ಹೆಣ್ಣುಮಕ್ಕಳ ಮಾನ ಬೀದಿಗೆ ತಂದವರನ್ನು ಗಲ್ಲಿಗೇರಿಸಿ: ಶಾಸಕ

| Published : May 09 2024, 01:11 AM IST

ಹೆಣ್ಣುಮಕ್ಕಳ ಮಾನ ಬೀದಿಗೆ ತಂದವರನ್ನು ಗಲ್ಲಿಗೇರಿಸಿ: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್ ಪ್ರಕರಣದ ಹಲವು ಸಂತ್ರಸ್ತ ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿದ್ದರೆ, ಇನ್ನೂ ಕೆಲವರು ಗಂಡನನ್ನು ಬಿಡುವಂತಾಗಿದೆ. ಇದಕ್ಕೆ ಕಾರಣ ಯಾರು? ನಾಲ್ಕು ಗೋಡೆ ಮಧ್ಯೆ ನಡೆದಿರುವ ಕ್ರಿಯೆ ತಪ್ಪಾಗಿದ್ದರೆ ನೊಂದ ಮಹಿಳೆಯರು ದೂರು ನೀಡುತ್ತಿದ್ದರು. ಆದರೆ ಎಸ್‌ಐಟಿ ಅಧಿಕಾರಿಗಳೇ ಮಹಿಳೆಯನ್ನು ಹುಡಿಕಿಕೊಂಡು ಹೋಗುತ್ತಿದ್ದಾರಂತೆ. ಕೆ.ಆರ್.ನಗರದಲ್ಲಿ ಸಂತ್ರಸ್ತೆಯ ಸಂಬಂಧಿಯೊಬ್ಬರನ್ನು ಬಂಧಿಸಿರುವ ಪೊಲೀಸರು, ರೇವಣ್ಣ ಅವರ ಆಪ್ತ ಸಹಾಯಕನ ತೋಟದಮನೆಯಲ್ಲಿ ಬಂಧಿಸಿದ್ದೇವೆಂದು ಸುಳ್ಳು ಹೇಳುತ್ತಿರುವ ನಿಮಗೆ ಮಾನ ಮಾರ್ಯಾದೆ ಇದೆಯಾ?

ಕನ್ನಡಪ್ರಭ ವಾರ್ತೆ ನಾಗಮಂಗಲ

ಹಾಸನದಲ್ಲಿ ನಡೆದಿರುವ ಪೆನ್‌ಡ್ರೈವ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್‌ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ನೀಚ ಕೃತ್ಯ ನಡೆಸಿರುವವನು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಆತನನ್ನು ಗಲ್ಲಿಗೇರಿಸಿ ಎಂದು ಮಾಜಿ ಶಾಸಕ ಸುರೇಶ್‌ಗೌಡ ಒತ್ತಾಯಿಸಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾಲೂಕು ಜೆಡಿಎಸ್ ವತಿಯಿಂದ ಬುಧವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಾಸನದಲ್ಲಿ ನಡೆದಿರುವ ಪೆನ್‌ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಹೆಣ್ಣು ಮಕ್ಕಳ ಮಾನ ಹರಾಜು ಮಾಡುತ್ತಿರುವ ನೀಚರನ್ನು ಮೊದಲು ಗಲ್ಲಿಗೇರಿಸಬೇಕು. ಈ ಕೆಟ್ಟ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ, ಹೆಚ್ಚುಕಾಲ ಉಳಿಯುವುದಿಲ್ಲ ಎಂದರು.

ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ಅಧಿಕಾರ ಹೋಗಿ ಬೇರೆಯವರು ಸಿಎಂ ಆಗುತ್ತಾರೆಂದು ಸಿದ್ದರಾಮಯ್ಯವರಿಗೆ ಗೊತ್ತಾಗಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸುತ್ತಾರೆ. ಸಾಕ್ಷಿಗಳನ್ನು ನಾಶಪಡಿಸದೇ ತಕ್ಷಣ ಸಿಬಿಐಗೆ ವಹಿಸಬೇಕು. ಎಲ್ಲಿ ಪೆನ್‌ಡ್ರೈವ್‌ಗಳ ಖರೀದಿಯಾಯ್ತು. ಯಾವ ಮಾಲ್‌ಗಳಲ್ಲಿ ಪ್ರಿಂಟ್ ಹಾಕಿಸಿದ್ರು ಹಾಗೂ ಯಾವ ಸ್ಕೂಲ್‌ಗಳಲ್ಲಿ ಸ್ಕೆಚ್ ಹಾಕಿಸಿದರೆಂಬ ಬಗ್ಗೆಯೂ ತನಿಖೆಯಾಗಬೇಕೆಂದು ಆಗ್ರಹಿಸಿದರು.

