ಬಿರುಗಾಳಿಗೆ ನೆಲಕ್ಕೆ ಅಪ್ಪಳಿಸಿದ ನೂರಾರು ಮರಗಳು

| Published : May 10 2024, 01:36 AM IST

ಸಾರಾಂಶ

ನಗರದಲ್ಲಿ ಬುಧವಾರ ತಡರಾತ್ರಿ ಮಳೆ ಮತ್ತು ಬಿರುಗಾಳಿಗೆ 200ಕ್ಕೂ ಹೆಚ್ಚು ಮರಗಳು ನೆಲಕ್ಕೆ ಅಪ್ಪಳಿಸಿದರೆ, ಕೆಲ ವಾರ್ಡುಗಳಲ್ಲಿ ಗುಡಿಸಲುಗಳ ಮೇಲ್ಚಾವಣೆ ಹಾರಿ ಹೋಗಿವೆ.

ಗುಡಿಸಲು ಚಾವಣಿ ಜಖಂ, ಬಾಳೆ ಬೆಳೆ ಹಾನಿಕನ್ನಡಪ್ರಭ ವಾರ್ತೆ ಗಂಗಾವತಿ

ನಗರದಲ್ಲಿ ಬುಧವಾರ ತಡರಾತ್ರಿ ಮಳೆ ಮತ್ತು ಬಿರುಗಾಳಿಗೆ 200ಕ್ಕೂ ಹೆಚ್ಚು ಮರಗಳು ನೆಲಕ್ಕೆ ಅಪ್ಪಳಿಸಿದರೆ, ಕೆಲ ವಾರ್ಡುಗಳಲ್ಲಿ ಗುಡಿಸಲುಗಳ ಮೇಲ್ಚಾವಣೆ ಹಾರಿ ಹೋಗಿವೆ.

ನಗರದ ಜಯನಗರದಲ್ಲಿ ಬಿರುಗಾಳಿಗೆ ಮರಗಳು ಬಿದ್ದು ಹೋಗಿವೆ. ಇದರಿಂದ ಮನೆ ಮುಂಭಾಗದಲ್ಲಿಟ್ಟಿದ್ದ ಬೈಕ್ ಮತ್ತು ಕಾರುಗಳು ಜಖಂಗೊಂಡಿವೆ. ಅದರಂತೆ ಬಸ್ ನಿಲ್ದಾಣದ ರಸ್ತೆಯ ಹೋಟೆಲ್‌ಗಳು ಸೀಟುಗಳು ಹಾರಿ ಹೋಗಿವೆ. ಇದರಿಂದ ಹೋಟೆಲ್ ಮುಂಭಾಗದಲ್ಲಿರುವ ತಗಡಿನ ಸೀಟುಗಳು ಮುರಿದು ಹೋಗಿವೆ. ಅಲ್ಲದೆ ಹೊಸಳ್ಳಿ ರಸ್ತೆ, ಗುಂಡಮ್ಮ ಕ್ಯಾಂಪ್, ಮುಜಾವರ ಕ್ಯಾಂಪುಗಳಲ್ಲಿರುವ ಗುಡಿಸಲುಗಳ ಮೇಲ್ಚಾವಣೆ ಹಾರಿ ಹೋಗಿವೆ.

ವಿದ್ಯುತ್ ಸ್ಥಗಿತ:

ತಡ ರಾತ್ರಿ ಬೀಸಿದ ಬಿರುಗಾಳಿಗೆ ವಿದ್ಯುತ್ ತಂತಿ ಹರಿದು ರಸ್ತೆಯ ಮೇಲೆ ಬಿದ್ದಿವೆ. ಇದರಿಂದ ವಿದ್ಯುತ್ ಸ್ಥಗಿತಗೊಂಡು ಕಗ್ಗತ್ತಲು ಆವರಿಸಿತ್ತು. ಬಿರುಗಾಳಿ ಬೀಸುವ ಮೂನ್ಸೂಚನೆಯಿಂದಾಗಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರು.

ಮರಗಳು ರಸ್ತೆ ಮೇಲೆ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನಗರಸಭೆಯ ಸಿಬ್ಬಂದಿ ಮತ್ತು ಜೆಸ್ಕಾಂ ಇಲಾಖೆಯ ಸಿಬ್ಬಂದಿ ಆಗಮಿಸಿ ತೆರವು ಕಾರ್ಯ ನಡೆಸಿದರು.

ಬಾಳೆ ಬೆಳೆ ಹಾನಿ:

ತಾಲೂಕಿನ ಆನೆಗೊಂದಿ, ಚಿಕ್ಕರಾಂಪುರ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಗಾಳಿಯಿಂದಾಗಿ ನೂರಾರು ಎಕರೆ ಪ್ರದೇಶ ಬಾಳೆ ಬೆಳೆ ಹಾನಿಯಾಗಿವೆ. ವಿಜಯನಗರ ಕಾಲುವೆಯಿಂದ ಕೃಷಿ ಮಾಡಿದ್ದ ರೈತರ ಬೆಳೆಗೆ ಹಾನಿಯಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರಟಗಿ ತಾಲೂಕಿನಾದ್ಯಂತ ಉತ್ತಮ ಮಳೆ:ಕಳೆದ ಎರಡ್ಮೂರು ತಿಂಗಳಿನಿಂದ ನೆತ್ತಿ ಸುಡುವ ಬಿಸಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಕಾರಟಗಿ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳಲ್ಲಿ ಉತ್ತಮ ಮಳೆಯಾಗಿ ಜನರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ ಬುಧವಾರ ಮಧ್ಯರಾತ್ರಿ ಕಾರಟಗಿ ಪಟ್ಟಣ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ತಂಪು ಗಾಳಿ ಬೀಸಿದೆ.ಕಾರಟಗಿಯ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಪ್ರಕಾರ ಈ ವರ್ಷ ಇದೇ ಮೊದಲ ಬಾರಿಗೆ ೯.೨ ಮಿ.ಮೀ. ಮಳೆ ದಾಖಲಾಗಿದೆ.

ಇನ್ನು ಗುರುವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ಆವರಿಸಿತ್ತು. ಸಂಜೆಯಾಗುತ್ತಲೆ ಮಳೆರಾಯ ತನ್ನ ಕೃಪೆಯನ್ನು ತೋರಿ ಬಿಸಿಲ ತಾಪಕ್ಕೆ ಬೆಂಡಾದ ಜನರಿಗೆ ಕೊಂಚ ತಂಪೆರೆದಿದ್ದಾನೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಭಾರೀ ಗಾಳಿ ಸಹಿತ ಮಳೆ ಸುರಿದಿದೆ. ತಾಲೂಕಿನ ಸಿದ್ದಾಪುರ, ಕೊಟ್ನೆಕಲ್, ಬರಗೂರು, ಅರುಣೋದಯ ತಾಂಡಾ, ಬೆನ್ನೂರು ಸೇರಿ ವಿವಿಧಡೆ ಸುಮಾರು ೫.೩೦ರಿಂದ ನಿರಂತರವಾಗಿ ಮಳೆಯಾಗಿದ್ದು, ರಸ್ತೆಯಲ್ಲೆಲ್ಲ ನೀರು ಹರಿದಾಡಿದೆ.ಇನ್ನು ಚೆಳ್ಳೂರು, ಹಗೇದಾಳ, ತೊಂಡಿಹಾಳ, ಹುಳ್ಕಿಹಾಳ, ಸಿಂಗನಾಳ ಭಾಗದಲ್ಲಿ ಸಂಜೆ ೪ರಿಂದ ಮಳೆ ಸುರಿಯುತ್ತಿದ್ದು ರಾತ್ರಿ ವರೆಗೂ ಈ ಗ್ರಾಮಗಳಲ್ಲಿಯೂ ಉತ್ತಮ ಮಳೆಯಾಗಿದೆ. ಈಗ ವರುಣನ ಆಗಮನ ಜನರಲ್ಲಿ ಮುಖ್ಯವಾಗಿ ರೈತರಲ್ಲಿ ಮಂದಹಾಸ ಮೂಡಿಸಿದೆ.