ್ಷಗಳ ಮೋದಿಯವರ ನೇತೃತ್ವದ ಸರ್ಕಾರದಿಂದ ಜನಸಾಮಾನ್ಯರಿಗೆ ಯಾವುದೇ ಒಳ್ಳೆಯದಾಗಿಲ್ಲ. ದೇಶದಲ್ಲಿನ ಬಡಜನರ ಪರವಾಗಿ ಯಾವುದೇ ಯೋಜನೆಗಳನ್ನು ತರಲಿಲ್ಲ. ನಮ್ಮ ರಾಜ್ಯದ ರೈತರಿಗೆ ಪರಿಹಾರವನ್ನು ಕೊಡಲಿಲ್ಲ, ಹೀಗೆ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.

ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅತಿಹೆಚ್ಚು ಮತಗಳನ್ನು ಕೊಟ್ಟಿದ್ದಾರೆ. ವಿಜಯಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಅವರು ಗೆಲುವು ನಿಶ್ಚಿತ. ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಜೂ.4ಕ್ಕೆ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ. ಮತ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಮತಗಟ್ಟೆ ವ್ಯಾಪ್ತಿಯ ಮತದಾರರಿಗೆ ಸರ್ಕಾರದ ಸಾಧನೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಮತಗಳಾಗಿ ಪರಿವರ್ತನೆ ಮಾಡುವಲ್ಲಿ ಶ್ರಮಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಭಾರಿ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆ ಮತದಾನ ಮುಗಿದಿದ್ದು, ಇದೀಗ ರಾಜಕೀಯ ವಲಯದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಕಾಂಗ್ರೆಸ್‌ನವರು ತಾವು ಇಷ್ಟೇ ಸೀಟ್‌ ಗೆಲ್ಲೋದು ಪಕ್ಕಾ ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಮತ್ತೊಂದು ಪಕ್ಷದವರು ತಮ್ಮ ಅಭ್ಯರ್ಥಿಗಳೇ ಈ ಬಾರಿಯೂ ಗೆಲುವು ಸಾಧಿಸಲಿದ್ದಾರೆ ಎಂಬ ಚರ್ಚೆ ಮಾಡುತ್ತಿದ್ದಾರೆ. ತಮ್ಮ ಮತ ಕ್ಷೇತ್ರದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಲೀಡ್‌ ಬರಬಹುದು, ಮತಗಳು ಎಲ್ಲಿ ಕಡಿಮೆಯಾಗಿವೆ, ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ. ತಮ್ಮ ಪಕ್ಷ ಎಲ್ಲಿ ಎಷ್ಟು ಮತಗಳನ್ನು ಪಡೆಯಬಹುದು, ಎಲ್ಲಿ ವಿಫಲವಾಗಿದೆ. ಹೀಗೆ ಹಲವಾರು ರಾಜಕೀಯ ಚುನಾವಣೆ ಲೆಕ್ಕಾಚಾರಗಳನ್ನು ತಮ್ಮ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ಚರ್ಚೆಯಲ್ಲಿ ತೊಡಗಿದ್ದರು.

ಈ ವೇಳೆ ತಾಲೂಕ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರಣ್ಣ ಮಲಕಾಜಪ್ಪ ತಾರನಾಳ, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಪಿಎಲ್ ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಕೆ. ಬಿರಾದಾರ, ಶ್ರೀಶೈಲ ಮರೋಳ, ಸಾಹೇಬಗೌಡ ಮೇಟಿ, ಸುರೇಶ ಹಳೇಮನಿ ಸೇರಿದಂತೆ ಹಲವರು ಇದ್ದರು.------

ಈ ಬಾರಿ ಕ್ಷೇತ್ರದಲ್ಲಿ ಜನರು ಕಾಂಗ್ರೆಸ್‌ಗೆ ಅತಿ ಹೆಚ್ಚು ಮತಗಳನ್ನು ಕೊಟ್ಟಿದ್ದಾರೆ. ವಿಜಯಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಅವರು ಗೆಲುವು ನಿಶ್ಚಿತ. ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಜೂ.4ಕ್ಕೆ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ. ಮತ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಮತಗಟ್ಟೆ ವ್ಯಾಪ್ತಿಯ ಮತದಾರರಿಗೆ ಸರ್ಕಾರದ ಸಾಧನೆಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು.

- ಸಿ.ಎಸ್‌.ನಾಡಗೌಡ,(ಅಪ್ಪಾಜಿಗೌಡ), ಶಾಸಕ.