ಹಾಸನದಲ್ಲಿ ನಡೆದಿರುವ ಪೆನ್‌ಡ್ರೈವ್ ಪ್ರಕರಣ ಸತ್ಯವಾಗಿದ್ದರೆ ಆ ವ್ಯಕ್ತಿಗೆ ಖಂಡಿತ ಶಿಕ್ಷೆಯಾಗಬೇಕು. ಘಟನೆ ನಡೆದಿರುವುದು ನಿಜವಾಗಿದ್ದರೆ ಆ ವ್ಯಕ್ತಿಯನ್ನು ಗಲ್ಲಿಗೇರಿಸಲಿ, ಇದಕ್ಕೆ ಯಾರೂ ಸಹ ಹಸ್ತಕ್ಷೇಪ ಮಾಡುವುದಿಲ್ಲವೆಂದು ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಸಂತ್ರಸ್ತ ಹೆಣ್ಣುಮಕ್ಕಳ ಭಾವಚಿತ್ರಗಳನ್ನು ಇಡೀ ಪ್ರಪಂಚದಾದ್ಯಂತ ಹಂಚಿರುವ ಈ ದುಷ್ಟರು ತಪ್ಪು ಮಾಡಿರುವ ವ್ಯಕ್ತಿಗಿಂತ ದೊಡ್ಡ ಅಪರಾಧ ಮಾಡಿದ್ದಾರೆ ಎಂದು ಡಿಕೆಶಿ ಮತ್ತು ಎಲ್‌ಆರ್‌ಎಸ್ ವಿರುದ್ಧ ಹರಿಹಾಯ್ದರು.

ರಾಜ್ಯದ ಕೆಟ್ಟ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವ ಜೊತೆಗೆ ಪೆನ್‌ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಹಾಗೂ ದೇಶದ ಗೌರವವನ್ನು ಹಾಳು ಮಾಡುತ್ತಿದೆ. ಇಂತಹ ಕೆಟ್ಟ ಸರ್ಕಾರದ ಉಪಮುಖ್ಯಮಂತ್ರಿಗೆ ರಕ್ಷಣೆ ಕೊಡಲು ಮುಂದಾಗಿರುವ ನಿಮಗೆ ಮಾನ, ಮರ್ಯಾದೆ ಇಲ್ಲವೇ ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಯಾರನ್ನು ಸಿಲುಕಿಸಿ ಯಾರನ್ನು ಬಂಧಿಸಬೇಕೆಂದು ಪೊಲೀಸರನ್ನು ಜೀತದಾಳು ಮಾಡಿಕೊಂಡಿರುವ ರಾಜ್ಯ ಸರ್ಕಾರವನ್ನು ನಂಬಲು ಆಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೇ ಈ ಕೆಲಸ ನಡೆದಿಲ್ಲ. ಮಹಾನ್ ನಾಯಕ ರಾಹುಲ್‌ಗಾಂಧಿ 400 ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾನೆ. ಅಮೆರಿಕಾದಲ್ಲಿ ಈತನದ್ದೇ ಬೇಕಾದಷ್ಟು ಬಿದ್ದಿವೆ. ಯಾವ ಆಧಾರದ ಮೇಲೆ 400 ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ ಎಂದು ಹೇಳುತ್ತಾನೆ. ಎಚ್ಡಿ ರೇವಣ್ಣನನ್ನು ಲಂಡನ್‌ಗೆ ಕರೆದುಕೊಂಡು ಹೋಗಿದ್ದೆ ಅಂತ ಇನ್ನೊಬ್ಬ ಹೇಳುತ್ತಾನೆ. ಅಧಿಕಾರಕ್ಕೋಸ್ಕರ ಏನನ್ನಾದರೂ ಮಾಡ್ತಿಯಾ ಅಂತ ಗೊತ್ತು ಎಂದು ಎಐಸಿಸಿ ವರಿಷ್ಠ ರಾಹುಲ್‌ಗಾಂಧಿ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು ಹಾಗೂ ಮನ್‌ಮುಲ್ ನಿರ್ದೇಶಕ ಕೋಟಿ ರವಿ ಮಾತನಾಡಿದರು.

