ಗ್ಯಾರಂಟಿ, ಮಹಿಳೆಯರ ಬಗ್ಗೆ ಎಚ್‌ಡಿಕೆ ಲಘು ಮಾತು: ಸಚಿವ ಚಲುವರಾಯಸ್ವಾಮಿ

| Published : Apr 27 2024, 01:19 AM IST

ಗ್ಯಾರಂಟಿ, ಮಹಿಳೆಯರ ಬಗ್ಗೆ ಎಚ್‌ಡಿಕೆ ಲಘು ಮಾತು: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಗ್ಯಾರಂಟಿ ಮೇಲೆ ಜನರಿಗೆ ವಿಶ್ವಾಸ ಇದೆ. ಕುಮಾರಸ್ವಾಮಿ ಅವರು ಗ್ಯಾರಂಟಿ ನಿಲ್ಲಿಸುವ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿ ಕೊಡುವುದು ತಪ್ಪು, ಮಹಿಳೆಯರು ದಾರಿ ತಪ್ಪಿದ್ದಾರೆ ಎಂದೆಲ್ಲಾ ಲಘುವಾಗಿ ಮಾತನಾಡಿದ್ದಾರೆ. ಅಂತಹವರನ್ನು ಜಿಲ್ಲೆಯ ಜನರು ಹೇಗೆ ಒಪ್ಪಿಕೊಳ್ಳುತ್ತಾರೆ..?

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ಯಾರಂಟಿ ಯೋಜನೆಗಳು ಮತ್ತು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನರು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಕುಟುಂಬದವರೊಂದಿಗೆ ಮತ ಚಲಾಯಿಸಿದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಮೇಲೆ ಜನರಿಗೆ ವಿಶ್ವಾಸ ಇದೆ. ಕುಮಾರಸ್ವಾಮಿ ಅವರು ಗ್ಯಾರಂಟಿ ನಿಲ್ಲಿಸುವ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿ ಕೊಡುವುದು ತಪ್ಪು, ಮಹಿಳೆಯರು ದಾರಿ ತಪ್ಪಿದ್ದಾರೆ ಎಂದೆಲ್ಲಾ ಲಘುವಾಗಿ ಮಾತನಾಡಿದ್ದಾರೆ. ಅಂತಹವರನ್ನು ಜಿಲ್ಲೆಯ ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಮಂಡ್ಯ ಜಿಲ್ಲೆಗೆ ಒಂದು ಶಾಶ್ವತ ಯೋಜನೆ ಕೊಟ್ಟಿಲ್ಲ. ಅವರ ತಂದೆ ಕೂಡ ಸಿಎಂ, ಪಿಎಂ ಆಗಿದ್ದರೂ ಏನೂ ಮಾಡಿಲ್ಲ. ಹಾಸನ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದರು. ಮಂಡ್ಯ, ತುಮಕೂರಿನ ಬಗ್ಗೆ ಕಾಳಜಿ ತೋರಲಿಲ್ಲವೆಂದು ದೂರಿದರು.

ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡುತ್ತಾರೆ ಅಷ್ಟೇ. ವೈಯಕ್ತಿಕವಾಗಿ ಕುಮಾರಸ್ವಾಮಿ ಕೊಡುಗೆ ಮಂಡ್ಯ ಜಿಲ್ಲೆಗೆ ಶೂನ್ಯ. ಒಕ್ಕಲಿಗರ ನಾಯಕ ನಾನೇ ಎಂದು ಹೇಳಿಕೊಳ್ಳುವವರು ಒಕ್ಕಲಿಗರಿಗೋಸ್ಕರ ಏನೂ ಮಾಡಲಿಲ್ಲ. ರಾಜ್ಯಸಭೆ, ವಿಧಾನಪರಿಷತ್‌ಗೆ ಒಕ್ಕಲಿಗರೊಬ್ಬರನ್ನು ಆರಿಸಿ ಕಳುಹಿಸಲಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಿಲ್ಲ ಎಂದು ಟೀಕಿಸಿದರು.

ಪುಟ್ಟರಾಜು ಕುಮಾರಸ್ವಾಮಿ ಹೇಳಿದಂತೆ ಕೇಳಿದರೆ, ಕುಮಾರಸ್ವಾಮಿ ದೇವೇಗೌಡರು ಹೇಳಿದಂತೆ ಕೇಳುತ್ತಾರೆ. ಜೆಡಿಎಸ್ನ್‌ವರು ನೀರಾವರಿ ಯೋಜನೆಗೆ ಒತ್ತು ಕೊಟ್ಟಿಲ್ಲ. ನಾವು ಕೃಷಿ ವಿವಿ ಮಾಡಿದ್ದೇವೆ. ಮೆಡಿಕಲ್ ಕಾಲೇಜು ತಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.

ಕುಮಾರಸ್ವಾಮಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವುದಾಗಿ ಹೇಳಿರುವುದನ್ನು ನೋಡಿದರೆ ಬೇಸರವಾಗುವ ಜೊತೆಗೆ ಇಷ್ಟೊಂದು ಸುಳ್ಳು ಹೇಳ್ತಾರೆಂತ ನೋವಾಗುತ್ತದೆ. ಕಾವೇರಿ ವಿಷಯದಲ್ಲಿ ದೇವೇಗೌಡರು ಪ್ರಯತ್ನ ಮಾಡಿದ್ದಾರೆ. ಆದರೆ, ನ್ಯಾಯ ಸಿಕ್ಕಿಲ್ಲ. ಎಲ್ಲಾ ಮುಗಿದು ಪ್ರಾಧಿಕಾರ ರಚನೆಯಾಗಿ ಹೋಗಿದೆ. ಅಂತಿಮ ತೀರ್ಪೂ ಹೊರಬಿದ್ದಿದೆ. ಎಲ್ಲಾ ಕಾನೂನು ವ್ಯಾಪ್ತಿಯಲ್ಲಿರುವಾಗ ನಾನು ಸಂಸದನಾಗಿ ಪರಿಹಾರ ಸೂಚಿಸುತ್ತೇನೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪರವಾಗಿ ಮಹಿಳೆಯರ ಮತ ಹೆಚ್ಚಿದೆ. ಹಾಗಾಗಿ ನಾವು ಗೆಲುವಿನ ವಿಶ್ವಾಸದಲ್ಲಿದ್ದೇವೆ. ನೂರಕ್ಕೆ ನೂರರಷ್ಟು ನಾವೇ ಗೆಲ್ಲುತ್ತೇವೆ. ಅಂತರ ನಿರ್ಧಾರ ಮಾಡುವವರು ಜನರು, ಎಲ್ಲವನ್ನೂ ಅವರಿಗೇ ಬಿಟ್ಟಿದ್ದೇವೆ ಎಂದು ಮಾತು ಮುಗಿಸಿದರು.