ಕೆಂಡದಂಥ ಬಿಸಿಲಿನಲ್ಲೂ ಪ್ರಚಂಡ ಮತದಾನ

| Published : May 08 2024, 01:01 AM IST

ಸಾರಾಂಶ

ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕುಗೊಂಡಿತ್ತು. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣರಲ್ಲಿ ಹಕ್ಕು ಚಲಾಯಿಸುವ ಉತ್ಸಾಹ ಹೆಚ್ಚಾಗಿತ್ತು. ಪ್ರಖರ ಬಿಸಿಲು ಲೆಕ್ಕಿಸದೆ ವೃದ್ಧರು, ಮಹಿಳೆಯರು, ಅಂಗವಿಕಲರು ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ಲೋಕಸಭಾ ಚುನಾವಣೆಗೆ ಮಂಗಳವಾರ ಜರುಗಿದ ಮತದಾನ ಕೆಲವೊಂದು ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಶಾಂತಿಯುತವಾಗಿ ನಡೆದಿದ್ದು, ಸಂಜೆ 6 ಗಂಟೆಗೆ ಶೇ. 76.56ರಷ್ಟು ಮತದಾನವಾಗಿದೆ.

ಕಳೆದ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶೇ. 69.59ರಷ್ಟು ಮತದಾನವಾಗಿತ್ತು. 2018ರ ಉಪ ಚುನಾವಣೆಯಲ್ಲಿ ಶೇ. 61.12ರಷ್ಟು ಜನರು ಹಕ್ಕು ಚಲಾಯಿಸಿದ್ದರು.

ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಚುರುಕುಗೊಂಡಿತ್ತು. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣರಲ್ಲಿ ಹಕ್ಕು ಚಲಾಯಿಸುವ ಉತ್ಸಾಹ ಹೆಚ್ಚಾಗಿತ್ತು. ಪ್ರಖರ ಬಿಸಿಲು ಲೆಕ್ಕಿಸದೆ ವೃದ್ಧರು, ಮಹಿಳೆಯರು, ಅಂಗವಿಕಲರು ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿ, ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡರು.

ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಕುಟುಂಬ ಸಮೇತರಾಗಿ ಆಗಮಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಮತಕೇಂದ್ರದಲ್ಲಿ ಹಕ್ಕು ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಸಂಡೂರಿನಲ್ಲಿ ಮತದಾನ ಮಾಡಿದರು.

ಸಚಿವ ಬಿ.ನಾಗೇಂದ್ರ ಅವರು ನಗರದ ವುಂಕಿ ಮರಿಸಿದ್ದಮ್ಮ ಶಾಲೆಯ ಮತಕೇಂದ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.

ಖುಷಿಗೊಂಡ ಯುವ ಮತದಾರರು

ಬೆಳಗ್ಗೆ 7 ಗಂಟೆಯಿಂದಲೇ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಬೆಳಗ್ಗೆ 9 ಗಂಟೆ ವೇಳೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಶೇ.10.37ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆ ಬಳಿಕ ಮತದಾನ ಪ್ರಕ್ರಿಯೆ ಚುರುಕಾಯಿತು. ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 56.76ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಗೆ ಶೇ. 68.94 ಹಾಗೂ ಸಂಜೆ 6 ಗಂಟೆ ವೇಳೆಗೆ ಶೇ.76.56ರಷ್ಟು ಮತದಾನವಾಯಿತು.

ವಯೋವೃದ್ಧರು, ವಿಶೇಷಚೇತನರು ಹಾಗೂ ವಯೋವೃದ್ಧರು ಕುಟುಂಬ ಸದಸ್ಯರ ಸಹಾಯದಿಂದ ಮತಗಟ್ಟೆಗೆ ಆಗಮಿಸಿ, ಮತ ಚಲಾಯಿಸಿ, ಜವಾಬ್ದಾರಿ ಮೆರೆದರು.

