ಗಿಫ್ಟ್ ಕೂಪನ್: ಎಚ್ಡಿಕೆ - ಡಿಕೆಶಿ ವಾಕ್ಸಮರ

| Published : Apr 27 2024, 01:00 AM IST / Updated: Apr 27 2024, 06:01 AM IST

ಸಾರಾಂಶ

ರಾಮನಗರ: ಮತದಾರರಿಗೆ ಗಿಫ್ಟ್ ಕೂಪನ್ ಹಂಚಿಕೆ ಮಾಡಿರುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ವಾಕ್ಸಮರ ನಡೆದಿದೆ.

ರಾಮನಗರ: ಮತದಾರರಿಗೆ ಗಿಫ್ಟ್ ಕೂಪನ್ ಹಂಚಿಕೆ ಮಾಡಿರುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ವಾಕ್ಸಮರ ನಡೆದಿದೆ.

ಕಾರ್ಡ್ ಹಂಚಿಕೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ ಸಂಪೂರ್ಣ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಅದು ಗಿಫ್ಟ್ ಕಾರ್ಡ್‌ ಅಲ್ಲ, ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಎಂದು ವಿಪಕ್ಷಗಳ ಆರೋಪವನ್ನು ಅಲ್ಲಗಳೆದಿದ್ದಾರೆ.

ಬೆಳ್ಳಂಬೆಳಿಗ್ಗೆ ಗಿಫ್ಟ್ ಕೂಪನ್ ವಿತರಣೆ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಗಿಫ್ಟ್‌ ಕೂಪನ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೈ ಮತ್ತು ಮೈತ್ರಿ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಶುಕ್ರವಾರ ಬೆಳ್ಳಂಬೆಳಿಗ್ಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಮನೆಬಾಗಿಲು ತಟ್ಟಿ ರಾಜಕೀಯ ಪಕ್ಷದ ಕಾರ್ಯಕರ್ತರು ಗಿಫ್ಟ್ ಕೂಪನ್ ವಿತರಣೆ ಮಾಡಿದರು.

ಕೆಲವೆಡೆ ಗಿಫ್ಟ್‌ಕಾರ್ಡ್ ಹಂಚಿಕೆಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ಕೆಲವೆಡೆ ಸಾರ್ವಜನಿಕರು ಈಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಾರೋಹಳ್ಳಿಯಲ್ಲಿ ಕಾರ್ಡ್ ಹಂಚುತ್ತಿದ್ದ ಕಾರನ್ನು ತಡೆದು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದರು.

ಆಯಾ ಕ್ಷೇತ್ರದ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರ ಭಾವಚಿತ್ರದೊಂದಿಗೆ ಅಭ್ಯರ್ಥಿ, ಜಿಲ್ಲಾಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರ ಪೋಟೋವನ್ನು ಒಳಗೊಂಡ ಕ್ಯುಆರ್ ಕೋಡ್ ಇರುವ ಕಾರ್ಡ್‌ಗಳನ್ನು ಹಂಚಿಕೆ ಮಾಡಿದ್ದು, ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸಹ 5 ಸಾವಿರ ರುಪಾಯಿ ಮೌಲ್ಯದ ಉಡುಗೊರೆ ಕೊಡುವುದಾಗಿ ಹೇಳಿ ಕಾರ್ಡ್ ಹಂಚಿಕೆ ಮಾಡಿ ಏನೂ ಕೊಡಲಿಲ್ಲ. ಇದೀಗ ಮತ್ತೆ ಹಂಚಿಕೆ ಮಾಡುತ್ತಿದ್ದಾರೆ ಎಂದು ವಿಪಕ್ಷದವರು ಆರೋಪಿಸಿದ್ದಾರೆ. ಈ ಸಂಬಂಧ ಕೆಲವೆಡೆ ದೂರುಗಳು ಸಹ ಸಲ್ಲಿಕೆಯಾಗಿವೆ.