ಎಸ್ಐಟಿ, ಪೊಲೀಸರ ವಿರುದ್ಧ ಹರಿಹಾಯ್ದ ಶಾಸಕ:

ಈ ದೇಶದ ಒಬ್ಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರತಿಕೃತಿಗೆ ಕಾಂಗ್ರೆಸ್ ಪಕ್ಷದವರು ಚಪ್ಪಲಿಯಿಂದ ಹೊಡೆಯುವಾಗ ಪೊಲೀಸರು ಏನು ಕತ್ತೆ ಕಾಯುತ್ತಿದ್ದರಾ? ಪೆನ್‌ಡ್ರೈವ್ ಹಂಚಿರುವ ಡಿ.ಕೆ.ಶಿವಕುಮಾರ್ ನಿಮಗೆ ದೇವರಾ? ಅಥವಾ ಮಹಾನ್ ಪುಣ್ಯಾತ್ಮನಾ? ಏನಂದುಕೊಂಡಿದ್ದೀರಿ? ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದಾನೆಂಬ ಕಾರಣಕ್ಕೆ ಅವನ ಬೂಟು ನೆಕ್ಕುತ್ತಿದ್ದಿರಾ? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ಲವೇ? ಎಚ್ಚರಿಕೆ ಇರಲಿ ಇದು ಸುರೇಶ್‌ಗೌಡ ಇರುವ ಜಾಗ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ನಾನು ನಿಮ್ಮನ್ನು ಅವರಿಗಿಂತಲೂ ಕಡೆಯಾಗಿ ನೋಡುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಪೊಲೀಸರ ವಿರುದ್ಧ ಹರಿಹಾಯ್ದರು.

ಪೆನ್‌ಡ್ರೈವ್ ಪ್ರಕರಣದ ಹಲವು ಸಂತ್ರಸ್ತ ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿದ್ದರೆ, ಇನ್ನೂ ಕೆಲವರು ಗಂಡನನ್ನು ಬಿಡುವಂತಾಗಿದೆ. ಇದಕ್ಕೆ ಕಾರಣ ಯಾರು? ನಾಲ್ಕು ಗೋಡೆ ಮಧ್ಯೆ ನಡೆದಿರುವ ಕ್ರಿಯೆ ತಪ್ಪಾಗಿದ್ದರೆ ನೊಂದ ಮಹಿಳೆಯರು ದೂರು ನೀಡುತ್ತಿದ್ದರು. ಆದರೆ ಎಸ್‌ಐಟಿ ಅಧಿಕಾರಿಗಳೇ ಮಹಿಳೆಯನ್ನು ಹುಡಿಕಿಕೊಂಡು ಹೋಗುತ್ತಿದ್ದಾರಂತೆ. ಕೆ.ಆರ್.ನಗರದಲ್ಲಿ ಸಂತ್ರಸ್ತೆಯ ಸಂಬಂಧಿಯೊಬ್ಬರನ್ನು ಬಂಧಿಸಿರುವ ಪೊಲೀಸರು, ರೇವಣ್ಣ ಅವರ ಆಪ್ತ ಸಹಾಯಕನ ತೋಟದಮನೆಯಲ್ಲಿ ಬಂಧಿಸಿದ್ದೇವೆಂದು ಸುಳ್ಳು ಹೇಳುತ್ತಿರುವ ನಿಮಗೆ ಮಾನ ಮಾರ್ಯಾದೆ ಇದೆಯಾ? ಎಂದು ಎಸ್‌ಐಟಿ ಅಧಿಕಾರಿಗಳ ವಿರುದ್ಧ ಗುಡುಗಿದರು.