ಕ್ರಿಕೆಟ್‌: ಹಾತೂರು ಚಾಂಪಿಯನ್, ಹಾಲುಗುಂದ ರನ್ನರ್ಸ್

| Published : May 09 2024, 01:01 AM IST

ಸಾರಾಂಶ

21ನೇ ವರ್ಷದ ಕೊಡಗು ಹೆಗ್ಗಡೆ ಸಮಾಜದ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 21ನೇ ವರ್ಷದ ಕೊಡಗು ಹೆಗ್ಗಡೆ ಸಮಾಜದ ಕ್ರೀಡಾಕೂಟಕ್ಕೆ ಇತ್ತೀಚೆಗೆ ವರ್ಣರಂಜಿತ ತೆರೆ ಎಳೆಯಲಾಯಿತು.

ಮೂರು ದಿನಗಳವರೆಗೆ ನಡೆದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಹಾತೂರು ವಲಯ ತಂಡವು ಹಾಲುಗುಂದ ವಲಯ ತಂಡದ ವಿರುದ್ಧ 2 ರನ್‌ಳಿಂದ ಜಯಭೇರಿ ಬಾರಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಗೆಲುವಿಗಾಗಿ ಉತ್ತಮ ಹೋರಾಟ ನೀಡಿದ ಹಾಲುಗುಂದ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಟಾಸ್ ಗೆದ್ದು ಹಾಲುಗುಂದ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಹಾತೂರು ತಂಡ ನಿಗದಿತ 8 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ನಿತಿನ್ 28 , ಸಚಿನ್ 30 ರನ್ ಗಳಿಸಿ ಮಿಂಚಿದರು. ಹಾಲುಗುಂದ ಪರ ಸುಜನ್ 1 ವಿಕೆಟ್ ಪಡೆದರು. ಗೆಲ್ಲಲು 73 ರನ್‌ಗಳ ಗುರಿ ಬೆನ್ನಟ್ಟಿದ ಹಾಲುಗುಂದ ತಂಡ ನಿಗದಿತ ಓವರ್ ಗಳಲ್ಲಿ 70 ರನ್ ಗಳಿಸಿ ಸೋಲನುಭವಿಸುವ ಮೂಲಕ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ತಂಡದ ಪರ ಶ್ರೇಯಸ್ 22, ಅವಿನಾಶ್ 20 ರನ್ ಗಳಿಸಿದರು. ವಿಜೇತ ತಂಡದ ಪರ ಜತನ್ ಮತ್ತು ಪವನ್ ತಲಾ 1 ವಿಕೆಟ್ ಪಡೆದುಕೊಂಡರು.ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕೊಂಗೆಪಂಡ ಸಚಿನ್, ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಕೊಂಗೆಪಂಡ ನಿತಿನ್, ಬೆಸ್ಟ್ ಬೌಲರ್ ಆಗಿ ಪಂದಿಕಂಡ ಶ್ರೇಯಸ್ ಪ್ರಶಸ್ತಿ ಪಡೆದುಕೊಂಡರು.

ಥ್ರೋಬಾಲ್: ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಬಿಟ್ಟಂಗಾಲ ತಂಡ, ಪಾರಾಣೆ ತಂಡದ ವಿರುದ್ಧ ಜಯ ಸಾಧಿಸಿ ವಿನ್ನರ್ಸ್ ಸ್ಥಾನ ಪಡೆದು ಕೊಂಡರೆ, ಪಾರಾಣೆ ತಂಡ ರನ್ನರ್ಸ್ ಆಫ್ ಸ್ಥಾನ ಪಡೆದು ಕೊಂಡಿತು.

ಹಗ್ಗ ಜಗ್ಗಾಟ: ತೀವ್ರ ಜಿದ್ದಾ ಜಿದ್ದಿಯಿಂದ ಕೂಡಿದ್ದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್‌ನಲ್ಲಿ ಹಾಲುಗುಂದ ತಂಡ ಬೆಟ್ಟಗೇರಿ ತಂಡವನ್ನು ಸೋಲಿಸಿ ವಿನ್ನರ್ಸ್ ಸ್ಥಾನ ಪಡೆದುಕೊಂಡಿತು. ಬೆಟ್ಟಗೇರಿ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಮಹಿಳೆಯರ ಹಗ್ಗ ಜಗ್ಗಾಟ ಫೈನಲ್ ನಲ್ಲಿ ಒಂಟಿಯಂಗಡಿ ತಂಡ ಬೆಟ್ಟಗೇರಿ ತಂಡದ ವಿರುದ್ಧ ಜಯಸಾಧಿಸಿ ವಿನ್ನರ್ಸ್ ಸ್ಥಾನ ಪಡೆದು ಕೊಂಡಿತು. ಬೆಟ್ಟಗೇರಿ ತಂಡ ರನ್ನರ್ಸ್ ಸ್ಥಾನ ಪಡೆಯಿತು.