ಕೆಲವೆಡೆ ಉಡುಗೊರೆ :

ಕೆಲ ಗ್ರಾಮಗಳಲ್ಲಿ ಬೆಳ್ಳಿಯ ಅರಿಶಿಣ, ಕುಂಕುಮದ ಬಟ್ಟಲುಗಳನ್ನು ಹಂಚಿಕೆ ಮಾಡಲಾಗಿದೆ. ಜತೆಗೆ ಕುಂಕುಮ ಹಾಗೂ ಮಂತ್ರಾಕ್ಷತೆಯ ಒಂದು ಪ್ಯಾಕ್‌ಗಳನ್ನು ಸಹ ನೀಡಿರುವುದು ವಿಶೇಷ. ರಾಮನಗರದ ಕೆಂಪೇಗೌಡನದೊಡ್ಡಿ ಗ್ರಾಮದ ಪ್ರತಿ ಮನೆಗೂ ಈ ಉಡುಗೊರೆಗಳು ತಲುಪಿವೆ. ಸ್ಥಳೀಯ ಮುಖಂಡರುಗಳೇ ಈ ರೀತಿಯ ಉಡುಗೊರೆಗಳನ್ನು ಶುಕ್ರವಾರ ಬೆಳಿಗ್ಗೆ ಹಂಚಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವೆಡೆ 500 ರು.ನಿಂದ 1 ಸಾವಿರ ರು. ವರೆಗೆ ಮತದಾರರಿಗೆ ಹಣ ಹಂಚಿಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡೂ ಕಡೆಯ ಮುಖಂಡರು ಹಣ ಹಂಚಿಕೆ ಮಾಡಿದ್ದಾರೆ.

ಗಿಫ್ಟ್ ಕೂಪನ್ ನಲ್ಲಿ ಏನಿದೆ ?

ಕೂಪನ್ ನ ಮುಖ ಭಾಗದಲ್ಲಿ ಮೇಲೆ ಕಾಂಗ್ರೆಸ್ ಗ್ಯಾರಂಟಿ ನುಡಿದಂತೆ ನಡೆದ ಸರ್ಕಾರ ಎಂದಿದ್ದು, ಅದರಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹ ಜ್ಯೋತಿ, ಯುವನಿಧಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ವಿವರ, ಅದರ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವಚಿತ್ರ ಹಾಗೂ ಕ್ಯೂಆರ್ ಕೋಡ್ ಇದೆ.

ಕಾರ್ಡ್ ನ ಹಿಂಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ - ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಎಂಬ ಬರಹವಿದ್ದು, ಇದರಲ್ಲಿ 1 ಲಕ್ಷ ವೇತನ - ಯುವ ನ್ಯಾಯ, ಪ್ರತಿ ವರ್ಷ 1 ಲಕ್ಷ - ಮಹಿಳಾ ನ್ಯಾಯ, ಸಾಲಮನ್ನಾ - ರೈತ ನ್ಯಾಯ, ದಿನಕ್ಕೆ 400 ರುಪಾಯಿ - ಶ್ರಮಿಕ ನ್ಯಾಯ, ಜಾತಿಗಣತಿ - ಪಾಲುದಾರಿಕೆ ನ್ಯಾಯ ಘೋಷಣೆಗಳಿವೆ.

ಬಸ್‌ಗಳಿಗೆ ಪರದಾಟ:

ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 40 ರಿಂದ 50 ಬಸ್ಸುಗಳನ್ನು ಬಳಕೆ ಮಾಡಿದ ಪರಿಣಾಮ ಬಸ್‌ಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮೀಣ ಪ್ರದೇಶಕ್ಕೆ ಬಸ್‌ಸೌಲಭ್ಯವಿಲ್ಲದೆ ಜನರು ತಿರುಗಾಡಲು ಪರದಾಡುವಂತಾಯಿತು. ಬೆಂಗಳೂರು-ಮೈಸೂರು ನಡುವೆ ಸಹ ಬಸ್ಸುಗಳು ಕಡಿಮೆ ಪ್ರಮಾಣದಲ್ಲಿ ಸಂಚಾರ ಮಾಡಿದ ಹಿನ್ನೆಲೆಯಲ್ಲಿ ಬಸ್ಸುಗಳು ಕಿಕ್ಕಿರಿದು ತುಂಬಿದ್ದವು.