ವಿಜೃಂಭಣೆಯ ಬೈಲೂರು ಮಾರಮ್ಮ ಜಾತ್ರಾ ಮಹೋತ್ಸವ

| Published : May 09 2024, 01:02 AM IST

ವಿಜೃಂಭಣೆಯ ಬೈಲೂರು ಮಾರಮ್ಮ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹನುರು ತಾಲೂಕಿನ ಬೈಲೂರು ಗ್ರಾಮದೇವತೆಯ ಮಾರಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಬೈಲೂರು ಗ್ರಾಮದೇವತೆಯ ಮಾರಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಹನೂರು ತಾಲೂಕಿನ ಕಾಡಂಚಿನ ಗ್ರಾಮಗಳಾದ ಬೈಲೂರು, ಹೊಸಪಾಳ್ಯ, ಕೆರೆದೊಡ್ಡಿ, ಗಾಂಧಿನಗರ , ಅಂಟಿಗಾಪಾಳ್ಯ ಐದು ಗ್ರಾಮಗಳಿಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ದೂರದ ಊರುಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೇಸಿಗೆ ಮುಗಿಯುತ್ತಿರುವ ಹಾಗೂ ಮುಂಗಾರು ಮಳೆಯ ಆಗಮನದ ಮುನ್ನಾ ಯುಗಾದಿ ಹಬ್ಬದ ನಂತರ ಬಹಳ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಯುವ ಜಾತ್ರಾ ಮಹೋತ್ಸವ ಇದಾಗಿದೆ.

ಬೈಲೂರು ಮಾರಮ್ಮ ಈ ಭಾಗದಲ್ಲಿ ಪ್ರಖ್ಯಾತಿ ಪಡೆದಿದೆ. ಪ್ರತೀ ವರ್ಷ ಯುಗಾದಿ ಹಬ್ಬದ ನಂತರ 2 ದಿನಗಳ ಕಾಲ ನಡೆಯುವಂತಹ ಜಾತ್ರಾ ಮಹೋತ್ಸವವು ಇಂದು ಅದ್ದೂರಿಯಾಗಿ ನೆರವೇರಿತು. ಎಳೆನೀರು ಮಜ್ಜನ...!

ಬೈಲೂರು ಮಾರಮ್ಮನ ಜಾತ್ರಾ ಮಾಹೋತ್ಸವಕ್ಕೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಭಕ್ತಿಯಿಂದ ಎಳೆನೀರು ಮಜ್ಜನದ ತಂಪು ಸೇವೆಗೈಯುವುದು ಇಲ್ಲಿನ ಸಂಪ್ರದಾಯವಾಗಿದೆ. ಮಂಗಳವಾರ ರಾತ್ರಿ ಗುಡ್ಡೆ ಮಾರಮ್ಮನ ದೇವಾಲಯದ ಮುಂಭಾಗ ಕಾಡಂಚಿ‌ನ ಗ್ರಾಮಗಳಲ್ಲಿನ ಸೋಲಿಗರು ಭಕ್ತಿಯ ನೃತ್ಯ ಪ್ರದರ್ಶನಗೈದರು. ನಂತರ ಇಡೀ ರಾತ್ರಿ ಜಾಗರಣೆಗೈದು ಮುಂಜಾನೆ 5 ಗಂಟೆ ವೇಳೆಯಲ್ಲಿ ಗುಡ್ಡೆ ಮಾರಮ್ಮ ಹಾಗೂ ಮಾರಮ್ಮ ಇಬ್ಬರೂ ದೇವರು ಹಿಂಬದಿ ಚಲಿಸುತ್ತಾ ಭಕ್ತರೊಂದಿಗೆ ಸಾಗಿದರು.

ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ಎಳೆನೀರು ಮಜ್ಜನದ ಮೂಲಕ ಮಾರಮ್ಮ ದೇವರಿಗೆ ಹರಕೆ ತೀರಿಸಿ ತಂಪುಗೈದರು. ನಂತರ ಬೈಲೂರು ಮಾರಮ್ಮನ ಸನ್ನಿದಿಗೆ ಸೇರುವ ಸನ್ನಿವೇಶ ಮೂಡಿತು. ಈ ವೇಳೆ ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ವೇಳೆ ಪವಾಡ ಪ್ರದರ್ಶನ ನಡೆಯಿತು. ನೆರೆದಿದ್ದ ಭಕ್ತರು ಎಳೆನೀರು, ಹೂವು ಹಣ್ಣು ಕಾಯಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಕ್ಕೆ ಬೈಲೂರು, ಹೊಸಪಾಳ್ಯ, ಕೆರೆದೊಡ್ಡಿ, ಗಾಂಧಿನಗರ , ಅಂಟಿಗಾಪಾಳ್ಯ ಐದು ಗ್ರಾಮಗಳ ಗೌಡರುಗಳು ಮುಖಂಡರು ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು.