ಹೊರ ರಾಜ್ಯಗಳಲ್ಲಿ ಕೂಡ ಬಸವ ಜಯಂತಿ ಆಚರಣೆಯಲ್ಲಿದೆ

| Published : May 10 2024, 01:39 AM IST

ಸಾರಾಂಶ

ಬಸವಣ್ಣನವರ ಕಾಲದಲ್ಲಿ ಸ್ಥಾನಿಕರು, ಪ್ರಭುಗಳು, ಅಧಿಕಾರಿಗಳು ಪ್ರಜಾ ಶೋಷಕರಾಗಿದ್ದನ್ನು ನೋಡಬಹುದು. ದುಡಿದು ಮೈ ಬಗ್ಗಿಸುವವನು ಹಾಗೂ ದುಡಿದು ಮೈ ಬೆಳೆಸುವವರನ್ನು ನೋಡಬಹುದು

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದಲ್ಲಿ ಅಲ್ಲದೆ ಇತರ ರಾಜ್ಯಗಳಲ್ಲಿ ಕೂಡ ಬಸವ ಜಯಂತಿಯ ಆಚರಣೆಯಲ್ಲಿದೆ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯಯ ಕುಲಪತಿ ಪ್ರೊ.ಎಂ.ಆರ್. ಗಂಗಾಧರ್ ತಿಳಿಸಿದರು.

ಹೊಸಮಠದ ಶ್ರೀ ನಟರಾಜ ಪ್ರತಿಷ್ಠಾನವು ಶ್ರೀ ನಟರಾಜ ಶಿಕ್ಷಣ ಸಂಸ್ಥೆಗಳು ಹಾಗೂ ಲಿಂಗಾಯತ ಸಂಘ ಸಂಸ್ಥೆಗಳು ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ ಅವರು ಸಾಮಾಜಿಕ ಅನಿಷ್ಟ ಪದ್ಧತಿಗಳು, ತಾರತಮ್ಯಗಳು, ಮೌಢ್ಯ ಆಚರಣೆಗಳನ್ನು ವಿರೋಧಿಸಿ ಕನಸನ್ನು ಸಾಕಾರಗೊಳಿಸಿದರು ಎಂದರು.

ಆದರೆ, ಇಂದಿಗೂ ಸಮಾಜದಲ್ಲಿರುವ ಅನಿಷ್ಟ ಆಚರಣೆಗಳನ್ನು ಹೋಗಲಾಡಿಸಲು ಪ್ರಾಥಮಿಕ ಆಂತರಿಕವಾಗಿ ವಿದ್ಯಾರ್ಥಿಗಳಿಗೆ ಬಸವಣ್ಣನವರ ತತ್ವಗಳನ್ನು ಕಲಿಸಬೇಕಾಗಿದೆ. ಇಂದಿನ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಶಾಲೆಯ ಒಳಗೆ ಮತ್ತು ಹೊರಗೆ ಉಪನ್ಯಾಸಗಳು ಮತ್ತು ಸಣ್ಣ ಪುಸ್ತಕಗಳ ಮೂಲಕ ಅರಿವು ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.

ಶರಣ ಚಿಂತನೆ

ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಕುರಿತು ಸಾಹಿತಿ ಪ್ರೊ. ಶುಭಚಂದ್ರ ಮಾತನಾಡಿ, ಬಸವಣ್ಣನವರ ಕಾಲದಲ್ಲಿ ಸ್ಥಾನಿಕರು, ಪ್ರಭುಗಳು, ಅಧಿಕಾರಿಗಳು ಪ್ರಜಾ ಶೋಷಕರಾಗಿದ್ದನ್ನು ನೋಡಬಹುದು. ದುಡಿದು ಮೈ ಬಗ್ಗಿಸುವವನು ಹಾಗೂ ದುಡಿದು ಮೈ ಬೆಳೆಸುವವರನ್ನು ನೋಡಬಹುದು ಎಂದರು.

ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಪ್ರಜಾಪ್ರಭುತ್ವಕ್ಕೆ ಕಲ್ಪನೆಯನ್ನು ನೀಡಿದವರೇ ಬಸವಣ್ಣ ಮತ್ತು ವಚನಕಾರರು ನಮ್ಮ ಕರುನಾಡಿನಲ್ಲಿ ಎಂಬುದು ವಿಶೇಷವಾಗಿದೆ. ಇಷ್ಟ ಲಿಂಗದ ಮೂಲಕ ಸಮಾನತೆಯನ್ನು ಸಾಧಿಸುವ ಹೆಜ್ಜೆಗಳನ್ನು ಇಟ್ಟರು ಮತ್ತು ಕೆಲವು ವಿಚಾರಧಾರೆಗಳಿಗೆ ರಾಜಶ್ರೀಯ ದೊರೆಯದಿದ್ದರೂ ಮುನ್ನಡೆದರು. ಬಸವಪ್ರಜ್ಞೆ ಎಂಬುದು ಮಾನವ ಪ್ರಜ್ಞೆ ಹಾಗೂ ಸಮಾನತೆಯ ಪ್ರಜ್ಞೆಯಾಗುತ್ತದೆ ಎಂದು ಅವರು ತಿಳಿಸಿದರು.

ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಇದ್ದರು. ಚೂಡಾಮಣಿ ಪ್ರಾರ್ಥಿಸಿದರು. ಸಿ.ಎನ್. ಸಂತೋಷ್ ಪಟೇಲ್ ಸ್ವಾಗತಿಸಿದರು. ಪ್ರದೀಪ್ ವಂದಿಸಿದರು. ವಿ.ಡಿ. ಸುನಿತಾರಾಣಿ ನಿರೂಪಿಸಿದರು.