ಕೆರಾಡಿ ಶಾಲೆಯಲ್ಲಿ ಮತದಾನ ಮಾಡಿದ ನಟ ರಿಷಭ್‌ ಶೆಟ್ಟಿ

| Published : May 08 2024, 01:01 AM IST

ಸಾರಾಂಶ

ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕಾಗಿ, ನಾನು ದೇಶಕ್ಕಾಗಿ ಮತ ಹಾಕಿದ್ದೇನೆ. ಮತದಾನ ನಮ್ಮ ಹಕ್ಕಾಗಿರುವುದರಿಂದ ಅದನ್ನು ಜವಾಬ್ದಾರಿಯಿಂದ ಚಲಾಯಿಸಿದ್ದೇನೆ ಎಂದು ರಿಷಭ್‌ ಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕಾಂತಾರ-2 ಸಿನಿಮಾ ಚಿತ್ರೀಕರಣದ ಮಧ್ಯೆಯೇ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಸಂಜೆ ಆಗಮಿಸಿ ಮತದಾನ ಮಾಡಿದರು.ಮತದಾನ ಮಾಡಿದ‌ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕಾಗಿ, ನಾನು ದೇಶಕ್ಕಾಗಿ ಮತ ಹಾಕಿದ್ದೇನೆ. ಮತದಾನ ನಮ್ಮ ಹಕ್ಕಾಗಿರುವುದರಿಂದ ಅದನ್ನು ಜವಾಬ್ದಾರಿಯಿಂದ ಚಲಾಯಿಸಿದ್ದೇನೆ. ಬೆಳಗ್ಗೆ ಮತಗಟ್ಟೆಯಲ್ಲಿ ಜಾಸ್ತಿ ಜನ ಇರುತ್ತಾರೆ ಎನ್ನುವ ಕಾರಣಕ್ಕಾಗಿ ಮಧ್ಯಾಹ್ನದ ಬಳಿಕ ಬಂದಿದ್ದೇನೆ. ಸರ್ಕಾರದ ನಿರೀಕ್ಷೆ ಹಾಗೂ ರಾಜಕೀಯದ ಬಗ್ಗೆ ಮಾತನಾಡಲ್ಲ. ನನ್ನ ಜವಾಬ್ದಾರಿಯನ್ನು ಮಾಡಿದ್ದೇನೆ ಅಷ್ಟೇ ಎಂದರು.

ನಾನು ಓದಿದ, ಆಟವಾಡಿದ ಶಾಲೆಯಲ್ಲೇ ಮತದಾನ ಮಾಡಿರುವ ಬಗ್ಗೆ ಖುಷಿ ಇದೆ. ಶಾಲೆಯನ್ನು ದತ್ತು ಸ್ವೀಕರಿಸಲಾಗಿದ್ದು, ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಕ್ರೀಡಾಂಗಣವನ್ನು ವಿಸ್ತಾರ ಮಾಡಲಾಗಿದೆ. ಚುನಾವಣೆಗಳು ಪ್ರಾರಂಭವಾಗಿದ್ದರಿಂದಾಗಿ ಪೂರ್ತಿ ಕೆಲಸ ಮಾಡಲು ಆಗಲಿಲ್ಲ. ಕಟ್ಟಡ, ಪೀಠೋಪಕರಣ ಸೇರಿದಂತೆ ಶಾಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸಗಳು ಆಗಬೇಕಾಗಿದೆ ಇದಕ್ಕಾಗಿ ಇಡೀ ತಂಡ ಕೆಲಸ ಮಾಡಲಿದೆ ಎಂದರು.

ಇತ್ತೀಚೆಗಷ್ಟೇ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡಿರುವ ರಿಷಭ್‌, ಶಾಲೆಯ ಅಭಿವೃದ್ಧಿಗಾಗಿ ನೀಲ ನಕಾಶೆಯನ್ನು ತಯಾರಿಸಿಕೊಂಡಿದ್ದಾರೆ. ಇದೇ ಶಾಲೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 135 ಆಗಮಿಸಿದ ಅವರು ಖುಷಿಯಿಂದ ಮತದಾನ ಮಾಡಿ ಊರ ಅಭಿಮಾನಿಗಳೊಂದಿಗೆ ಮತದಾನದ ಸಂತೋಷವನ್ನು ಹಂಚಿಕೊಂಡರು.