ಜೂನಿಯರ್ ಕ್ರಿಕೆಟ್: ಕ್ರಿಕೆಟ್ ಜೂನಿಯರ್ ವಿಭಾಗದ ಫೈನಲ್‌ನಲ್ಲಿ ಬೆಟ್ಟಗೇರಿ ತಂಡ ಹಾಲುಗುಂದ ತಂಡದ ವಿರುದ್ಧ ಜಯಗಳಿಸಿ ವಿನ್ನರ್ಸ್ ಸ್ಥಾನ ಪಡೆದುಕೊಂಡರೆ, ಹಾಲುಗುಂದ ರನ್ನರ್ಸ್ ಸ್ಥಾನ ಪಡೆದುಕೊಂಡಿತು. ಚೇತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು. ಸಮಾರೋಪ ಸಮಾರಂಭ: ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಕ್ರೀಡೋತ್ಸವ ಸಮಾರೋಪ ಸಮಾರಂಭ ನಡೆಯಿತು.

ಮುಖ್ಯ ಅತಿಥಿ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಂದಿಕಂಡ ದಿನೇಶ್‌ ಮಾತನಾಡಿ, ಜನಾಂಗದ ಒಗ್ಗಟ್ಟನ್ನು ಕಾಪಾಡುವುದು ಕ್ರೀಡೆಯ ಉದ್ದೇಶವಾಗಿದ್ದು, ಜನಾಂಗದ ಹೆಚ್ಚು ಹೆಚ್ಚು ಜನರು ಇಂತಹ ಕಾರ್ಯಕ್ರಮಕ್ಕೆ ಸೇರುವ ಮೂಲಕ ನಮ್ಮ ಜನಾಂಗವನ್ನು ಗುರುತಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭ ಸಮಾಜದ ವತಿಯಿಂದ ವನ್ಯಜೀವಿ ಪಶು ವೈದ್ಯಾಧಿಕಾರಿ ಡಾ. ಮೇಘನಾ ಪೆಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಪ್ರಥಮ, ದ್ವಿತೀಯ ಸ್ಥಾನ ಪಡೆದ ಹೆಗ್ಗಡೆ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಖಜಾಂಚಿ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ಕೊಕ್ಕೆರ ಜಗನ್ನಾಥ್‌, ಚರ್ಮಂಡ ಅಪ್ಪುಣು ಪೂವಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ, ಕೊಂಗೆಪಂಡ ರವಿ, ಮಳ್ಳಡ ಸುತ, ಚಳಿಯಂಡ ಕಮಲ ಉತ್ತಯ್ಯ, ಮೂರಿರ ಶಾಂತಿ, ಪುದಿಯತಂಡ ಜಾಲಿ ಬೆಳ್ಯಪ್ಪ, ಮೂರಿರ ಕುಶಾಲಪ್ಪ, ಕ್ರೀಡಾ ಸಮಿತಿ ನಿರ್ದೇಶಕರಾದ ಕೊಂಗೆಪಂಡ ಕುಟ್ಟಪ್ಪ, ತೋರೆರ ವಿನೀಶ್, ಇನ್ನಿತರ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಇದ್ದರು.

ಕೊಂಗೆಪಂಡ ರಾಜ ಪ್ರಾರ್ಥಿಸಿದರು. ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ವಂದಿಸಿದರು. ಕ್ರೀಡಾ ಸಂಚಾಲಕ ಪಂದಿಕಂಡ ನಾಗೇಶ್ ನಿರೂಪಿಸಿದರು. ತೋರೆರ ಉಮೇಶ್ ಕ್ರಿಕೆಟ್ ವೀಕ್ಷಕ ವಿವರಣೆ ನೀಡಿದರು. ಕ್ರೀಡಾಕೂಟದಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.