ಬಳ್ಳಾರಿ ತಾಲೂಕು ಸಂಗನಕಲ್ಲು ಗ್ರಾಮದಲ್ಲಿ ಶಿರೀಶಾ, ಕುರುಗೋಡು ತಾಲೂಕು ಯರಂಗಳಿಗಿ ಗ್ರಾಮದ ಸ್ವಪ್ನಾ ಮತ್ತು ಮೌನಿಕಾ, ಕುರುಗೋಡಿನ ರೇವತಿ ಅವರು ಇದೇ ಮೊದಲ ಬಾರಿಗೆ ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದು, ಪ್ರಥಮ ಬಾರಿಗೆ ಮತ ಚಲಾಯಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು. ಕುರುಗೋಡು ತಾಲೂಕು ಬಾದನಹಟ್ಟಿಯ 82 ವರ್ಷದ ನೀಲಮ್ಮ ಉತ್ಸಾಹದಿಂದ ವ್ಹೀಲ್ ಚೇರ್‌ನಲ್ಲಿ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದ್ದು ಕಂಡುಬಂದಿತು.

ಬಳ್ಳಾರಿ ತಾಲೂಕು ಕೊಳಗಲ್ಲು ಗ್ರಾಮದ ಕೃಷ್ಣಾ ನಗರ ಕ್ಯಾಂಪ್‍ನ ನಿವಾಸಿಗಳು ವಿವಿಧ ಬೇಡಿಕೆಗಳನ್ನಿರಿಸಿ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ಆದರೆ ವಿವಿಧ ಅಧಿಕಾರಿಗಳ ನೇತೃತ್ವದ ತಂಡ ಗ್ರಾಮಕ್ಕೆ ತೆರಳಿ, ಗ್ರಾಮದ ಮುಖಂಡರ ಮನವೊಲಿಸಿದ ಪರಿಣಾಮವಾಗಿ ಕೃಷ್ಣಾ ನಗರ ಕ್ಯಾಂಪ್‍ನ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು ಕಂಡುಬಂದಿತು.

ಶಾಖಾಘಾತದಿಂದ ಮತದಾರರಿಗೆ ಅಥವಾ ಮತಗಟ್ಟೆ ಸಿಬ್ಬಂದಿಗೆ ಆರೋಗ್ಯ ಸಮಸ್ಯೆ ಕಾಡುವ ಸಂಭವನೀಯತೆಯನ್ನು ಎದುರಿಸುವ ಸಲುವಾಗಿ ಈ ಬಾರಿ ಆರೋಗ್ಯ ಇಲಾಖೆಯು ಪ್ರತಿ ಮತಗಟ್ಟೆಯಲ್ಲಿಯೂ ಸ್ಯಾನಿಟೈಸರ್, ಪ್ರಥಮ ಚಿಕಿತ್ಸಾ ಕಿಟ್ ಸೇರಿದಂತೆ ವಿವಿಧ ಅಗತ್ಯದ ಔಷಧಿಗಳ ವ್ಯವಸ್ಥೆ ಮಾಡಿತ್ತು.

ಬಿಸಿಲಿನ ತಾಪಕ್ಕೆ ಸಿಬ್ಬಂದಿ ಹೈರಾಣು.

ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ತೀವ್ರ ಬಿಸಿಲಿನ ತಾಪದಿಂದ ಹೈರಾಣಾದರು. ಕೊಳಗಲ್ಲು ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಸಿಬ್ಬಂದಿ ಲಕ್ಷ್ಮೀದೇವಿ ಅವರು ರಕ್ತದೊತ್ತಡ ಸಮಸ್ಯೆಯಿಂದಾಗಿ ಪ್ರಜ್ಞೆತಪ್ಪಿದ್ದರು. ಬಳಿಕ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕುಡಿತಿನಿ ಮತಕೇಂದ್ರದ ಸಿಬ್ಬಂದಿಯೊಬ್ಬರು ರಕ್ತದೊತ್ತಡ ಸಮಸ್ಯೆಯಿಂದ ತೀವ್ರ ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಬಳಿಕ ಚೇತರಿಸಿಕೊಂಡರು. ಎಲ್ಲ ಮತಗಟ್ಟೆಗಳಲ್ಲಿ ಸಿಬ್ಬಂದಿಗೆ ಫ್ಯಾನ್, ಸಿಬ್ಬಂದಿ ಹಾಗೂ ಮತದಾರರಿಗೆ ಕುಡಿವನೀರು, ನೆರಳಿನ ವ್ಯವಸ್ಥೆ ಮಾಡಲಾಗಿತ್ತು.