ಎಸ್ಸೆಸ್ಸೆಲ್ಸಿಯಲ್ಲಿ ಬಾಗಲಕೋಟೆಗೆ ಬಂಪರ್‌

| Published : May 10 2024, 01:34 AM IST

ಸಾರಾಂಶ

2024ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.77.92ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

2024ರ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.77.92ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 14954 ಬಾಲಕರು ಮತ್ತು 15492 ಬಾಲಕಿಯರು ಸೇರಿ ಒಟ್ಟು 30446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 11044 ಬಾಲಕರು, 13415 ಬಾಲಕಿಯರು ಸೇರಿ ಒಟ್ಟು 24459 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ.73.85 ರಷ್ಟು ತೇರ್ಗಡೆ ಹೊಂದಿದ್ದರೆ, ಬಾಲಕಿಯರು ಶೇ.86.59ರಷ್ಟು ತೇರ್ಗಡೆ ಹೊಂದಿದ್ದಾರೆ. 2022-23ನೇ ಸಾಲಿನಲ್ಲಿ ಶೇ.84.21 ಫಲಿತಾಂಶ ಪಡೆಯುವ ಮೂಲಕ 27ನೇ ಸ್ಥಾನ ಪಡೆದುಕೊಂಡರೆ, 2023-24ನೇ ಸಾಲಿನಲ್ಲಿ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನಕ್ಕೆ ಜಿಗತ ಕಂಡಿದೆ. ಶೇಕಡಾವಾರು ಫಲಿತಾಂಶದಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಕಡಿಮೆ ಆಗಿದ್ದರೂ ಜಿಲ್ಲಾ ವಾರು ರ್‍ಯಾಂಕ್‌ ಪಟ್ಟಿಯಲ್ಲಿ ಉತ್ತಮ ಸಾಧನೆ ಮಾಡಿದೆ.

625ಕ್ಕೆ 625 ಅಂಕ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಬಸಪ್ಪ ಕೊಣ್ಣೂರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಹಾಘೂ ಜಿಲ್ಲೆಗೂ ಪ್ರಥಮ ಸ್ಥಾನ ಪಡೆದುಕೊಂಡರೆ, 625ಕ್ಕೆ 622 ಅಂಕ ಪಡೆದ ಮುಧೋಳನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶ್ರುತಿ ಹಂಚಾಟೆ, ಗುಳೇದಗುಡ್ಡ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಮಿನಾಜ್‌ ಕುರುಡಗಿ ಜಿಲ್ಲೆಗೆ ದ್ವಿತೀಯ ಸ್ಥಾನ, ಬಾಗಲಕೋಟೆ ಎಸ್.ಸಿ, ಎಸ್ಟಿ ಪ್ರತಿಭಾನ್ವಿತ ಶಾಲೆಯ ವಿದ್ಯಾರ್ಥಿ ದೀಪಾ ಕೊಕಟನೂರ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾದಾಮಿ ತಾಲೂಕಿನಲ್ಲಿ 5237 ಪೈಕಿ 4194 (ಶೇ.80.08) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ 4556 ಪೈಕಿ 3620 (ಶೇ.79.46), ಬೀಳಗಿ ತಾಲೂಕಿನಲ್ಲಿ 2783 ಪೈಕಿ 1893 (ಶೇ.68.02), ಹುನಗುಂದ ತಾಲೂಕಿನಲ್ಲಿ 5085 ಪೈಕಿ 4108 (ಶೇ.80.79), ಜಮಖಂಡಿ ತಾಲೂಕಿನಲ್ಲಿ 7725 ಪೈಕಿ 6440 (ಶೇ.83.37) ಹಾಗೂ ಮುಧೋಳ ತಾಲೂಕಿನಲ್ಲಿ 5060 ಪೈಕಿ 4204 (ಶೇ.83.08) ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಎಂದು ಬಿ.ಕೆ.ನಂದನೂರ ತಿಳಿಸಿದ್ದಾರೆ.