ಇಂದು ಕೆ.ಆರ್‌.ಮಾರುಕಟ್ಟೆ ಶುಭಾರಂಭ: ಬಕ್ಕೇಶ್‌

| Published : May 10 2024, 01:36 AM IST

ಸಾರಾಂಶ

ಶ್ರೀ ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ವರ್ತಕರ ಸಂಘದಿಂದ ನಗರದಲ್ಲಿ ನೂತನ ಕೆ.ಆರ್.ಮಾರುಕಟ್ಟೆ ಸಂಕೀರ್ಣದಲ್ಲಿ ಮೇ 10ರಂದು ಬಸವ ಜಯಂತಿಯಂದು ವಿಶೇಷ ಪೂಜೆ, ವಾಸ್ತು ಶಾಂತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಕ್ಕೇಶ್ ಐರಣಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಮೈಸೂರು ಅರಸರು ಕಟ್ಟಿದ್ದ ಜಾಗದಲ್ಲಿ ಹೊಸ ಕಟ್ಟಡ । ವಿವಿಧ ಧಾರ್ಮಿಕ ಕಾರ್ಯಗಳ ಆಯೋಜನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಶ್ರೀ ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ವರ್ತಕರ ಸಂಘದಿಂದ ನಗರದಲ್ಲಿ ನೂತನ ಕೆ.ಆರ್.ಮಾರುಕಟ್ಟೆ ಸಂಕೀರ್ಣದಲ್ಲಿ ಮೇ 10ರಂದು ಬಸವ ಜಯಂತಿಯಂದು ವಿಶೇಷ ಪೂಜೆ, ವಾಸ್ತು ಶಾಂತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬಕ್ಕೇಶ್ ಐರಣಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಬೆಳಗ್ಗೆ ಧಾರ್ಮಿಕ ಕಾರ್ಯ, ಪೂಜೆ, ವಾಸ್ತು ಶಾಂತಿ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಸವ ಜಯಂತಿ ದಿನದಿಂದಲೇ ಮಾರುಕಟ್ಟೆಯ ಮೂಲ ವ್ಯಾಪಾರಸ್ಥರು, ವರ್ತಕರು ತಮ್ಮ ವ್ಯಾಪಾರ, ವಹಿವಾಟನ್ನು ಮತ್ತೆ ಹೊಸದಾಗಿ ಆರಂಭಿಸಲಿದ್ದಾರೆ ಎಂದರು.

ದಾವಣಗೆರೆಯಲ್ಲಿ 1951ರಲ್ಲಿ ಕೆಆರ್ ಮಾರುಕಟ್ಟೆಯನ್ನು ಆಗಿನ ಮೈಸೂರು ಮಹಾರಾಜರಾದ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ನಿರ್ಮಾಣ ಮಾಡಿದ್ದರು. ಶಿಥಿಲವಾಗಿದ್ದ, ನಿಲುಗಡೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದ ಹಿನ್ನೆಲೆ ಹಳೇ ಮಾರುಕಟ್ಟೆಯನ್ನು 2015ರಲ್ಲಿ ಕೆಡವಿ, ಹೊಸದಾಗಿ ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 9-9 ಅಡಿ ಅಳತೆಯ 254 ಮಳಿಗೆಗಳು ಅಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

ನೆಲ ಮಹಡಿ, ಮೊದಲ ಮಹಡಿ ನಿರ್ಮಾಣವಾಗಿದ್ದು, ಮೂಲ ಬಾಡಿಗೆದಾರಿರಗೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪಾಲಿಕೆ ಆಯುಕ್ತೆ ರೇಣುಕಾ ಹಂಚಿಕೆ ಮಾಡಿದ್ದಾರೆ. ಈಗಾಗಲೇ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಾರುಕಟ್ಟೆ ನಿರ್ಮಾಣ ಆಗಿದ್ದು, ವಾಣಿಜ್ಯ ಮಳಿಗೆಗಳನ್ನು ಮಾರ್ಚ್ ತಿಂಗಳಲ್ಲೇ ಹಂಚಿಕೆ ಮಾಡಲಾಗಿದೆ ಎಂದರು.

ಹೊಸ ಮಾರುಕಟ್ಟೆಯಲ್ಲಿ ಮಳಿಗೆಗಳು ಚಿಕ್ಕದಾಗಿದ್ದು, ತರಕಾರಿ, ಹಣ್ಣಿನ ವ್ಯಾಪಾರಸ್ಥರಿಗೆ ಅಗತ್ಯವಿರುವಷ್ಟು ದೊಡ್ಡದಾಗಿ ನಿರ್ಮಿಸಿಲ್ಲ. ಒಂದಿಷ್ಟು ಸಮಸ್ಯೆಗಳೂ ಇವೆ. ಈ ಬಗ್ಗೆ ಶಾಸಕರ ಗಮನಕ್ಕೂ ತಂದು, ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸುತ್ತೇವೆ. ಅಲ್ಲದೇ. ಮೊದಲ ಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಯೋಜನೆಯಲ್ಲಿದೆ. ಆದರೆ, ಹಳೇ ಹೆರಿಗೆ ಆಸ್ಪತ್ರೆಯವರ ಅಧಿಕಾರಿಗಳು ಅದಕ್ಕೆ ಸಮ್ಮತಿಸದ ಕಾರಣಕ್ಕೆ ವಿಳಂಬವಾಗಿದೆ. ಈ ಬಗ್ಗೆಯೂ ಸಚಿವರು, ಶಾಸಕರ ಗಮನಕ್ಕೆ ತರಲಿದ್ದೇವೆ ಎಂದು ವಿವರಿಸಿದರು.

ಖಜಾಂಚಿ ಟಿ.ಎಂ.ಚಂದ್ರಮೋಹನ ಬಾಬು ಮಾತನಾಡಿ, ಕೆ.ಆರ್. ಮಾರುಕಟ್ಟೆ ಜಾಗದಲ್ಲೇ ಹೊಸ ಕಟ್ಟಡದಲ್ಲಿ ಬಸವ ಜಯಂತಿ ದಿನದಿಂದ ವ್ಯಾಪಾರ ವಹಿವಾಟು ಆರಂಭಿಸುತ್ತಿದ್ದೇವೆ. ಎಂದಿನಂತೆ ಗ್ರಾಹಕರು ಸಹಕರಿಸಿ, ವ್ಯವಹಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಂಘದ ಪರವಾಗಿ ಮನವಿ ಮಾಡಿದರು.

ಸಂಘದ ಪಿ.ರುದ್ರೇಶ, ಜಿ.ಎಸ್.ದಾನೇಶಪ್ಪ, ಎಂ.ಜಿ.ನಾಗರಾಜ, ಎಲ್.ಮುರುಗೇಶ, ಜಿ.ಎಸ್.ದಾನೇಶಪ್ಪ, ಪಿ.ಶಿವಾನಂದಪ್ಪ ಇತರರು ಇದ್ದರು.

- - - -9ಕೆಡಿವಿಜಿ2:

ದಾವಣಗೆರೆಯಲ್ಲಿ ಶ್ರೀ ಕೃಷ್ಣ ರಾಜೇಂದ್ರ ತರಕಾರಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಐರಣಿ ಬಕ್ಕೇಶ, ಖಚಾಂಜಿ ಟಿ.ಎಂ.ಚಂದ್ರಮೋಹನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.