* ಅಂದುಕೊಂಡಂತೆ ಕಾಂತಾರ-2 ಚಿತ್ರೀಕರಣ

ಇತ್ತೀಚಿನ ದಿನಗಳಲ್ಲಿ ಜನ ಸಿನಿಮಾಗಳನ್ನು ನ್ಯೂಸ್ ಚಾನೆಲ್‌ಗಳಲ್ಲಿ ನೋಡುವುದನ್ನೆ ರೂಢಿಸಿಕೊಂಡಿದ್ದಾರೆ. ನ್ಯೂಸ್ ಚಾನೆಲ್‌ಗಳಲ್ಲಿಯೇ ಸಿನಿಮಾದ ಕಥೆ ಹೇಳಿದರೆ ಹೇಗೆ? ಸಿನಿಮಾಗಳನ್ನು ಜನ ಥೀಯೇಟರ್‌ಗಳಲ್ಲಿಯೇ ನೋಡಬೇಕು. ಕಾಂತಾರ-2 ಚಿತ್ರದ ಬಗ್ಗೆ ಹೊಂಬಾಳೆಯವರೇ ಎಲ್ಲವನ್ನು ಅಧಿಕೃತ ಘೋಷಣೆ ಮಾಡಿದರೆ ಒಳ್ಳೆಯದು. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು, ಚೆನ್ನಾಗಿ ನಡೀತಾ ಇದೆ. ನಾವು ಅಂದುಕೊಂಡಂತೆ ಕೆಲಸಗಳು ಸಾಗುತ್ತಿದೆ. ಈ ಹಿಂದಿಗಿಂತಲೂ ದೊಡ್ಡ ಜವಾಬ್ದಾರಿ ಚಿತ್ರ ತಂಡದ ಮೇಲಿರುವುದರಿಂದ ಅದಕ್ಕೆ ತಕ್ಕಂತೆ ಇಡೀ ತಂಡ ಕೆಲಸ ನಿರ್ವಹಿಸುತ್ತಿದೆ. ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗೆ ಒಂದು ಪುಣ್ಯ. ತಂತ್ರಜ್ಞರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಹಂತ ಹಂತವಾಗಿ ಚಿತ್ರೀಕರಣ ನಡೆಯುತ್ತಿದ್ದರೂ, ಇದನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಜನರು ಪ್ರೀತಿಯಿಂದ ಬೆನ್ನುತಟ್ಟಿ ಕಾಂತಾರವನ್ನು ಗೆಲ್ಲಿಸಿದ್ದಾರೆ ಹಾಗಾಗಿ ಬಾಯಿಯಲ್ಲಿ ಏನು ಹೇಳಲ್ಲ, ಕೆಲಸ ಮಾಡಿ ತೋರಿಸಬೇಕು ಎನ್ನುವ ಸಂಕಲ್ಪ ಮಾಡಿದ್ದೇನೆ. ಸಿನಿಮಾ ಮಾಡುವಾಗ ಯಾರ ಒತ್ತಡವೂ ಇಲ್ಲ. ಹಿಂದೆ ಕಾಂತಾರವೂ ನನಗೆ ದೊಡ್ಡ ಸಿನಿಮಾ ಆಗಿತ್ತು, ಇದು ಕೂಡ ದೊಡ್ಡ ಸಿನಿಮಾವೇ ಆಗಿದೆ. ಪ್ರತಿ ಸಿನಿಮಾವೂ ಹೊಸತನ್ನು ಕಲಿಸಿ ಕೊಡುತ್ತದೆ, ಸಿನಿಮಾ ಎಂದರೆ ಕಲಿಯುವ ಪ್ರೊಸೆಸ್. ಸಿನಿಮಾಗೋಸ್ಕರ ಒಂದು ವರ್ಷದಿಂದ ಗಡ್ಡ ಹಾಗೂ ಕೂದಲು ಬಿಟ್ಟಿದ್ದೇನೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ನನ್ನೂರಿನ ಜನರಿಗೂ ಈ ಬಗ್ಗೆ ವಿನಂತಿ ಮಾಡಲಾಗಿದೆ. ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಸೆಟ್ ವರ್ಕ್ ಚಿತ್ರೀಕರಣ ಸ್ಥಳಕ್ಕೆ ಕರೆಯುವುದು, ಮಾಧ್ಯಮದವರೊಂದಿಗೆ ಮಾತನಾಡುವುದು ಎಲ್ಲ ಇದ್ದೇ ಇರುತ್ತದೆ. ಚಿತ್ರದ ಕುರಿತು ಅಂತೆ-ಕಂತೆಗಳ ಸುದ್ದಿ ಬಹಳಷ್ಟು ಹರಿದಾಡುತ್ತಿದೆ. ಚಿತ್ರದ ಬಗ್ಗೆ ಜನರಿಗೆ ನಿರೀಕ್ಷೆಯೂ ಹೋಗಬಾರದು ಹಾಗೂ ಕೂತೂಹಲವೂ ಇರಬೇಕು ಎನ್ನುವ ಕಾರಣಕ್ಕಾಗಿ ಚಿತ್ರ ಪ್ರದರ್ಶನಕ್ಕೆ ಬರುವವರೆಗೂ ಕಥೆಯ ಕೂತೂಹಲ ಉಳಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಬಹತೇಕ ಕರಾವಳಿ ಭಾಗದಲ್ಲಿ ಪೂರ್ತಿ ಚಿತ್ರೀಕರಣ ಮಾಡುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದರು.