ಕೊಡಗಿನ ವಿವಿಧೆಡೆ ಭಾರಿ ಮಳೆ

| Published : May 10 2024, 01:34 AM IST

ಸಾರಾಂಶ

ಕೊಡಗು ಜಿಲ್ಲೆಯ ವಿವಿಧ ಕಡೆ ಮಧ್ಯಾಹ್ನ ನಂತರ ಭಾರಿ ಮಳೆಯಾಗಿದೆ. ಮಳೆ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ವಿವಿಧ ಕಡೆಯಲ್ಲಿ ಗುರುವಾರ ಮಧ್ಯಾಹ್ನದ ನಂತರ ಭಾರಿ ಮಳೆಯಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಲ ಕಾಲ ಜನ ಜೀವನ ಅಸ್ತವ್ಯಸ್ತಗೊಂಡಿತು. ನಗರದ ಸುದರ್ಶನ ರಸ್ತೆಯ ಬಳಿ ತೆಂಗು ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತು. ಮರ ಬಿದ್ದ ಪರಿಣಾಮ ಕಾರೊಂದಕ್ಕೆ ಹಾನಿಯಾಯಿತು. ಇದರಿಂದ ಸುದರ್ಶನ ಅತಿಥಿಗೃಹಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಕೂಡ ಉತ್ತಮ ಮಳೆಯಾಗಿದೆ. ಇದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆ ಕಂಡಿದೆ. ತಲಕಾವೇರಿ ವ್ಯಾಪ್ತಿಯಲ್ಲೂ ಉತ್ತಮ ಮಳೆ ಸುರಿಯಿತು.

ಉಳಿದಂತೆ ಸುಂಟಿಕೊಪ್ಪ, ಕುಶಾಲನಗರ ಸೇರಿದಂತೆ ಕೆಲವು ಕಡೆಯಲ್ಲಿ ಮಳೆಯಾಯಿತು.

ಬುಧವಾರ ರಾತ್ರಿ ಕೆಲವು ಭಾಗಗಳಲ್ಲಿ ಗಾಳಿ ಮಳೆಯಾಯಿತು. ವಿರಾಜಪೇಟೆ ನಗರದ ದೇವಾಗರ ಬೀದಿಯ ನಿವಾಸಿ ಎಂ.ಬಿ ಸತೀಶ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ಘಟನ ಸ್ಥಳಕ್ಕೆ ಪುರಸಭೆಯ ಮುಖ್ಯ ಅಧಿಕಾರಿ ಚಂದ್ರಕುಮಾರ್ ಹಾಗೂ ಪುರಸಭೆಯ ಸದಸ್ಯರಾದ ರಾಜೇಶ್ ಪದ್ಮನಾಭ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು.